• ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ
• ರಾಜ್ಯಾದ್ಯಂತ ಒತ್ತುವರಿ ತೆರವಿಗೆ ಮುಂದಾದ ಸರ್ಕಾರ
• ಸರ್ಕಾರಿ ಜಮೀನಿನ ರಕ್ಷಣೆಗೆ ‘ಬೀಟ್ ಸಿಸ್ಟಂ’ ಜಾರಿ
ಬೆಳಗಾವಿ:
ಭೂ ಮಾಫಿಯಾ ಜೊತೆಗೆ ಕೈಜೋಡಿಸಿ ಸರ್ಕಾರಿ ಜಮೀನಿನ ಅಕ್ರಮ ಪರಭಾರೆಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳ ವಿರುದ್ಧವೂ ಕೇಸ್ ಬೈ ಕೇಸ್ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಅಲ್ಲದೆ, ಸರ್ಕಾರಿ ಜಮೀನನ್ನೂ ವಶಕ್ಕೆ ಪಡೆಯುವ ಕೆಲಸ ಆಂದೋಲನ ಮಾದರಿಯಲ್ಲಿ ಆರಂಭಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ರಾಜ್ಯಾದ್ಯಂತ ಸರ್ಕಾರಿ ಭೂ ಒತ್ತುವರಿ ತೆರವು ಹಾಗೂ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಸರ್ಕಾರದ ಕ್ರಮವೇನು? ಎಂದು ಬುಧವಾರ ವಿಧಾನ ಪರಿಷತ್ ನಲ್ಲಿ ಸದಸ್ಯರಾದ ವೈ.ಎ. ನಾರಾಯಣ ಸ್ವಾಮಿ ಪ್ರಶ್ನಿಸಿದ್ದರು.
ವೈ.ಎ. ನಾರಾಯಣ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಸರ್ಕಾರಿ ಭೂ ಒತ್ತುವರಿ ಎಂಬುದು ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಇದೀಗ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಿ ಅಧಿಕಾರಿಗಳೇ ಭೂ ಮಾಫಿಯಾ ಜೊತೆಗೆ ಕೈಜೋಡಿಸಿ ಸರ್ಕಾರಿ ಜಮೀನುಗಳನ್ನು ಖಾಸಗಿಯವರಿಗೆ ಅಕ್ರಮವಾಗಿ ಪರಭಾರೆ ಮಾಡುತ್ತಿರುವುದು ದುರಾದೃಷ್ಟಕರ. ಈ ವಿಚಾರವನ್ನು ಸರ್ಕಾರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ” ಎಂದು ಮಾಹಿತಿ ನೀಡಿದರು.
ಮುಂದುವರೆದು, “ಸರ್ಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣದಲ್ಲಿ ಬೆಂಗಳೂರಿನ ಉಪವಿಭಾಗಾಧಿಕಾರಿ ವಿರುದ್ಧ ಎರಡು ಎಫ್ ಐಆರ್ ಮಾಡಲಾಗಿದೆ. ಆನೇಕಲ್ ತಹಶೀಲ್ದಾರ್ ಕೆಆರ್ ಪುರ ತಹಶೀಲ್ದಾರ್ ಹಾಗೂ ಯಲಹಂಕ ತಹಶೀಲ್ದಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣದಲ್ಲೂ ಎಫ್‌ಐಆರ್ ಜೊತೆಗೆ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಿ ವಿಚಾರಣೆ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಅಕ್ರಮದಲ್ಲಿ ಶಾಮೀಲಾದ ಎಲ್ಲಾ ಅಧಿಕಾರಿಗಳ ವಿಚಾರದಲ್ಲೂ ಕೇಸ್ ಬೈ ಕೇಸ್ ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ಅವರು ತಿಳಿಸಿದರು.
ಇದಲ್ಲದೆ, ಬೆಂಗಳೂರಿನ ಮಟ್ಟಿಗೆ ಇಲ್ಲಿ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸಿದ ಅಧಿಕಾರಿಗಳೇ ಭವಿಷ್ಯದಲ್ಲಿ ಉಪ ವಿಭಾಗಾಧಿಕಾರಿಗಳಾಗಿ ನೇಮಕವಾಗುವ ಪ್ರಸಂಗ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಭ್ರಷ್ಟಾಚಾರ ಹೆಚ್ಚಾಗಲು ಮತ್ತು ಸರ್ಕಾರಿ ಜಮೀನು ಖಾಸಗಿಯವರ ಪಾಲಾಗಲು ಇದೂ ಸಹ ಒಂದು ಕಾರಣ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಕ್ರಮವಹಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ತಿಳಿಸಿದರು.
ಸರ್ಕಾರಿ ಜಮೀನು ಒತ್ತುವರಿ ತೆರವಿನ ಬಗ್ಗೆಯೂ ಸದನದಲ್ಲಿ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದ ಯಾವ ಜಿಲ್ಲೆ ಯಾವ ಭಾಗದಲ್ಲಿ ಯಾವ ಜಮೀನನ್ನು ಅಧಿಕಾರಿಗಳು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿದ್ದಾರೆ ಎಂಬ ಕುರಿತು ವಿಸ್ಕೃತ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಲಾಗಿದೆ. ಈ ವರದಿ ಆಧರಿಸಿ ಈಗಾಗಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಆಂದೋಲನ ಮಾದರಿಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಸಾವಿರಾರು ಕೋಟಿ ಸರ್ಕಾರಿ ಆಸ್ತಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ಭರವಸೆ ನೀಡಿದರು.
ಸರ್ಕಾರಿ ಆಸ್ತಿ ರಕ್ಷಣೆಗೆ ಬೀಟ್ ವ್ಯವಸ್ಥೆ:
ಸರ್ಕಾರಿ ಜಮೀನಿನ ರಕ್ಷಣೆ ಬಗ್ಗೆಯೂ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಜಾಗಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಸರ್ಕಾರಿ ದಾಖಲೆಗಳಲ್ಲಿರುವ ಎಲ್ಲಾ ಸರ್ಕಾರಿ ಜಮೀನಿನ ವಿವರಗಳನ್ನೂ ಈಗಾಗಲೇ ಆ್ಯಪ್ ಗೆ ಅಪ್ಲೋಡ್ ಮಾಡಲಾಗಿದೆ. ಅಲ್ಲದೆ, ಮೊಬೈಲ್ ಆ್ಯಪ್ ಮೂಲಕ ಖಾಲಿ ಜಾಗಗಳ ಜಿ.ಪಿ.ಎಸ್ ಲೋಕೇಷನ್ ಮಾರ್ಕ್ ಮಾಡಿ, ಬೌಂಡರಿ ಫಿಕ್ಸ್ ಮಾಡಲಾಗಿದೆ.
ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಖಾಲಿ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಬೀಟ್ ಸಿಸ್ಟಂ ಜಾರಿ ಮಾಡಲಾಗಿದೆ. ಒತ್ತುವರಿ ಯಾಗಿರುವುದು ಕಂಡುಬಂದರೆ ಕೂಡಲೇ ಸಂಬಂಧ ಪಟ್ಟ ತಹಶೀಲ್ದಾರ್ ತೆರವುಗೊಳಿಸಬೇಕು. ಬೀಟ್ ಸಿಸ್ಟಂ ಮೊಬೈಲ್ ಲೋಕೇಷನ್ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದರಿಂದ ಅಧಿಕಾರಿಗಳು ಕಡ್ಡಾಯ ಸ್ಥಳಕ್ಕೇ ತೆರಳಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದರು.