Home ರಾಮನಗರ ನೂತನ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಎಳ್ಳಷ್ಟೂ ಅಪಾಯವಿಲ್ಲ: ‌ಅಶ್ವತ್ಥನಾರಾಯಣ

ನೂತನ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಎಳ್ಳಷ್ಟೂ ಅಪಾಯವಿಲ್ಲ: ‌ಅಶ್ವತ್ಥನಾರಾಯಣ

97
0
New education policy is no threat to Kannada: Ashwathanarayana

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಉನ್ನತ ಶಿಕ್ಷಣ ಸಚಿವ

ರಾಮನಗರ:

ಈ ವರ್ಷದಿಂದ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಎಳ್ಳಷ್ಟೂ ಅಪಾಯವಿಲ್ಲ. ಮಾತೃಭಾಷಾ ಶಿಕ್ಷಣಕ್ಕೆ ಅಗ್ರ ಆದ್ಯತೆ ನೀಡುತ್ತಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಅವರು; “ನೂತನ ಶಿಕ್ಷಣ ನೀತಿಯಿಂದ ಕನ್ನಡ ಭಾಷಾ ಕಲಿಕೆ ಮತ್ತು ಬೆಳವಣಿಗೆಗೆ ಧಕ್ಕೆಯಾಗುತ್ತದೆ ಎಂಬುದು ಕೇವಲ ಮಿಥ್ಯೆ ಮಾತ್ರ” ಎಂದರು.

ಮುಂದುವರಿದು ಮಾತನಾಡಿದ ಅವರು; “ಪದವಿ ಹಂತದಲ್ಲಿ ಎರಡು ವರ್ಷ ಕನ್ನಡದ ಕಲಿಕೆ ಕಡ್ಡಾಯ. ಜತೆಗೆ ನಮ್ಮ ದೇಶದ ಮತ್ತೊಂದು ಭಾಷೆಯನ್ನು ವಿಷಯವನ್ನಾಗಿ ಕಲಿಸಲಾಗುತ್ತದೆ. ಅಲ್ಲದೆ; ಎಂಜಿನಿಯರಿಂಗ್, ವಿಜ್ಞಾನ, ವೈದ್ಯಕೀಯ ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣ ಕೋರ್ಸ್ʼಗಳನ್ನು ಕನ್ನಡ ಭಾಷೆಯಲ್ಲೇ ಸಮರ್ಥವಾಗಿ ಕಲಿಸಲಾಗುತ್ತದೆ. ಈ ದಿಸೆಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು, ಎಂಜಿನಿಯರಿಂಗ್ ಪಠ್ಯಕ್ರಮವನ್ನು ಕನ್ನಡದಲ್ಲಿ ಸಿದ್ಧಪಡಿಸಲು ಅನುವಾದ ಕಾರ್ಯ ಆರಂಭವಾಗಿದೆ” ಎಂದು ಸಚಿವರು ಹೇಳಿದರು.

ಈ ಎಲ್ಲ ಪ್ರಯತ್ನಗಳು ಕನ್ನಡವನ್ನು ಮತ್ತಷ್ಟು ಶಕ್ತಿಯುತಗೊಳಿಸುವ ದಿಸೆಯಲ್ಲೆ ಸಾಗುತ್ತಿವೆಯೇ ಹೊರತು ದುರ್ಬಲಗಿಳಿಸುವುದಕ್ಕಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

New education policy is no threat to Kannada: Ashwathanarayana

ಮೂರು ದಶಕಗಳ ನಂತರ ಬಂದ ನೀತಿ:

34 ವರ್ಷಗಳ ನಂತರ ರೂಪಿಸಲಾಗಿರುವ ಈ ಶಿಕ್ಷಣ ನೀತಿಯ ಕರಡನ್ನು ನಮ್ಮವರೇ ಆದ ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ತಜ್ಞರ ತಂಡವು 5-6 ವರ್ಷಗಳ ನಿರಂತರ ಸಮಾಲೋಚನೆ ನಡೆಸಿ ರೂಪಿಸಿದೆ. ಈ ನೀತಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ರಾಜ್ಯ ಸರಕಾರವು ಉನ್ನತ ಶಿಕ್ಷಣದಲ್ಲಿ ಶಿಕ್ಷಣ ನೀತಿಯನ್ನು ಇದೇ 2021-22ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸಲು ಆದೇಶ ಹೊರಡಿಸಿದೆ ಎಂದ ಅವರು, ನೂತನ ನೀತಿಯಿಂದಾಗಿ ಮುಂಚೆ ಇದ್ದ ಬಿಗುವಿನ ಕಟ್ಟುಪಾಡುಗಳು ಹೊರಟು ಹೋಗಲಿವೆ. ಶಿಕ್ಷಣ ನೀತಿಯು ಬಹುಶಿಸ್ತುಗಳ ಕಲಿಕೆಯನ್ನು ಉತ್ತೇಜಿಸಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಓದಿ-ಕಲಿತು ಮುಂದೆ ಬರಬಹುದಾಗಿದೆ ಎಂದರು.

ಕಲಿಕೆಯಲ್ಲಿ ಮುಕ್ತ ಸ್ವಾತಂತ್ರ್ಯ:

ವಿದ್ಯಾರ್ಥಿಗಳು ತಮ್ಮ ಕೋರ್ಸ್ ಹೇಗಿರಬೇಕು ಎಂಬುದನ್ನು ತಾವೇ ನಿರ್ಧರಿಸಿಕೊಳ್ಳಬಹುದು. ಇದರಿಂದಾಗಿ, ನಿಜಕ್ಕೂ, ಸ್ವಾತಂತ್ರ್ಯೋತ್ಸವದ 75ನೇ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೂಡ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು ಖುಷಿಯ ವಿಚಾರ. ಈ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ, ಜೊತೆಗೆ, ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನೆಲ್ಲೆಡೆ ಬೆಳಗಿಸಲು ಬಳಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

LEAVE A REPLY

Please enter your comment!
Please enter your name here