ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸಿಎಂ ಬೊಮ್ಮಾಯಿ ಅವರಿಂದ ಚಾಲನೆ: ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು:
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿಂದೆ ವಿದ್ಯಾರ್ಥಿ ಹಿತಬಿಟ್ಟು ಯಾವುದೇ ದುರುದ್ದೇಶ ಅಥವಾ ಹಿಡೆನ್ ಅಜೆಂಡಾ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಇದೇ ತಿಂಗಳ 23ರಿಂದ ಹೊಸ ಶಿಕ್ಷಣ ನೀತಿಯಡಿ ಕಲಿಕೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದೆಂದು ಪ್ರಕಟಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಕ್ರಿಸ್ತು ಜಯಂತಿ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವೇಶ ಪ್ರಕ್ರಿಯೆಗೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು ಎಂದರು.
ವಿರೋಧ ಸರಿಯಲ್ಲ:
ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೇ ಅಥವಾ ಅದನ್ನು ಸರಿಯಾಗಿ ಗ್ರಹಿಸದೇ ಟೀಕೆ ಮಾಡುವುದು ಸರಿಯಲ್ಲ. ಶಿಕ್ಷಣ ನೀತಿಯನ್ನು ವಿರೋಧ ಮಾಡುವುದೂ ದೇಶದ ಅಭಿವೃದ್ಧಿಯನ್ನು ವಿರೋಧಿಸುವುದು ಎರಡೂ ಒಂದೇ ಎಂದು ಸಚಿವರು ಅಭಿಪ್ರಾಯಪಟ್ಟರು.
ವಿಶಾಲ ತಳಹದಿ ಹಾಗೂ ವಿಶಾಲ ದೃಷ್ಟಿಕೋನದಿಂದ ರೂಪಿತವಾಗಿರುವ ಶಿಕ್ಷಣ ನೀತಿಯಲ್ಲಿ ಬಹು ಆಯ್ಕೆಯ ಕಲಿಕೆಗೆ ವಿಪುಲ ಅವಕಾಶವಿದೆ. ಇಷ್ಟು ದಿನ ನಾವು ಹೇಳಿದ್ದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಮಕ್ಕಳ ಪರಿಪೂರ್ಣ ವಿಕಾಸಕ್ಕೆ ಅವಕಾಶ ಇರಲಿಲ್ಲ. ಇನ್ನು ಮುಂದೆ ಅವರ ಇಚ್ಛೆಯ ವಿಷಯವನ್ನು ಕಲಿಯಲಿದ್ದಾರೆಂದ ಅವರು; ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಇತರೆ ಯಾವುದೇ ಕ್ಷೇತ್ರವೇ ಇರಲಿ ದೇಶ ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಶಿಕ್ಷಣ ನೀತಿಯಲ್ಲಿ ಉತ್ತರವಿದೆ ಎಂದರು.
NEP 2020 is a game-changer in Indian Education.
— Dr. Ashwathnarayan C. N. (@drashwathcn) August 18, 2021
Launched National Seminar on Implementation of #NEP2020 at Kristu Jayanti College, Bengaluru.
NEP will provide high-quality education to all. Colleges, universities & faculty are actively engaging with @kshecb to implement this. pic.twitter.com/s4f0xP4xmt
ಯಾವುದೇ ದೇಶ, ಯಾವುದೇ ಹಂತದಲ್ಲಿ ಹಾಗೂ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಅದನ್ನು ನಿರಾಯಾಸವಾಗಿ ಬಗೆಹರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ ಎಂಬುದು ನನ್ನ ಅಚಲ ನಂಬಿಕೆ. ಶಿಕ್ಷಣ ಇಲ್ಲದೆ ಅಭಿವೃದ್ಧಿ ಎನ್ನುವುದು ಮರೀಚಿಕೆ. ಆಮೂಲಾಗ್ರ ಮತ್ತು ರಚನಾತ್ಮಕ ಪ್ರಗತಿ ಸಾಧಿಸಬೇಕಿದ್ದರೆ ಶಿಕ್ಷಣಕ್ಕೆ ಒತ್ತು ನೀಡಲೇಬೇಕು. ಈ ನಿಟ್ಟಿನಲ್ಲಿ ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್ ನಂಥ ಚಿಕ್ಕ ಚಿಕ್ಕ ದೇಶಗಳು ಅದ್ಭುತಗಳನ್ನೇ ಸೃಷ್ಟಿ ಮಾಡಿವೆ ಎಂದರು ಸಚಿವರು.
