ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇ ವಿಶ್ರಾಂತಿ ಕೇಂದ್ರಕ್ಕೆ ಭೂಸ್ವಾಧೀನಕ್ಕೆ ನಿತಿನ್ ಗಡ್ಕರಿ ಅನುಮೋದನೆ: ಸಂಸದ ಡಾ. ಸಿ.ಎನ್. ಮಂಜುನಾಥ್
ನವದೆಹಲಿ/ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಬುಧವಾರ, ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಪ್ರಸ್ತಾವಿತ ವೇಸೈಡ್ ಅಮೆನಿಟೀಸ್ (ವಿಶ್ರಾಂತಿ ಕೇಂದ್ರ) ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ₹2 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ನವದೆಹಲಿಯಲ್ಲಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚನ್ನಪಟ್ಟಣ ಆಟಿಕೆ ಪಾರ್ಕ್, ರೇಷ್ಮೆ ವಸ್ತುಸಂಗ್ರಹಾಲಯ ಹಾಗೂ ವೇಸೈಡ್ ಅಮೆನಿಟೀಸ್ ಯೋಜನೆಗಳನ್ನು ಶೀಘ್ರ ಜಾರಿಗೊಳಿಸುವಂತೆ ಮನವಿ ಮಾಡಿದ್ದಾಗಿ ಹೇಳಿದ್ದಾರೆ.
ತಮ್ಮ ಮನವಿಯ ಮೇರೆಗೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಅವರು ಪ್ರಸ್ತಾವಿತ ವಿಶ್ರಾಂತಿ ಕೇಂದ್ರಕ್ಕಾಗಿ ಸುಮಾರು 8.5 ಎಕರೆ ಭೂಮಿಯನ್ನು ಗುರುತಿಸಿ, ಅದರ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಸಲ್ಲಿಸಿದ್ದರು ಎಂದು ಮಂಜುನಾಥ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಶಿಫಾರಸಿನ ಮೇರೆಗೆ ಭೂಸ್ವಾಧೀನ ಪ್ರಸ್ತಾವನೆಗೆ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದು, ಭೂಸ್ವಾಧೀನ ಮತ್ತು ಯೋಜನೆ ಅನುಷ್ಠಾನ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಸ್ತಾವಿತ ಚನ್ನಪಟ್ಟಣ ಆಟಿಕೆ ಪಾರ್ಕ್ ವಿಶ್ವಪ್ರಸಿದ್ಧ ಚನ್ನಪಟ್ಟಣದ ಮರದ ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡಲಿದ್ದು, ಸಾಂಪ್ರದಾಯಿಕ ಕರಕುಶಲ ಕಲಾವಿದರಿಗೆ ಬೆಂಬಲ, ಉದ್ಯೋಗ ಸೃಷ್ಟಿ ಹಾಗೂ ‘ಗೊಂಬೆನಾಡು’ ಎಂಬ ಚನ್ನಪಟ್ಟಣದ ಗುರುತನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ.
ರೇಷ್ಮೆ ವಸ್ತುಸಂಗ್ರಹಾಲಯ ಕರ್ನಾಟಕದ ಸಮೃದ್ಧ ರೇಷ್ಮೆ ಪರಂಪರೆಯನ್ನು ಪರಿಚಯಿಸುವುದರ ಜೊತೆಗೆ ರಾಮನಗರ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ರೇಷ್ಮೆ ಬೆಳೆಗಾರರು, ರೀಲರ್ಗಳು ಮತ್ತು ಇತರ ಪಾಲುದಾರರಿಗೆ ಪ್ರಯೋಜನವಾಗಲಿದೆ. ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದ್ದಾರೆ.
ವಿಶ್ರಾಂತಿ ಕೇಂದ್ರ (Wayside Amenities) ನಿರ್ಮಾಣದಿಂದ ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶ್ವಮಟ್ಟದ ಸೌಲಭ್ಯಗಳು ದೊರೆಯಲಿದ್ದು, ಸುರಕ್ಷಿತ, ಅನುಕೂಲಕರ ಹಾಗೂ ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಈ ಮೂರು ಯೋಜನೆಗಳು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಸ್ಥಳೀಯ ಜೀವನೋಪಾಯವನ್ನು ಬಲಪಡಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ, ಪ್ರದೇಶದಲ್ಲಿ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಡಾ. ಮಂಜುನಾಥ್ ಹೇಳಿದ್ದಾರೆ. ಜೊತೆಗೆ ಈ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
