ಡಾ| ಶ್ಯಾಮಾಪ್ರಸಾದ್ ಮುಖರ್ಜಿ ಕೊನೆಯ ದಿನಗಳು

  64
  0

  ”ಯಾವ ಮಗ ಧೈರ್ಯವಂತನಾದವನು ಹಾಗೂ ಸಜ್ಜನನಾದವನನ್ನು ಕಳೆದುಕೊಳ್ಳುವುದು ಒಬ್ಬ ತಾಯಿಗೆ ಭರಿಸಲಾಗದ ದುರಂತ. ಅಂತಹ ಮಗನ ದುರಂತ ಸಾವಿನ ಹಿಂದಿನ ಕತೆಯನ್ನು ಬರೆದಿರುವ ಪುಸ್ತಕಕ್ಕೆ ಮುನ್ನುಡಿ ಬರೆಯುವುದು ಆ ದುರಂತವು ಮತ್ತಷ್ಟು ನೋವನ್ನುಂಟುಮಾಡುವುದು ಆದರೂ ನಾನು ಕಣ್ಣೀರಿನಲ್ಲಿ ಅದಿದ್ದ ಪೆನ್ನಿನಿಂದ ಬರೆಯುತ್ತಿದ್ದೇನೆ” ಎಂದು ಶ್ಯಾಮಾಪ್ರಸಾದ್ ಮುಖರ್ಜಿಯವರ ತಾಯಿ ಜೊಗೊಮಾಯಾ ದೇವಿಯವರು ತಮ್ಮ ಮತ್ತೊಬ್ಬ ಪುತ್ರ ಉಮಾಪ್ರಸಾದ್ ಮುಖರ್ಜಿಯವರು ಅಧಿಕೃತ ದಾಖಲೆಯ ಆಧಾರದ ಮೇಲೆ ತಮ್ಮ ಅಣ್ಣನ ಕೊನೆಯ ದಿನಗಳ ಕುರಿತು ಬರೆದಿದ್ದ ಪುಸ್ತಕದ ಮುನ್ನುಡಿಯಲ್ಲಿ ಆ ತಾಯಿ ತಮ್ಮ ದುಃಖವನ್ನು ಹೊರಹಾಕುತ್ತಾರೆ.

  ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಮತ್ತು ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರುರವರ ಷಡ್ಯಂತರದಿಂದ 1953 ಜೂನ್ 23 ರಂದು ಶ್ರಿನಗರದಲ್ಲಿ ಅನುಮಾನಾಸ್ಪದವಾಗಿ ನಿಧನ ಹೊಂದಿದ್ದ ಧೀಮಂತ ಪುತ್ರನೇ ಜನಸಂಘದ ಸಂಸ್ಥಾಪಕ ಅಪ್ರತಿಮ ರಾಷ್ಟ್ರೀಯವಾದಿ ರಾಷ್ಟ್ರದ ಸೇವೆಗೆ ಸಮರ್ಪಿಸಿಕೊಂಡಿದ್ದ ಮಹಾನ್ ದೇಶಭಕ್ತ ಡಾ|ಶ್ಯಾಮಾಪ್ರಸಾದ್ ಮುಖರ್ಜಿಯವರು. ಒಂದು ದೇಶದಲ್ಲಿ ಎರಡು ಸಂವಿಧಾನ ಎರಡು ಪ್ರಧಾನ್ ಎರಡು ಬಾವುಟ ನಡೆಯುವುದಿಲ್ಲ ಎಂದು ಸಿಂಹರ್ಘಜನೆ ಮಾಡಿದ್ದ ಶ್ಯಾಮಾಪ್ರಸಾದ್ ಮುಖರ್ಜಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾ ಪರಿಷತ್ತಿನ ಪಂ. ಪ್ರೇಮ್‍ನಾಥ್ ಡೋಗ್ರಾ ರವರ ನೇತೃತ್ವದಲ್ಲಿ ಜಮ್ಮು ಕಾಶ್ಮೀರ ಭಾರತದೊಂದಿಗೆ ಸಂಪೂರ್ಣ ವಿಲೀನವಾಗಬೇಕು ಎಂದು ಪ್ರಬಲವಾದ ಚಳುವಳಿಯು ನಡೆದಿರುತ್ತದೆ.ಪೊಲೀಸರ ಗುಂಡಿಗೆ 30 ಸತ್ಯಾಗ್ರಹಿಗಳು ಸಾವನ್ನಪ್ಪಿರುತ್ತಾರೆ.

  ಶೇಖ್‍ಅಬ್ದುಲ್ಲಾ ಪೊಲೀಸ್ ದೌರ್ಜನ್ಯದ ಮೂಲಕ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ತೊಡಗಿರುತ್ತಾರೆ. ಡಾ|ಮುಖರ್ಜಿಯವರು ಜಮ್ಮುವಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಶಾಂತಿ ಸ್ಥಾಪಿಸಲು ಜಮ್ಮುವಿಗೆ ಭೇಟಿ ನೀಡಲು ನಿಶ್ಚಯಿಸುತ್ತಾರೆ.

  ಮೇ8 ರಂದು ದೆಹಲಿಯಿಂದ ಜಮ್ಮುವಿಗೆ ಪಂಜಾಬ್ ಮಾರ್ಗವಾಗಿ ಪ್ರಯಾಣ ಆರಂಭವಾಗುತ್ತದೆ. ದಾರಿಯುದ್ದಕ್ಕೂ ಇವರಿಗೆ ಅಭೂತಪೂರ್ವ ಜನಬೆಂಬಲ ದೊರೆಯುತ್ತದೆ. ಮೇ10 ರಂದು ಗುರುದಾಸಪುರ ತಲುಪಿದಾಗ ಅಲ್ಲಿನ ಜಿಲ್ಲಾಧಿಕಾರಿಯು ಇವರನ್ನು ಮಾಧೋಪುರ ಗಡಿಯವರೆಗೆ ತಲುಪಿಸುತ್ತಾರೆ. ಮುಂದೆ ಜಮ್ಮು ಪ್ರವೇಶಿಸಲು ಪರ್ಮಿಟ್ ಅಗತ್ಯವಿರುತ್ತದೆ ಆದರೆ ಜಿಲ್ಲಾಧಿಕಾರಿಯು ಶ್ಯಾಮಾಪ್ರಸಾದ್ ಮುಖರ್ಜಿಯವರಿಗೆ ಕೇಂದ್ರ ಸರ್ಕಾರ ಜಮ್ಮು ಪ್ರವೇಶಿಸಲು ಅನುಮತಿ ನೀಡಿದೆ ಎಂದು ತಿಳಿಸುತ್ತಾರೆ. ಲಿಖಿತ ಆದೇಶವನ್ನು ಕೋರಿದಾಗ ಮುಂದೆ ಅದನ್ನು ತಲುಪಿಸಲಾಗುವುದು ಎಂದು ಆಶ್ವಾಸನೆ ನೀಡುತ್ತಾರೆ. ಡಾ|ಮುಖರ್ಜಿಯವರು ರಾವಿ ಸೇತುವೆಯನ್ನು ಅರ್ಧ ದಾಟಿರುವಾಗ ಕತುವಾ ಜಿಲ್ಲಾ ಪೊಲೀಸ್ ವರಿಷ್ಠ ಅಜೀಜ್ ಪರ್ಮಿಟ್ ಇಲ್ಲದ ಕಾರಣ ನಿಮ್ಮನ್ನು ಬಂಧಿಸುತ್ತಿದ್ದೇವೆ ಎಂದು ಡಾ|ಮುಖರ್ಜಿಯವರನ್ನು ಮತ್ತು ಇವರ ಜೊತೆ ಇದ್ದ ಗುರುದತ್ ಮತ್ತು ಟೇಕ್ ಚಂದ್ ಎಂಬ ಇಬ್ಬರು ಪ್ರಮುಖ ಕಾರ್ಯಕರ್ತರನ್ನೂ ಬಂಧಿಸಿ ಶ್ರೀನಗರಕ್ಕೆ ಕರೆದೊಯ್ಯುತ್ತಾರೆ.

