ಬೆಂಗಳೂರು ದಕ್ಷಿಣದಲ್ಲಿ ನಕಲಿ ಮತದಾರರ ನೋಂದಣಿಗೆ ಕ್ರಿಮಿನಲ್ ಮೊಕದ್ದಮೆ; ಮತದಾರರ ಪಟ್ಟಿ ಪರಿಷ್ಕರಣೆಗೆ 237 ಹೆಚ್ಚುವರಿ AEROಗಳ ನೇಮಕ
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಒಬ್ಬ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವುದು ಅಥವಾ ಕರ್ನಾಟಕದ ಜೊತೆಗೆ ಬೇರೆ ರಾಜ್ಯದಲ್ಲಿಯೂ ಹೆಸರು ಇರುವುದು ಕಂಡುಬಂದರೆ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 31ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್. ರಮೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಗ್ರ ಸಮಾಲೋಚನಾ ಸಭೆಯಲ್ಲಿ ಈ ಸೂಚನೆ ನೀಡಲಾಯಿತು.
ಫಾರ್ಮ್-6 ಮತ್ತು ಫಾರ್ಮ್-8 ಅರ್ಜಿಗಳನ್ನು ಕಟ್ಟುನಿಟ್ಟಾಗಿ ಮರುಪರಿಶೀಲಿಸಿ ಅರ್ಹ ಪ್ರಕರಣಗಳನ್ನು ಮಾತ್ರ ಪರಿಗಣಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಯಿತು.
ಭಾರತ ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ 2026ರ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈಗಾಗಲೇ ಎಲ್ಲ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ವಿತರಿಸಿ ಸ್ವೀಕೃತಿ ಪಡೆಯಲಾಗಿದೆ. ಸೆಪ್ಟೆಂಬರ್ 3ರಂತೆ ನಮೂನೆ 9, 10 ಮತ್ತು 11 ಹಾಗೂ ಭಾವಚಿತ್ರರಹಿತ ಕರಡು ಮತದಾರರ ಪಟ್ಟಿಯನ್ನು ಒಳಗೊಂಡ ಪೆನ್ಡ್ರೈವ್ಗಳನ್ನು ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗಿದೆ.
2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದ ಹಾಗೂ ಲಾಜಿಕಲ್ ವ್ಯತ್ಯಾಸಗಳು ಕಂಡುಬಂದಿರುವ ಮತದಾರರಿಗೆ ಚುನಾವಣಾ ಆಯೋಗದ ನಿಯಮಾವಳಿಗಳಂತೆ ನೋಟಿಸ್ ನೀಡಲಾಗುತ್ತಿದೆ. ಕ್ಷೇತ್ರವಾರು ನೋ-ಮ್ಯಾಪಿಂಗ್ ವಿವರಗಳನ್ನು ರಾಜಕೀಯ ಪಕ್ಷಗಳಿಗೆ ಇ-ಮೇಲ್ ಮೂಲಕ ರವಾನಿಸಲಾಗಿದೆ.
ಪ್ರತಿದಿನ ಯಾವ ಮತದಾರರಿಗೆ ನೋಟಿಸ್ ಜಾರಿಯಾಗುತ್ತಿದೆ ಎಂಬ ದಿನವಾರು ಪಟ್ಟಿಯನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳುವಂತೆ ಮತದಾರರ ನೋಂದಣಾಧಿಕಾರಿಗಳಿಗೆ (ERO) ನಿರ್ದೇಶಿಸಲಾಯಿತು.
ವಿಶೇಷ ಪರಿಷ್ಕರಣೆಯ ವಿಚಾರಣೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಗೆಜೆಟ್ ಅಧಿಸೂಚನೆಯ ಮೂಲಕ ಒಟ್ಟು 237 ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು (Additional AERO) ನೇಮಕ ಮಾಡಲಾಗಿದ್ದು, ಅವರಿಗೆ ವಿಶೇಷ ತರಬೇತಿ ನೀಡಲಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಾರ್ಡ್ ಕಚೇರಿಗಳು ಸೇರಿದಂತೆ ಸೂಕ್ತ ಸ್ಥಳಗಳನ್ನು ನಿಗದಿಪಡಿಸಿ, ದಿನವೊಂದಕ್ಕೆ ಗರಿಷ್ಠ 50ರಿಂದ 60 ಪ್ರಕರಣಗಳಂತೆ ಹಂತ ಹಂತವಾಗಿ ವಿಚಾರಣೆ ನಡೆಸಲು ಸೂಚಿಸಲಾಯಿತು.
