ಬೆಂಗಳೂರು:
ಬ್ರಿಟನ್ನಲ್ಲಿ ಹೊಸ ರೂಪಾಂತರದ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಹೇಳಿದ್ದಾರೆ.
ಇಂಗ್ಲೆಂಡ್ ನಲ್ಲಿ ಕೊರೊನಾ ವೈರಸ್ ನ ಹೊಸ ಪ್ರಬೇಧ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು. ರೂಪಾಂತರಗೊಂಡಿರುವ ವೈರಾಣುವಿನ ತೀವ್ರತೆಯಲ್ಲಿ ವ್ಯತ್ಯಾಸ ಇಲ್ಲದಿದ್ದರೂ ಹೊಸ ಪ್ರಬೇಧ ಹೆಚ್ಚು ಸಾಂಕ್ರಾಮಿಕ ಎಂದು ಪ್ರಾಥಮಿಕ ಅಧ್ಯಯನದಲ್ಲಿ ಹೇಳಲಾಗುತ್ತಿದೆ. (1/3) pic.twitter.com/KBJzp9AjOP
— Dr Sudhakar K (@mla_sudhakar) December 21, 2020
ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ನಾಳೆ ಮಧ್ಯರಾತ್ರಿಯಿಂದ ಡಿಸೆಂಬರ್ 31ರವರೆಗೆ ಇಂಗ್ಲೆಂಡ್ ನಿಂದ ಬರುವ ವಿಮಾನಗಳನ್ನು ನಿಷೇಧಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯು.ಕೆ., ಡೆನ್ಮಾರ್ಕ್ ಮತ್ತು ನೆದರ್ ಲೆಂಡ್ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. (2/3)
— Dr Sudhakar K (@mla_sudhakar) December 21, 2020
ಕಳೆದ 14 ದಿನಗಳಲ್ಲಿ ಈ ದೇಶಗಳಿಂದ ರಾಜ್ಯಕ್ಕೆ ಆಗಮಿಸಿರುವ ವ್ಯಕ್ತಿಗಳನ್ನು 24 ಗಂಟೆಗಳಲ್ಲಿ ಪತ್ತೆ ಮಾಡಿ ಆರ್ ಟಿ-ಪಿಸಿಆರ್ ಟೆಸ್ಟ್ ಗೆ ಒಳಪಡಿಸಲಾಗುತ್ತದೆ. ಹೊಸ ಪ್ರಬೇಧದ ವೈರಾಣುವಿನ ಬಗ್ಗೆ ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲದಿದ್ದರೂ, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕೆಂದು ಮನವಿ ಮಾಡುತ್ತೇನೆ.(3/3)
— Dr Sudhakar K (@mla_sudhakar) December 21, 2020
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಗ್ಲೆಂಡ್ನಲ್ಲಿ ಹೊಸ ವೈರಸ್ ಪತ್ತೆಯಾಗಿದ್ದು, ಇದು ಕೋವಿಡ್-19ಗಿಂತ ವೇಗವಾಗಿ ಹರಡುತ್ತಿದೆ. ಇಲ್ಲಿಯವರೆಗೆ ಬ್ರಿಟನ್ನಿಂದ 138 ಮಂದಿ ರಾಜ್ಯಕ್ಕೆ ಹಿಂದಿರುಗಿದ್ದಾರೆ. ಅವರು ಕೋವಿಡ್ ನೆಗೆಟೀವ್ ರಿಪೋರ್ಟ್ ಹೊಂದಿರಲಿಲ್ಲ. ಮಂಗಳವಾರದ ನಂತರ ಎಲ್ಲರಿಗೂ ಪರೀಕ್ಷೆ ನಡೆಸಲಾಗುವುದು ಎಂದರು.
ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೇಂದ್ರ ಜಾರಿಗೊಳಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. UNI