ಶಿಕ್ಷಣ ಸಂಸ್ಥೆಗಳನ್ನು ಅತ್ಯುತ್ತಮವಾಗಿ ರೂಪಿಸಬೇಕು. ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆ ಅಲ್ಲಿರಬೇಕು. ಮುಂದಿನ ಅನೇಕ ವರ್ಷಗಳ ಮುನ್ನೋಟ ಇಟ್ಟುಕೊಂಡು ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕು. ಅದಕ್ಕಾಗಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಂಥ ಸಂಸ್ಥೆಗಳನ್ನು ಆಮೂಲಾಗ್ರವಾಗಿ ಬೆಳೆಸಲು ನೆರವಾಗಬೇಕು. ಯಾವುದೇ ಶಿಕ್ಷಣ ಸಂಸ್ಥೆಯೂ ಲಾಭ ಗಳಿಕೆಗಾಗಿ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.
Let us not shy away from adopting change. Let us not resist change.
— Dr. Ashwathnarayan C. N. (@drashwathcn) August 18, 2021
Let us all take a pledge that we can and we will make Karnataka the best education destination in India.#NEP2020 #NEPinKarnataka @CMofKarnataka @BJP4Karnataka
ನಮ್ಮ ದೇಶದ ಜನಸಂಖ್ಯೆ ಈಗ 130 ಕೋಟಿ ಮೀರುತ್ತಿದೆ. ಅದೇ ಪ್ರಮಾಣದಲ್ಲಿ ಸವಾಲುಗಳು, ಅಗತ್ಯಗಳು ಹೆಚ್ಚುತ್ತಿವೆ. ಇವೆಲ್ಲವನ್ನೂ ಎದುರಿಸಿ ಗೆಲ್ಲಬೇಕಾದರೆ ನಮಗೆ ಎದುರಿಗಿರುವ ಏಕೈಕ ಸಾಧನವೆಂದರೆ ಶಿಕ್ಷಣ ಮಾತ್ರ ಎಂದು ಸಚಿವರು ಪ್ರತಿಪಾದಿಸಿದರಲ್ಲದೆ, ಶಿಕ್ಷಣ ನೀತಿ ಜಾರಿ ದಿಕ್ಕಿನಲ್ಲಿ ಇಂಥ ಅತ್ಯುತ್ತಮ ವಿಚಾರ ಸಂಕಿರಣವನ್ನು ಮೊತ್ತ ಮೊದಲು ಆಯೋಜಿಸಿದ ಬೆಂಗಳೂರು ಉತ್ತರ ವಿವಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಡಾ.ಅಗಸ್ಟೀನ್ ಜಾರ್ಜ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಡಿ.ಕುಮುದಾ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಮಾತನಾಡಿದರು.
ಬೆಂಗಳೂರು ಉತ್ತರ ವಿವಿ ರಿಜಿಸ್ಟ್ರಾರ್ ಡಾ.ವಿ.ವೆಂಕಟೇಶ ಮೂರ್ತಿ, ಕ್ರಿಸ್ತು ಜಯಂತಿ ಕಾಲೇಜಿನ ಡೀನ್ ಡಾ.ಜೆ.ಅಲೋಶಿಯಸ್ ಎಡ್ವರ್ಡ್ ಮುಂತಾದವರು ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದರು.