ನೇಪಾಳದಲ್ಲಿ ನಾಪತ್ತೆಯಾದವರ ಗುರುತು ಪತ್ತೆ: ಕರ್ನಾಟಕದ ಕುಟುಂಬಗಳ DNA ಮಾದರಿ ಸಂಗ್ರಹಕ್ಕೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರ
ಬೆಂಗಳೂರು, ಸೆಪ್ಟೆಂಬರ್ 5: ನೇಪಾಳದಲ್ಲಿ ನಾಪತ್ತೆಯಾಗಿರುವ ಕರ್ನಾಟಕದ ವ್ಯಕ್ತಿಗಳ ಗುರುತು ಪತ್ತೆ ಹಾಗೂ ಅಗತ್ಯವಿದ್ದಲ್ಲಿ ಅವರ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ತರಲು ಅನುಕೂಲವಾಗುವಂತೆ DNA ಮಾದರಿ ಸಂಗ್ರಹಣೆಗಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ನೋಡಲ್ ಕೇಂದ್ರವಾಗಿ ನೇಮಕ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಾಪತ್ತೆಯಾಗಿರುವ ವ್ಯಕ್ತಿಗಳ ಪ್ರಥಮ ದರ್ಜೆಯ ಸಂಬಂಧಿಕರಾದ ತಂದೆ, ತಾಯಿ, ಮಗ ಅಥವಾ ಮಗಳು ತಮ್ಮ ಗುರುತು ಹಾಗೂ ನಾಪತ್ತೆಯಾಗಿರುವ ವ್ಯಕ್ತಿಯೊಂದಿಗಿನ ಸಂಬಂಧವನ್ನು ಪರಿಶೀಲಿಸಿಕೊಂಡ ಬಳಿಕ DNA ಮಾದರಿ ನೀಡಬಹುದು.

DNA ಮಾದರಿ ಸಂಗ್ರಹಣೆಗೆ ಆಸ್ಪತ್ರೆಗೆ ಬರುವ ಸಂಬಂಧಿಕರು ಇತ್ತೀಚಿನ ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ಆಧಾರ್ ಸೇರಿದಂತೆ ಸರ್ಕಾರದಿಂದ ನೀಡಲಾದ ಯಾವುದಾದರೂ ಗುರುತಿನ ಚೀಟಿ ಹಾಗೂ ನಾಪತ್ತೆಯಾಗಿರುವ ವ್ಯಕ್ತಿಯೊಂದಿಗಿನ ತಮ್ಮ ಗುರುತು ಮತ್ತು ಸಂಬಂಧವನ್ನು ದೃಢೀಕರಿಸಲು ಅಗತ್ಯವಿರುವ ಇತರ ಸಂಬಂಧಿತ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು.
ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವಿಧಿವಿಜ್ಞಾನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ನಾಗೇಶ್ ಕುಪ್ಪಸ್ತ್ ಅವರನ್ನು ಈ ಪ್ರಕ್ರಿಯೆಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅವರನ್ನು 9742707500 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ವಾದಿರಾಜ್ ಬಿ. ಪೊಕ್ಕನ್ ಅವರನ್ನೂ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಅವರನ್ನು 9448408640 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣ, ಮಾಹಿತಿ ಅಥವಾ ಸಹಾಯದ ಅಗತ್ಯವಿದ್ದಲ್ಲಿ ಸಂಬಂಧಪಟ್ಟವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1533 ಅನ್ನು ಸಂಪರ್ಕಿಸಬಹುದು.