ಮತದಾರರಿಗೆ ನೋಟಿಸ್ ನೀಡುವಾಗ ವಿಚಾರಣೆಗೆ ಹಾಜರಾಗಲು ಕನಿಷ್ಠ ಏಳು ದಿನಗಳ ಕಾಲಾವಕಾಶ ನೀಡಬೇಕು ಎಂದು ರಮೇಶ್ ತಿಳಿಸಿದರು. ತುರ್ತು ಅಥವಾ ಅನಿವಾರ್ಯ ಕಾರಣಗಳಿಂದ ಮೊದಲ ನಿಗದಿತ ದಿನ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಮತದಾರರಿಗೆ ಎರಡನೇ ನೋಟಿಸ್ ನೀಡಿ ಮತ್ತೊಮ್ಮೆ ವಿಚಾರಣೆಗೆ ಅವಕಾಶ ಕಲ್ಪಿಸಬೇಕು ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಗೆ ದಾಖಲಾಗಿರುವವರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಮತದಾರರನ್ನು ವಿಚಾರಣೆಗಾಗಿ ಕಚೇರಿಗೆ ಕರೆಸದೆ, ಬೂತ್ ಮಟ್ಟದ ಅಧಿಕಾರಿಗಳು (BLO) ಅಥವಾ AEROಗಳು ಅವರ ಮನೆ ಅಥವಾ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಅಗತ್ಯ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು.
ವಿಚಾರಣೆಗೆ ಬರುವ ಮತದಾರರು ಸಲ್ಲಿಸುವ ದಾಖಲೆಗಳನ್ನು ವ್ಯವಸ್ಥಿತವಾಗಿ ದಾಖಲಿಸಲು ನಿಗದಿತ ನಮೂನೆಯಲ್ಲಿ ‘ವಿಚಾರಣಾ ರಿಜಿಸ್ಟರ್’ ನಿರ್ವಹಿಸಬೇಕು. ಮತದಾರರು ಹಾಜರುಪಡಿಸುವ ದಾಖಲೆಗಳಿಗೆ ಹಿಂಬರಹ ನೀಡಿ ಅವುಗಳನ್ನು ಸಿಸ್ಟಮ್ಗೆ ಅಪ್ಲೋಡ್ ಮಾಡುವುದು ಕಡ್ಡಾಯವಾಗಿರಬೇಕು. ನೋಟಿಸ್ಗಳಲ್ಲಿ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಸೀಲ್ ಸಮೇತ ಸ್ಪಷ್ಟವಾಗಿ ನಮೂದಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮತದಾರರ ಪಟ್ಟಿ ಪರಿಷ್ಕರಣೆ, ನೋಟಿಸ್ ವಿಲೇವಾರಿ ಹಾಗೂ ವಿಚಾರಣೆಗೆ ತರಬೇಕಾದ ಅಗತ್ಯ ದಾಖಲೆಗಳ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಪ್ರತಿ ವಾರ್ಡ್ಗೆ ಒಂದರಂತೆ ಧ್ವನಿವರ್ಧಕ ಅಳವಡಿಸಿದ ಆಟೋಗಳ ಮೂಲಕ ಬೆಳಗ್ಗೆ ಮತ್ತು ಸಂಜೆ ಪ್ರಚಾರ ನಡೆಸಲಾಗುವುದು. ಶಾಲಾ-ಕಾಲೇಜುಗಳು, ವೃತ್ತಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ಅಳವಡಿಸಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವೈಖರಿ, ಸೆಕ್ಷನ್ ವಿಳಾಸಗಳಲ್ಲಿನ ಲೋಪದೋಷಗಳು, BLOಗಳ ಕ್ಷೇತ್ರ ಭೇಟಿ ಹಾಗೂ ನಮೂನೆ-19ರ ಸ್ವೀಕೃತಿಗೆ ಸಂಬಂಧಿಸಿದ ದೂರುಗಳನ್ನು ಗಮನಕ್ಕೆ ತಂದರು. ಯಾವುದೇ ಲೋಪಗಳಿಗೆ ಅವಕಾಶ ನೀಡದೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ERO ಮತ್ತು AEROಗಳಿಗೆ ರಮೇಶ್ ಸೂಚಿಸಿದರು.
ಅಪರ ಆಯುಕ್ತ ರಾಚಪ್ಪ, ಚುನಾವಣಾ ವಿಭಾಗದ ತಹಶೀಲ್ದಾರ್ ರಶ್ಮಿ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