  Prakash Sesharaghavachar

  ಜನಸಂಘದ ಸಂಸ್ಥಾಪಕ ಡಾ।ಶ್ಯಾಮಾ ಪ್ರಸಾದ್ ಮುಖರ್ಜಿಯವರು ಕಾಶ್ಮೀರವನ್ನು ಭಾರತದಲ್ಲಿ ಸಂಪೂರ್ಣವಾಗಿ ವಿಲೀನಗೊಳಿಸಲು ತಮ್ಮ ಪ್ರಾಣವನ್ನೆ ಕಳೆದುಕೊಂಡರು. ಇಂದು ಅವರು ಹುತಾತ್ಮರಾಗಿ 68 ವರ್ಷವಾಗಿದೆ. ಆ ಮಹಾನ್ ಚೇತನಕ್ಕೆ ನನ್ನ ಅಕ್ಷರ ನಮನ 🙏🏼🙏🏼

  ಇವರ ಬಂಧನದ ಹಿಂದೆ ನೆಹರು ಮತ್ತು ಶೇಖ್ ಅಬ್ದುಲ್ಲಾ ಷಡ್ಯಂತರ ಕೆಲಸ ಮಾಡಿರುತ್ತದೆ.ಕೇಂದ್ರ ಸರ್ಕಾರವು ಜಮ್ಮು ಪ್ರವೇಶಿಸಲು ಅನುಮತಿ ನೀಡಿದ ತರುವಾಯ ಕಾಶ್ಮೀರ ಸರ್ಕಾರವು ಪರ್ಮಿಟ್ ಇಲ್ಲ ಎಂದು ಬಂಧಿಸುವುದು ಇದನ್ನು ಸ್ಪಷ್ಟವಾಗಿ ದೃಢಪಡಿಸುತ್ತದೆ.

  ಶ್ರೀನಗರದಲ್ಲಿ ಯಾವುದೇ ವಿಚಾರಣೆ ಇಲ್ಲದೆ ಲೋಕಸಭಾ ಸದಸ್ಯರಾಗಿದ್ದ ಶ್ಯಾಮಾಪ್ರಸಾದ್ ಮುಖರ್ಜಿಯವರನ್ನು ಚಿಕ್ಕ ಮನೆಯೊಂದರಲ್ಲಿ ಬಂದಿಯಾಗಿ ಇಡುತ್ತಾರೆ. ಸೂಕ್ತವಾದ ವೈದ್ಯಕೀಯ ನೆರವು ಸಹಾ ಕಾಶ್ಮೀರ ಸರ್ಕಾರವು ನೀಡುವುದಿಲ್ಲ. ಇವರನ್ನು ಆಗ್ಗಾಗೆ ಪರೀಕ್ಷಿಸಲು ಬರುತ್ತಿದ್ದ ವೈದ್ಯ ಅಲೀ ಮಹಮದ್ ಇವರನ್ನು ಬೇಕಾಬಿಟ್ಟಿಯಾಗಿ ನೋಡಿಕೊಂಡಿರುವುದಕ್ಕೆ ದಾಖಲೆಗಳು ಲಭ್ಯವಿದೆ.ಇವರೊಬ್ಬ ರಾಜಕೀಯ ಬಂಧಿಯಾಗಿದ್ದರೂ ಶ್ಯಾಮಾಪ್ರಸಾದ್ ಮುಖರ್ಜಿಯವರು ಬರೆದ ಪತ್ರಗಳನ್ನು ಕಾಶ್ಮೀರ ಸರ್ಕಾರವು ಸೆನ್ಸಾರ್ ಮಾಡುತ್ತಿರುತ್ತಾರೆ. ಇವರು ಬರೆದ ಪತ್ರ ಮತ್ತು ಇವರಿಗೆ ಬಂದ ಪತ್ರ ಎಷ್ಟೊ ತಲುಪಿಸುವುದೇ ಇಲ್ಲ. ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂದು ಶೇಕ್ ಅಬ್ದುಲ್ಲಾ ಆದೇಶಿಸಿರುತ್ತಾರೆ. ಯಾವುದೇ ಅಪರಾಧ ಮಾಡದ ಮುಖರ್ಜಿಯವರನ್ನು ಒಬ್ಬ ಕುಖ್ಯಾತ ಅಪರಾಧಿಯ ರೀತಿ ಶೇಖ್ ಅಬ್ದುಲ್ಲಾ ಸರ್ಕಾರವು ನಡೆಸಿಕೊಳ್ಳುತ್ತದೆ.

  ಶ್ಯಾಮಾಪ್ರಸಾದ್ ಮುಖರ್ಜಿಯವರನ್ನು ಭೇಟಿಯಾಗಲು ಅವರ ಹಿರಿಯ ಮಗ ಮತ್ತು ಮಗಳು ಅವಕಾಶ ಕೋರಿದರೂ ಅದನ್ನು ನಿರಾಕರಿಸಲಾಗುವುದು ಈ ಎಲ್ಲಾ ಅನ್ಯಾಯಗಳು ನಡೆಯುತ್ತಿದ್ದರೂ ನೆಹರುರವರು ಕಪ್ರೇಕ್ಷಕರಾಗಿರುತ್ತಾರೆ.

  ಶ್ಯಾಮಾಪ್ರಸಾದ್ ಮುಖರ್ಜಿಯವರಿಗೆ ಡ್ರೈ ಪ್ಲೂರೇಸಿ ಕಾಯಿಲೆಯೆಂದು ನಿರ್ಣಯವಾದಾಗ ಡಾ| ಅಲೀ ಮಹಮದ್ ಚಿಕಿತ್ಸೆಗೆ ಒಳಪಡಿಸುವ ಮುನ್ನ ಇವರ ಹಿಂದಿನ ವೈದ್ಯಕೀಯ ಇತಿಹಾಸವನ್ನು ತಿಳಿದುಕೊಳ್ಳದೇ ಪ್‍ಪ್ಟೋಮೈಸಿಟೀಸ್ ಇಂಜಕ್ಷನ್ ಕೊಡಲು ಮುಂದಾದಾಗುತ್ತಾರೆ.ಶ್ಯಾಮಾಪ್ರಸಾದರು ಇದನ್ನು ತೆಗೆದುಕೊಳ್ಳಬಾರದು ಎಂದು ತಮ್ಮ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು ಕೂಡಾ ಅದೇ ಇಂಜಕ್ಷನ್ ನೀಡುತ್ತಾರೆ.ಮೇ 21 ರಂದು ಇವರ ಆರೋಗ್ಯ ಸ್ಥಿತಿಯು ಬಿಗಡಾಯಿಸುತ್ತದೆ. ಮೇ 22 ರಂದು ಬೆಳಗಿನ ಜಾವ 4 ಗಂಟೆಗೆ ಇವರಿಗೆ ಹೃದಯಾಘಾತವಾಗುತ್ತದೆ. 5-15ಕ್ಕೆ ವೈದ್ಯರಿಗೆ ಬರಲು ತಿಳಿಸಲಾಗುವುದು ಆದರೆ ವೈದ್ಯ ಅಲೀ ಮಹಮದ್ 7-15ಕ್ಕೆ ಬರುತ್ತಾರೆ ಆಸ್ಪತ್ರೆಗೆ ದಾಖಲು ಮಾಡಲು ತೀರ್ಮಾನ ಕೈಗೊಂಡರು ಜೈಲಿನ ಅಧಿಕಾರಿಯು ಜಿಲ್ಲಾಧಿಕಾರಿಯ ಅನುಮತಿ ನೀಡದೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಿಲ್ಲ ಎನ್ನುತ್ತಾರೆ. ಅಂತಿಮವಾಗಿ 11-30ಕ್ಕೆ ಇವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುವುದು.

  ಆಸ್ಪತ್ರೆಯಲ್ಲಿ ತಮ್ಮ ಜೊತೆ ಇರಲು ತಮ್ಮ ಇಬ್ಬರು ಸಹಾಯಕರನ್ನು ಕಳುಹಿಸಿ ಎಂದು ಕೋರಿದರು ಅದಕ್ಕೆ ಸೊಪ್ಪು ಹಾಕುವುದಿಲ್ಲ.ವಿಷಮಗೊಂಡ ಆರೋಗ್ಯ ಸ್ಥಿತಿಯನ್ನು ಇವರ ಕುಟುಂಬದವರಿಗೆ ತಿಳಿಸುವುದಿಲ್ಲ. ಇವರೊಂದಿಗೆ ಸದಾ ಇರುತ್ತಿದ್ದ ವಿದ್ಯಾ ಗುರುದತ್ತ “ಕಾಶ್ಮೀರ ಸರ್ಕಾರ ಡಾ|ಮುಖರ್ಜಿಯವರನ್ನು ದುರ್ಬಲಗೊಳಿಸಲು ಎಲ್ಲಾ ಪ್ರಯತ್ನಗಳನ್ನು ನಡಸಿದರು” ಎಂದು ಹೇಳುತ್ತಾರೆ.

