Home ಬೆಂಗಳೂರು ನಗರ ದೇಶದಲ್ಲಿ ಹಿಂದುಳಿದವರ ಮತ್ತು ದಲಿತರ ಹೊಸ ಯುಗ ಆರಂಭ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ದೇಶದಲ್ಲಿ ಹಿಂದುಳಿದವರ ಮತ್ತು ದಲಿತರ ಹೊಸ ಯುಗ ಆರಂಭ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

73
0
New era of backward and dalits in the country Minister A Narayanaswamy
Advertisement
bengaluru

ಬೆಂಗಳೂರು:

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವಸಂಪುಟದ ವಿಸ್ತರಣೆ ಮೂಲಕ ದೇಶದಲ್ಲಿ ಹಿಂದುಳಿದವರ ಮತ್ತು ದಲಿತರ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದರು.

ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ನೆಲಮಂಗಲದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ನಾಯಕ, ಗುಜರಾತ್‍ನ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ವಿಶ್ವದ ಗಮನ ಸೆಳೆದ ಶ್ರೀ ಮೋದಿಯವರು ಎರಡನೇ ಬಾರಿ ಮಂತ್ರಿಮಂಡಲ ವಿಸ್ತರಣೆ ಮಾಡಿದಾಗ ಎಸ್‍ಸಿ- 12, ಎಸ್‍ಟಿ- 6, ಪರಿಶಿಷ್ಟ ಪಂಗಡದ (ಟ್ರೈಬಲ್) ಇಬ್ಬರಿಗೆ ಸೇರಿದಂತೆ 20 ಮಂದಿಗೆ ಸಚಿವರಾಗುವ ಅವಕಾಶ ನೀಡಿದರು. ರಾಜ್ಯದಲ್ಲಿ ಹಿಂದೆ ಕೇಂದ್ರದ ಇಬ್ಬರು ಸಚಿವರಿದ್ದರು. ಈಗ ಮತ್ತೆ ನಾಲ್ವರಿಗೆ ಸಚಿವರಾಗುವ ಅವಕಾಶ ಲಭಿಸಿದ್ದು, ಅದಕ್ಕಾಗಿ ಪ್ರಧಾನಿಯವರಿಗೆ ಕೃತಜ್ಞತೆ ಸಮರ್ಪಿಸುವುದಾಗಿ ತಿಳಿಸಿದರು.

ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿ ದೇಶಕ್ಕೆ ಪರಿಚಯಿಸುವುದು ಸತ್ ಸಂಪ್ರದಾಯ. ಅದಕ್ಕೆ ವಿರೋಧ ಪಕ್ಷದವರು ಅವಕಾಶ ಮಾಡಿಕೊಟ್ಟಿಲ್ಲ. ಕಾಂಗ್ರೆಸ್‍ನವರು ಸದನ ನಡೆಯದಂತೆ ನೋಡಿಕೊಂಡರು. ಇದೇ ಕಾರಣಕ್ಕೆ ನೂತನ ಸಚಿವರ ಪರಿಚಯವನ್ನು ಜನಾಶೀರ್ವಾದದ ಮೂಲಕ ಮಾಡಿಕೊಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪಕ್ಷದ ಮುಖಂಡರು ಮುಂದಾಗಿದ್ದಾರೆ ಎಂದು ವಿವರಿಸಿದರು.

bengaluru bengaluru

ಕೇಂದ್ರ ಸರಕಾರದ ಏಳು ವರ್ಷಗಳ ಸಾಧನೆ, ಬಿಜೆಪಿಯ ರಾಜ್ಯ ಸರಕಾರಗಳ ಸಾಧನೆ, ಸಚಿವರಾಗಿ ತಮ್ಮ ಖಾತೆಯಿಂದ ಲಭಿಸಲಿರುವ ಸೌಲಭ್ಯಗಳ ಕಿರು ಪರಿಚಯ ಮಾಡಿಕೊಡಲು ಈ ಯಾತ್ರೆಯನ್ನು ಬಳಸಲು ತಿಳಿಸಿದ್ದಾರೆ. ಪಕ್ಷದ ಸಂದೇಶದಂತೆ ಸಚಿವರು, ಇತರ ಜನಪ್ರತಿನಿಧಗಳು, ಪಕ್ಷದ ಪದಾಧಿಕಾರಿಗಳ ಜೊತೆಗೂಡಿ ಜನಾಶೀರ್ವಾದ ಯಾತ್ರೆ ನಡೆಸಲಾಗುತ್ತಿದೆ ಎಂದರು.

