ನವದೆಹಲಿ:
ದೇಶಾದ್ಯಂತ ಲಭ್ಯವಿರುವ ಪೋಷಕಾಂಶಯುಕ್ತ ರಸಗೊಬ್ಬರಗಳ ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ರಸಗೊಬ್ಬರ ಉತ್ಪಾದಕರು ಸಮ್ಮತಿಸಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.
ಇಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಸಚಿವರು ಇಫ್ಕೋ, ಐಪಿಎಲ್ ನಂತಹ ಪ್ರಮುಖ ಕಂಪನಿಗಳು ಹಳೆ ದರ ಮುಂದುವರಿಸುವ ಬಗ್ಗೆ ಆಯಾ ರಾಜ್ಯ ಕೃಷಿ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದಿವೆ ಎಂದರು.
ರಸಾಯನಿಕ ಹಾಗೂ ರಸಗೊಬ್ಬರ ಖಾತೆಯ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ, ರಸಗೊಬ್ಬರ ಉತ್ಪಾದಕರ ಸಂಘದ (ಎಫ್.ಎ.ಐ) ಪ್ರತಿನಿಧಿಗಳು, ಆಮದುದಾರರು, ಹಿರಿಯ ಅಧಿಕಾರಿಗಳ ಜೊತೆ ಸಚಿವರು ನಿನ್ನೆ ಸಾಯಂಕಾಲ ಸುದೀರ್ಘ ಸಭೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ರಸಗೊಬ್ಬರ ತಯಾರಿಕೆಗೆ ಬೇಕಾಗುವ ಶೇಕಡಾ 90ರಷ್ಟು ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ತೀವ್ರ ಹೆಚ್ಚಾದ ಕಾರಣ ಇಲ್ಲಿಯೂ ಹೆಚ್ಚಾಗಿತ್ತು.
ಸದ್ಯಕ್ಕಂತೂ ರಸಗೊಬ್ಬರ ಕಂಪನಿಗಳು ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ಒಪ್ಪಿಕೊಂಡಿವೆ. ಅವರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು. ರಸಗೊಬ್ಬರದ ಪ್ರಮುಖ ಬಳಕೆದಾರರಾದ ಅಮೆರಿಕ, ಬ್ರೆಜಿಲ್, ಐರೋಪ್ಯ ಒಕ್ಕೂಟ ದೇಶಗಳಲ್ಲಿ ಹಂಗಾಮು ಮುಗಿದಿರುವುದರಿಂದ ಬೇಡಿಕೆ ಕುಸಿದು ಬೆಲೆಯೂ ಇಳಿಯತೊಡಗಿದೆ. ಹಾಗಾಗಿ ಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಎಲ್ಲ ನಮೂನೆಯ ರಸಗೊಬ್ಬರಗಳು ಸಾಕಷ್ಟು ದಾಸ್ತಾನು ಇವೆ. ಮುಂಗಾರು ಹಂಗಾಮಿನಲ್ಲಿ ಯಾವುದೇ ರೀತಿಯಲ್ಲಿ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಇದಕ್ಕೆ ಈಗಿನಿಂದಲೇ ಎಲ್ಲ ರೀತಿಯ ಪೂರ್ವಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ರಸಗೊಬ್ಬರ ಬೆಲೆಏರಿಕೆ ಹಾಗೂ ಸಬ್ಸಿಡಿ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಟ್ವೀಟ್ ಅನ್ನು ಬಾಲಿಶ ಎಂದು ಸದಾನಂದ ಗೌಡ ಹೇಳಿದರು. ಮಾಜಿ ಪ್ರಧಾನಿ ಮಗನಾಗಿ, ಮಾಜಿ ಮುಖ್ಯಮಂತ್ರಿಯಾಗಿ ಅವರಿಗೆ ದೇಶದ ರಸಗೊಬ್ಬರ ಬೆಲೆ ಹಾಗೂ ಸರಬರಾಜು ವ್ಯವಸ್ಥೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದರ ಪ್ರಾಥಮಿಕ ತಿಳುವಳಿಕೆಯೂ ಇಲ್ಲದಿರುವುದು ಶೋಚನೀಯವಾಗಿದೆ. ಅವರಿಗೆ ಈ ಬಗ್ಗೆ ಏನಾದರು ಮಾಹಿತಿ ಬೇಕಾದರೆ ಕೇಳಲಿ. ನಾವು ಒದಗಿಸುತ್ತೇವೆ ಎಂದು ಸದಾನಂದ ಗೌಡ ತಿಳಿಸಿದರು.
ರೈತ ಕಲ್ಯಾಣದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಇರುವ ಬದ್ಧತೆಯ ಬಗ್ಗೆ ಯಾರಿಂದಲೂ ಪ್ರಮಾಣ ಪತ್ರ ಬೇಕಾಗಿಲ್ಲ. ರೈತರಿಗೆ ಆದಷ್ಟು ಕಡಿಮೆ ಬೆಲೆಯಲ್ಲಿ ರಸಗೊಬ್ಬರ ಪೂರೈಸಲು ಮೋದಿ ಸರ್ಕಾರ ಬದ್ಧವಾಗಿದೆ.
ರಸಗೊಬ್ಬರ ಸಬ್ಸಿಡಿಗಾಗಿ ಭಾರೀ ದೊಡ್ಡ ಮೊತ್ತದ ಹಣವನ್ನು ವ್ಯಯಿಸಲಾಗುತ್ತದೆ. 2019-20ನೇ ಸಾಲಿನಲ್ಲಿ ರಸಗೊಬ್ಬರ ಸಬ್ಸಿಡಿಗಾಗಿ 83,467.85 ಕೋಟಿ ರೂ ಒದಗಿಸಲಾಗಿತ್ತು. ಕಳೆದ ಸಾಲಿನಲ್ಲಿ (2020-21) ಕೊರೊನಾ ಸಂಕಷ್ಟದ ಮಧ್ಯೆಯೂ 1,31,229.51 ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ನೀಡಲಾಗಿದೆ. ಒಂದೇಒಂದು ನಯಾಪೈಸೆ ಸಬ್ಸಿಡಿಯನ್ನೂ ಉಳಿಸಿಕೊಂಡಿಲ್ಲ. ಇದು ಮೋದಿ ಸರ್ಕಾರ ಕಾರ್ಯನಿರ್ವಹಿಸುವ ರೀತಿ ಎಂದು ಅವರು ಹೇಳಿದರು.