  ಆಸ್ಪತ್ರೆಗೆ ದಾಖಲಾದ ತರುವಾಯ ಅವರಿಗೆ ಉಸಿರಾಟದ ತೊಂದರೆ ಇದ್ದರೂ ಆಕ್ಸಿಜನ್ ನೀಡುವುದಿಲ್ಲ. ರ್ಜೂ 23ರಂದು ನಡುರಾತ್ರಿ ಅವರ ಪರಿಸ್ಥಿತಿಯು ಚಿಂತಾಜನಕವಾಗುವುದು ಸಂಬಂಧಪಟ್ಟ ವೈದ್ಯರಿಗೆ ಮಾಹಿತಿ ನೀಡಿದರೂ ತುರ್ತು ಚಿಕಿತ್ಸೆ ದೊರೆಯುವುದಿಲ್ಲ.ಮುಂಜಾನೆ 2-30ಕ್ಕೆ ಶ್ಯಾಮಾಪ್ರಸಾದ್ ಮುಖರ್ಜಿಯವರು ಕೊನೆಯುಸಿರೆಳೆಯುತ್ತಾರೆ. ಆದರೆ ಅಧಿಕೃತ ದಾಖಲೆಯಲ್ಲಿ 3-30 ಎಂದು ನಮೂದಿಸಲಾಗುವುದು.

  ಮೃತಪಟ್ಟ ತರುವಾಯ ಬೆಳಕಿಗೆ ಬಂದ ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ ಡಾ|ಮುಖರ್ಜಿಯವರು ಮೃತಪಟ್ಟ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಅಲೀ ಮಹಮದ್ ಆಸ್ಪತ್ರೆಗೆ ಬಂದೇ ಇರುವುದಿಲ್ಲ.

  ಅವರ ಪಾರ್ಥೀವ ಶರೀರ ಕೊಲ್ಕತ್ತಾಗೆ ಬೆಳಕಿರುವಾಗ ತಲುಪಬಾರದು ಎಂಬ ದುರುದ್ದೇಶದಿಂದ ಶ್ರೀನಗರದಿಂದ ಪಾರ್ಥೀವ ಶರೀರ ಹೊತ್ತು ಹೊರಟ ವಿಮಾನ ಜಲಂಧರ್ ಕಾನ್ಪುರ ಮುಖಾಂತರ ರಾತ್ರಿ 9ಗಂಟೆಗೆ ತಲುಪುತ್ತದೆ.ಶ್ರೀನಗರದಲ್ಲಿ ತೀರಿಕೊಂಡ ಮುಖರ್ಜಿಯವರಿಗೆ ಆಸ್ಪತ್ರೆಯಲ್ಲಿ ಮರಣ ಪ್ರಮಾಣ ಪತ್ರವನ್ನು ನೀಡಿರುವುದಿಲ್ಲ ಅನಿವಾರ್ಯವಾಗಿ ಕೋಲ್ಕತ್ತಾ ನಗರ ಪಾಲಿಕೆಯು ಮರಣ ಪತ್ರವನ್ನು ನೀಡ ಬೇಕಾಗುತ್ತದೆ.