56 ವರ್ಷಗಳ ಕಾಂಗ್ರೆಸ್ ಆಡಳಿತ, ಅನೇಕ ಪ್ರಧಾನಮಂತ್ರಿಗಳ ಕಾರ್ಯವೈಖರಿಯನ್ನು ನಾವು ನೋಡಿದ್ದೇವೆ. ಹಿಂದೆ ಫೇಸ್‍ಬುಕ್, ಇಲೆಕ್ಟ್ರಾನಿಕ್ ಮೀಡಿಯಾಗಳು ಇರಲಿಲ್ಲ. ಆದರೆ, ಹಿಂದೆ ಮುದ್ರಣ ಮಾಧ್ಯಮಗಳಲ್ಲಿ ವಿದೇಶಗಳಲ್ಲಿ ಪ್ರಧಾನಿಗಳ ನಾಯಕರ ಭೇಟಿ, ಊಟ, ವಿಹಾರದ ಕುರಿತ ಸುದ್ದಿಗಳು ಇರುತ್ತಿದ್ದವು. ಸ್ವಾತಂತ್ರ್ಯ ತಂದು ಕೊಟ್ಟವರು ನಾವೇ, ದಲಿತರ ಉದ್ಧಾರ ಮಾಡುತ್ತೇವೆ, ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ- ಮತ ಕೊಡಿ ಎಂದು ಕೇಳುತ್ತಿದ್ದರು. ಆದರೆ, ಅಭಿವೃದ್ಧಿ ಎಂಬುದು ಕೇವಲ ಕನಸಾಗಿಯೇ ಇತ್ತು ಎಂದರು.

ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಈಶಾನ್ಯ ರಾಜ್ಯಗಳಿಗೆ ರೈಲ್ವೆ, ವಿಮಾನಗಳ ಸಂಪರ್ಕ ಇರಲಿಲ್ಲ. ಈ ರಾಜ್ಯಗಳ ಕಡೆ ವಿಶೇಷ ಗಮನ ಕೊಟ್ಟ ಶ್ರೀ ನರೇಂದ್ರ ಮೋದಿ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ವಿವರಿಸಿದರು.
ಶ್ರೀ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಮನೆಯಲ್ಲಿ ಶೌಚಾಲಯ ಇರುವಂತಾಗುವ ಸ್ವಚ್ಛ ಭಾರತ ಯೋಜನೆ, ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಉಜಾಲಾ ಯೋಜನೆ, ವಿದ್ಯುತ್ ಸ್ವಾವಲಂಬಿತನ ಸಾಧ್ಯವಾಗಿದೆ. ವಸತಿ ಯೋಜನೆಯಲ್ಲೂ ಕ್ರಾಂತಿ ನಡೆದಿದೆ. ಫಸಲ್ ಬಿಮಾ ಯೋಜನೆ, ರೈತ ಸಮ್ಮಾನ್ ಯೋಜನೆ ಸೇರಿದಂತೆ ಅನೇಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.

ಹಿಂದೆ ರಾಜ್ಯದಲ್ಲಿ ಸಚಿವನಾಗಿದ್ದಾಗ ದಲಿತರು- ಹಿಂದುಳಿದವರ ಏಳಿಗೆಗೆ ಶ್ರಮಿಸಿದ್ದೇನೆ. ಕೇಂದ್ರ ಸಚಿವನಾಗಿ ಹಿಂದುಳಿದವರು ಮತ್ತು ದಲಿತರ ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಶ್ರಮಿಸಲಿದ್ದೇನೆ ಎಂದು ಅವರು ಹೇಳಿದರು.
ದೇಶದಾದ್ಯಂತ ಐಎಎಸ್, ಐಪಿಎಸ್ ಅಧಿಕಾರಿಗಳ ಕೊರತೆ ಇದೆ. ಆ ಕೊರತೆಯನ್ನು ನೀಗಿಸಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ದಲಿತರ ಸಹಭಾಗಿತ್ವ ಬೇಕಿದೆ. ಆ ನಿಟ್ಟಿನಲ್ಲಿ ಐಎಎಸ್ ಕೋಚಿಂಗ್ ಅನ್ನು ಎಲ್ಲ ರಾಜ್ಯಗಳ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಆರಂಭಿಸಲಾಗುವುದು. ತಲಾ 100 ಜನರಿಗೆ ಕೋಚಿಂಗ್ ಕೊಡಲಾಗುವುದು ಎಂದರು.
ಎಲ್ಲ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಅಂಬೇಡ್ಕರ್ ನವೋದಯ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಅವರು ಪ್ರಕಟಿಸಿದರು. ಸ್ಕಿಲ್ ಇಂಡಿಯಾದಡಿ ತಾಂತ್ರಿಕ ಶಿಕ್ಷಣವನ್ನೂ ನೀಡಲಾಗುವುದು ಎಂದರು.

ರಾಜ್ಯದ ಸಚಿವರಾದ ಶ್ರೀ ಎಂ.ಟಿ.ಬಿ. ನಾಗರಾಜ್, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್. ನವೀನ್, ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪ, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.


bengaluru

LEAVE A REPLY

Please enter your comment!
Please enter your name here