ನವೆಂಬರ್ 28ರಂದು ದೇವನಹಳ್ಳಿಯ ಮಿಷನ್ 60+ ಕಾರ್ಯಾಗಾರದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಚಿವ ಮಧು ಬಂಗಾರಪ್ಪ.
ಬೆಂಗಳೂರು: ‘ಮಿಷನ್ 60+’ ಕಾರ್ಯಕ್ರಮವನ್ನು ಶಿಕ್ಷಕರು ಸವಾಲಾಗಿ ಸ್ವೀಕರಿಸಬೇಕು; ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಈ ಬಾರಿ ಕನಿಷ್ಠ 70+ ಫಲಿತಾಂಶದ ಗುರಿ ತಲುಪಲು ಕಾರ್ಯಪ್ರವೃತ್ತರಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ನವೆಂಬರ್ 28ರಂದು ಕರೆ ನೀಡಿದರು.
2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶ ಸುಧಾರಿಸಲು ಶಾಲಾ ಶಿಕ್ಷಣ ಇಲಾಖೆ ‘ಮಿಷನ್ 60+’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಡಿ ಮೂರು ಜಿಲ್ಲೆಗಳ ವಿಷಯ ಸಂಪನ್ಮೂಲ ಶಿಕ್ಷಕರ ಕಾರ್ಯಾಗಾರವನ್ನು ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ವರ್ಷದಿಂದ ಮಿಷನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಕಳೆದ ಸಾಲಿನಲ್ಲಿ ಮಿಷನ್ 40+ ಗುರಿ ಸಾಧಿಸಲಾಗಿದೆ ಎಂದು ಸಚಿವರು ತಿಳಿಸಿದರು. ಮಕ್ಕಳ ಕಲಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂದು ಶಿಕ್ಷಕರಿಗೆ ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಸ್ಥಾಪನೆ ನನ್ನ ಪ್ರಕಾರ ಬಂಗಾರದ ಕೆಲಸ. ಒಂದೇ ಕ್ಯಾಂಪಸ್‌ನಲ್ಲಿ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಸತತ 14 ವರ್ಷ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದಂತಾಗಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಮಕ್ಕಳ ಭವಿಷ್ಯ ರೂಪಿಸುವ ಮತ್ತು ಪ್ರತಿ ಮಗುವನ್ನೂ ಶಿಕ್ಷಣದ ಮೂಲಕ ಯಶಸ್ಸಿನ ದಡ ಸೇರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ; ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದರು. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ. ಪ್ರತಿ ಮಗುವಿನ ಕನಸುಗಳಿಗೆ ಶಕ್ತಿ ತುಂಬಿ ನನಸಾಗಿಸಲು ಅವರು ಶ್ರಮಿಸಬೇಕು. ಶಿಕ್ಷಕರ ಪರಿಶ್ರಮ ಮಕ್ಕಳ ಭವಿಷ್ಯದಲ್ಲಿ ಪ್ರತಿಫಲಿಸಬೇಕು; ಮಕ್ಕಳ ಹಿತಾಸಕ್ತಿಗೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕ್ಷರ ಯೋಜನೆ ಜಾರಿಗೆ ತಂದು, ಮಕ್ಕಳಿಗೆ ಪ್ರತಿದಿನ ಒಂದು ರೂಪಾಯಿ ಪ್ರೋತ್ಸಾಹಧನ ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕಾರಣರಾಗಿದ್ದರು ಎಂದು ಸ್ಮರಿಸಿದರು.
ಮಕ್ಕಳ ಪೌಷ್ಟಿಕಾಂಶದ ಮಟ್ಟ ಸುಧಾರಿಸಲು ಅಜೀಂ ಪ್ರೇಮ್‌ಜಿ ಸುಮಾರು ₹1,500 ಕೋಟಿ ನೆರವು ನೀಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನೂ ಕಲ್ಪಿಸಲಾಗಿದ್ದು, ಗ್ರಾಮೀಣ ಶಾಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು ಎಂದರು.
ಮಿಷನ್ 60+ ಕೇವಲ ಪರೀಕ್ಷಾ ಫಲಿತಾಂಶ ಸುಧಾರಿಸುವ ಕಾರ್ಯಕ್ರಮವಾಗದೆ, ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಭವಿಷ್ಯ ರೂಪಿಸುವ ಆಂದೋಲನವಾಗಬೇಕು; ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್, ಆಕಾಶ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಅಮರ್, ನಿರ್ದೇಶಕ ಮುನಿರಾಜು, ಇಲಾಖೆಯ ಅಧಿಕಾರಿಗಳಾದ ಕೆ. ವೆಂಕಟೇಶ್, ಸುದೀಪ್, ಹನುಮಂತರಾಯ, ಲಿಂಗರಾಜು, ಫಂಡರಿನಾಥ್, ಅನಿತಾ ನಾಜೀರ್ ಮತ್ತಿತರರು ಉಪಸ್ಥಿತರಿದ್ದರು.