  ಮೃತರಾದ ತರುವಾಯ ಕಾಶ್ಮೀರದ ಸರ್ಕಾರವು ಅವರ ಎಲ್ಲಾ ವಸ್ತುಗಳನ್ನು ಅವರ ಕುಟುಂಬದವರಿಗೆ ಹಿಂದಿರುಗಿಸಬೇಕಾಗಿತ್ತು. ಆದರೆ ಅವರ ಡೈರಿ ಮತ್ತು ಬರೆಯುತ್ತಿದ್ದ ಹಸ್ತಪ್ರತಿಗಳನ್ನು ಹಿಂದಿರುಗಿಸುವುದಿಲ್ಲ. ಮುಖರ್ಜಿಯವರ ಕುಟುಂಬ ಮತ್ತು ಅವರ ತಾಯಿಯವರು ಸ್ವತಃ ಪ್ರಧಾನಿ ನೆಹರುರವರಿಗೆ ಅವುಗಳನ್ನು ಹಿಂದಿರುಗಿಸುವಂತೆ ಕಾಶ್ಮೀರ ಸರ್ಕಾರಕ್ಕೆ ತಿಳಿಸಬೇಕು ಎಂದು ಕೋರುತ್ತಾರೆ ಕಲ್ಲು ಹೃದಯದ ನೆಹರು ಅವರು ಸರ್ಕಾರದ ಬಳಿ ಯಾವುದೇ ವಸ್ತುಗಳು ಇಲ್ಲ ಎಂದೇ ಸಾಧಿಸುತ್ತಾರೆ.

  ಶ್ಯಾಮಾಪ್ರಸಾದ್ ಮುಖರ್ಜಿಯವರ ಮರಣಾ ನಂತರ ಅವರ ತಾಯಿ ಜೊಗೊಮಾಯಾ ದೇವಿಯವರು ಪ್ರಧಾನಿ ನೆಹರುರವರಿಗೆ ಪತ್ರ ಬರೆದು ತಮ್ಮ ಮಗನ ಸಾವು ಅನುಮಾನಾಸ್ಪದವಾಗಿದೆ ಹೀಗಾಗಿ ಅವರ ಸಾವಿನ ಹಿಂದಿನ ಸತ್ಯ ನನಗೆ ಮತ್ತು ದೇಶದ ಜನತೆಗೆ ತಿಳಿಯಲು ನಿಪ್ಟಕ್ಷಪಾತವಾದ ತನಿಖೆ ನಡೆಸಿ ಎಂದು ಕೋರಿಕೊಂಡು ಅವರನ್ನು ಜೈಲಿನಲ್ಲಿ ಇಟ್ಟ ಸಂದರ್ಭದಲ್ಲಿ ನೀಡಿದ ತೊಂದರೆಗಳ ಬಗ್ಗೆ ಗಮನಸೆಳೆಯುತ್ತಾರೆ. ಅದಕ್ಕೆ ಉತ್ತರಿಸಿದ ನೆಹರುರವರು ಮುಖರ್ಜಿಯವರ ಸಾವಿನಲ್ಲಿ ಯಾವುದೇ ಸಂಶಯಪಡುವ ಸಂಗತಿಗಳು ಇಲ್ಲ ನಾನೇ ಇದನ್ನು ಹಲವರಿಂದ ವಿಚಾರಿಸಿ ಖಚಿತಪಡಿಸಿಕೊಂಡಿದ್ದೇನೆ ಹಾಗೂ ನಾನು ಸಹ ಹತ್ತು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿರುವೆ ಹೀಗಾಗಿ ಒಬ್ಬ ಬಂಧನದಲ್ಲಿರುವವರ ಮನಸ್ಥಿತಿಯನ್ನು ನಾ ಬಲ್ಲೆ ಎಂದು ವ್ಯಂಗ್ಯವಾಗಿ ಉತ್ತರಿಸುತ್ತಾರೆ.

  ಜೊಗೊಮಾಯ ದೇವಿಯವರು ಪ್ರತ್ಯುತ್ತರ ನೀಡಿ ತಾವು ಪರಕೀಯರ ಆಡಳಿತದಲ್ಲಿ ಬಂಧಿಯಾಗಿದ್ದವರು ನನ್ನ ಮಗನಾದರೋ ದೇಶದ ರಾಷ್ಟ್ರೀಯ ಸರ್ಕಾರದಲ್ಲಿ ವಿಚಾರಣೆ ಇಲ್ಲದೆ ಸೆರಮನೆಯಲ್ಲಿ ಇರುವಾಗ ಮೃತಪಟ್ಟಿರುವುದು ಎಂದು ನೆಹರು ತಮ್ಮ ಜೀವನಪರ್ಯಂತ ಮರೆಯಲಾಗದಂತಹ ತಿರುಗೇಟು ನೀಡುತ್ತಾರೆ.

