ಶಾಲಾ ಮಕ್ಕಳೊಂದಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. ಚಿತ್ರ: ಲಭ್ಯವಾದದ್ದು
ಹಾಸನ: ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸಿರುವುದು ನಿಜಕ್ಕೂ ಬಹಳ ನೋವಿನ ಸಂಗತಿ; 2004ರಲ್ಲಿ ತಮಗೂ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಶನಿವಾರ ಬೇಸರ ವ್ಯಕ್ತಪಡಿಸಿದರು.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದಲ್ಲಿ ದೇವರ ದರ್ಶನ ಪಡೆದ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
“ದೇವರು ಎಲ್ಲರಿಗೂ ಒಂದೇ. ಶ್ರೀ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೂ ಆಹ್ವಾನ ಬಂದಿತ್ತು. ಅದರಂತೆಯೇ ಅವರು ದೇಗುಲಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಲು ಉದ್ದೇಶಿಸಿದ್ದರು. ಆದರೆ ಏಕಾಏಕಿ ಬಾಗಿಲಿಗೆ ಬೀಗ ಹಾಕಿ ತಾಯಿಯ ದರ್ಶನ ನಿರಾಕರಣೆ ಮಾಡಿರುವುದು ಸರಿಯಲ್ಲ” ಎಂದು ಅವರು ಹೇಳಿದರು.
“ಇದು ರಾಜಕೀಯ ಬೆರೆಸುವ ವಿಚಾರವಲ್ಲ. ಇವತ್ತು ರಾಜಕೀಯ ಚರ್ಚೆ ಮಾಡಲು ನನಗೆ ಇಷ್ಟವೂ ಇಲ್ಲ. ಆದರೆ ಈ ಘಟನೆ ನನ್ನ ಮನಸ್ಸಿಗೆ ನೋವು ಉಂಟುಮಾಡಿದೆ” ಎಂದ ಕೇಂದ್ರ ಸಚಿವರು, ಕುರುಬರಹಳ್ಳಿ ಗ್ರಾಮದ ಜೊತೆ ತಮಗೆ ಆತ್ಮೀಯ ಬಾಂಧವ್ಯ ಇದೆ ಎಂದರು. “ಸದಾ ನನ್ನ ಬೆಂಬಲಿಸುವ ಮತ್ತು ದೊಡ್ಡ ಮಟ್ಟದಲ್ಲಿ ನನಗೆ ಮತ ಕೊಟ್ಟು ಗೆಲ್ಲಿಸುವ ಗ್ರಾಮ ಕುರುಬರಹಳ್ಳಿ. ಇಂತಹ ಘಟನೆಗಳ ಅಗತ್ಯ ಇರಲಿಲ್ಲ” ಎಂದರು.
‘2004ರ ಘಟನೆ’
ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತಷ್ಟು ಕೆಟ್ಟ ಪರಿಸ್ಥಿತಿಗೆ ಹೋಗುತ್ತಿದೆ; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವ ಕೃತ್ಯಗಳು ಹೆಚ್ಚಾಗಿವೆ, ಪ್ರತಿಪಕ್ಷಗಳ ಕಾರ್ಯಕರ್ತರನ್ನು ಭಯಭೀತರನ್ನಾಗಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. “ಕಾಂಗ್ರೆಸ್ ಕಾರ್ಯಕರ್ತರ ನಡವಳಿಕೆ, ರೌಡಿಸಂ, ದೌರ್ಜನ್ಯದ ಬಗ್ಗೆ ನಾನು ಈಗಲೇ ಏನನ್ನೂ ಹೇಳಲು ಹೋಗಲ್ಲ. ಅಲ್ಲಿಯ ಜನ ಬುದ್ಧಿ ಕಲಿಸುವ ದಿನ ದೂರವಿಲ್ಲ” ಎಂದು ಎಚ್ಚರಿಸಿದರು.
2004ರಲ್ಲಿ ಇದೇ ರಾಮನಗರ ಜಿಲ್ಲೆಯ ಕೂಟಗಲ್ಲು ಹೊಸೂರು ಗ್ರಾಮದಲ್ಲಿ ತಾವು ದೇವಾಲಯಕ್ಕೆ ಬರುವಾಗ ಕಾಂಗ್ರೆಸ್‌ನವರು ದಬ್ಬಾಳಿಕೆ ನಡೆಸಿ ದೇಗುಲಕ್ಕೆ ಬೀಗ ಹಾಕಿದ್ದರು ಎಂದು ಅವರು ನೆನಪಿಸಿಕೊಂಡರು. “ದೇವರ ಅನುಗ್ರಹ ಹೇಗಿರುತ್ತದೆ ಎಂಬುದು ಯಾರಿಗೆ ಗೊತ್ತು? ನಂತರ ನಡೆದ ಚುನಾವಣೆಯಲ್ಲಿ ನನಗೆ 25 ಸಾವಿರಕ್ಕೂ ಹೆಚ್ಚು ಬಹುಮತದಿಂದ ಜನರು ನನ್ನನ್ನು ಗೆಲ್ಲಿಸಿದರು. ಈ ಬಾರಿಯೂ ಅಂತಹ ಪರಿಸ್ಥಿತಿಯನ್ನು ಕಾಂಗ್ರೆಸ್‌ನವರು ಸೃಷ್ಟಿ ಮಾಡಿದ್ದಾರೆ. ಬದಲಾವಣೆಯ ಪರ್ವಕ್ಕೆ ಕಾಂಗ್ರೆಸ್ ಕಾರ್ಯಕರ್ತರೇ ನಾಂದಿ ಹಾಡಿದ್ದಾರೆ. ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ” ಎಂದರು.
ಮುಖ್ಯಮಂತ್ರಿ ಕುರಿತು
ರಾಜ್ಯದ ಮುಖ್ಯಮಂತ್ರಿಗೆ ಕೆಲಸ ಮಾಡಲು ಸ್ವಲ್ಪ ಸಮಯ ಕೊಡಿ ಎಂದು ಕೆಲವರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, ಮೈಸೂರಿನಲ್ಲಿ ಮುಖ್ಯಮಂತ್ರಿಗಳು ಮಾತನಾಡಿರುವುದನ್ನು ಗಮನಿಸಿದ್ದೇನೆ; ಅವರ ಮಾತಿಗೂ ಕೃತಿಗೂ ನಡವಳಿಕೆ ಹೇಗಿರುತ್ತದೆ ಎಂಬುದನ್ನು ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದರು.
