ಬೆಂಗಳೂರು:
ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈ ಕೋರ್ಟ್ ನೀಡಿರುವ ಅದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸೌಧದಲ್ಲಿಂದು ಸಭೆ ನಡೆಸಿದರು. ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಲಾಗಿದೆ. ಕರ್ನಾಟಕ ಮುನಿಸಿಪಲ್ ಕಾಯ್ದೆ ವ್ಯಾಪ್ತಿಯಿಂದ ಬಿಬಿಎಂಪಿಯನ್ನು ಹೊರಗೆ ತಂದು ಪ್ರತ್ಯೇಕ ಕಾಯಿದೆ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಬಿಬಿಎಂಪಿ ಜಂಟಿ ಸದನ ಸಮಿತಿ ಸಭೆಯ ಅಧ್ಯಕ್ಷ ಎಸ್. ರಘು, ಸತೀಶ್ ರೆಡ್ಡಿ, ಎಸ್. ಆರ್. ವಿಶ್ವನಾಥ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ರಾಮಲಿಂಗ ರೆಡ್ಡಿ, ಮುನಿರತ್ನ, ಅರವಿಂದ ಲಿಂಬಾವಳಿ ಭಾಗಿಯಾಗಿದ್ದರು.
ಸಭೆಯ ನಂತರ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ. 2021ರಲ್ಲಿ ಹೊಸ ಜನಗಣತಿ ಬಂದರೆ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತದೆ. ಅದರ ಆಧಾರದ ಮೇಲೆ ಬಿಬಿಎಂಪಿ ಚುನಾವಣೆ ನಡೆಸುವುದು ಮತ್ತಷ್ಟು ವಿಳಂಬ ಆಗಬಹುದು. ಹಾಗಾಗೀ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ. ನಮಗೂ ಚುನಾವಣೆ ಮಾಡಬೇಕು ಎಂಬ ಕಾಳಜಿ ಇದೆ. ಆದರೆ, 198ವಾರ್ಡ್ ಗೆ ಚುನಾವಣೆ ಮಾಡಲು ಆಗುವುದಿಲ್ಲ. ಈಗಿರುವ 198 ವಾರ್ಡ್ ಗಳನ್ನು 243 ವಾರ್ಡ್ ಗೆ ಹೆಚ್ಚಿಸಿ ಪುನರ್ ವಿಂಗಡನೆ ಮಾಡಿದ ಬಳಿಕ ಚುನಾವಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.ಎಲ್ಲಾ ಪಕ್ಷದವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಹೀಗಾಗಿ ಇದೇ ಅಧಿವೇಶನದಲ್ಲಿ ಬಿಬಿಎಂಪಿ ಬಿಲ್ ಮಂಡನೆ ಮಾಡಲು ಸರ್ಕಾರ ತೀರ್ಮಾನಿಸಿದೆ. ನೂತನ ಕಾಯ್ದೆ ಅನ್ವಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.