  ಶ್ಯಾಮಾಪ್ರಸಾದ್ ಮುಖರ್ಜಿಯವರ ಅನುಮಾನಾಸ್ಪದ ಸಾವಿನ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪುರುಷೋತ್ತಮದಾಸ್ ಟಂಡನ್, ಡಾ|ಬಿ.ಆರ್.ಅಂಬೇಡ್ಕರ್, ಸುಚೇತ ಕೃಪಲಾನಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬಿ.ಸಿ.ರಾಯ್, ಜಯಪ್ರಕಾಶ್ ನಾರಾಯಣ್ ಮುಂತಾದ ಹಿರಿಯ ನಾಯಕರು ನೆಹರು ಅವರಲ್ಲಿ ವಿನಂತಿಸುತ್ತಾರೆ ಮಾನವೀಯ ಮುಖವನ್ನು ಕಳೆದುಕೊಂಡಿದ್ದ ಅವರು ತನಿಖೆ ನಡೆಸಲು ಸುತರಾಂ ಒಪ್ಪುವುದಿಲ್ಲ.

  ಶ್ಯಾಮಾಪ್ರಸಾದ್ ಮುಖರ್ಜಿಯವರು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಒಕ್ಕೂಟವನ್ನು ರಚಿಸಿ ನೆಹರು ಅವರನ್ನು ತಮ್ಮ ಪ್ರಬಲ ವಾಗ್ಝರಿಯಿಂದ ಹಲವು ಬಾರಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಡಾ|ಮುಖರ್ಜಿಯವರು ನೆಹರು ಅವರ ಪಾಲಿಗೆ ಮಗ್ಗಲು ಮುಳ್ಳಾಗಿದ್ದರು ಅವರ ಮರಣಾ ನಂತರವು ಅವರ ವಿರುದ್ದ ದ್ವೇಷ ಸಾಧಿಸಿದ್ದು ನೆಹರುರವರ ಸಣ್ಣ ಬುದ್ಧಿಗೆ ಸಾಕ್ಷಿಯಾಗಿದೆ.

  ತಂದೆ ಜನಸಂಘದ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿಯವರ ಸಾವಿನಿಂದ ಅಪರಾಧಿ ಸ್ಥಾನದಲ್ಲಿ ನಿಂತಿದ್ದರೆ 1968 ರಲ್ಲಿ ಜನಸಂಘದ ಅಧ್ಯಕ್ಷ ದೀನ್‍ದಯಾಳ್ ಉಪಾಧ್ಯಾಯರ ಅಮಾನುಷ ಕೊಲೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡಸದೆ ಇಂದಿಗೂ ಅವರ ಸಾವು ನಿಗೂಢವಾಗಿರುವ ಹಾಗೆ ಮಾಡಿದ ಅಪಕೀರ್ತಿಯು ನೆಹರುರವರ ಪುತ್ರಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ.

  ಭಾರತದ ರಾಜಕೀಯ ರಂಗದ ಧ್ರುವತಾರೆಯಾಗಿದ್ದ ಡಾ| ಶ್ಯಾಮಾಪ್ರಸಾದ್ ಮುಖರ್ಜಿಯವರು ನೆಹರು ಮತ್ತು ಶೇಕ್ ಅಬ್ದುಲ್ಲಾರವರ ಕುತಂತ್ರಕ್ಕೆ ಬಲಿಯಾದ ದುರಂತವು ಭಾರತದ ಸ್ವಾತಂತ್ರ ನಂತರದ ಇತಿಹಾಸದಲ್ಲಿ ಬಹು ದೊಡ್ಡ ಕಪ್ಪುಚುಕ್ಕೆಯಾಗಿದೆ.

  ಪ್ರಕಾಶ್ ಶೇಷರಾಘವಾಚಾರ್,
  sprakashbjp@gmail.com

  Prakash Sesharaghavachar is a Joint Spokesperson of Karnataka BJP

  Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

  LEAVE A REPLY

  Please enter your comment!
  Please enter your name here