ಬೆಂಗಳೂರು:
ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎಂದು ಹೇಳುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಪಮಾನ ಮಾಡಿದಂತೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಟ್ಟಿರುವ ಪಕ್ಷ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆ ಪಕ್ಷದ ಮುಖಂಡರು. ಆ ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆ ಪಕ್ಷ ವಿಲೀನ ಆಗುತ್ತದೆ ಎಂದು ಮಾತನಾಡುವುದು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ ಎಂದು ಹೇಳಿದರು.
ಈ ರೀತಿ ನಾನೂ ಮಾತಾಡಲು ಸಿದ್ಧವಿಲ್ಲ. ಬೇರೆ ಯಾರೂ ಕೂಡಾ ಮಾತಾಡಬಾರದು. ವಿಧಾನ ಪರಿಷತ್ ನಲ್ಲಿ ಸಭಾಪತಿ ಇಳಿಸುವ ವಿಚಾರದಲ್ಲಿ ಸಹಕಾರ ಕೇಳಿದ್ದೆವು, ಜೆಡಿಎಸ್ ನವರು ಸಹಕಾರ ಕೊಟ್ಟಿದ್ದಾರೆ, ಇನ್ನು ಮುಂದೆಯೂ ಅಗತ್ಯವಿದ್ದ ಸಮಯದಲ್ಲಿ ನಮಗೆ ಸಹಕಾರ ಕೊಡಬಹುದು, ಅವರು ಅವರ ಪಕ್ಷವನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ವಿಲೀನ ಆಗುತ್ತದೆ ಎಂದು ಹೇಳುವುದು ಶೋಭೆ ತರುವುದಿಲ್ಲ. ಆ ಪ್ರಶ್ನೆ ಈಗ ಉದ್ಭವಿಸುವುದೇ ಇಲ್ಲ. ಇನ್ನೂ ಚುನಾವಣೆಗೆ ಎರಡೂವರೆ ವರ್ಷ ಇದೆ, ನಮ್ಮ ಪಾಡಿಗೆ ನಾವು ಪಕ್ಷ ಕಟ್ಟುತ್ತೇವೆ, ಅವರ ಪಾಡಿಗೆ ಅವರು ಪಕ್ಷ ಕಟ್ಟುತ್ತಾರೆ, ಯಾರೂ ಆ ರೀತಿ ಮಾತಾಡಬಾರದು. ನಮ್ಮ ಪಕ್ಷದಲ್ಲಿಯೂ ಯಾರೂ ಆ ರೀತಿ ಮಾತಾಡಬಾರದು ಎಂದು ತಾಕೀತು ಮಾಡಿದರು. UNI