ಬೆಣ್ಣೆ, ಹಾಲಿನ ಪುಡಿ ದರ ಇಳಿಕೆ
ಬೆಂಗಳೂರು:
ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತವು (ಕೆಎಂಎಫ್) ಗ್ರಾಹಕರ ಹಿತ ಗಮನದಲ್ಲಿಟ್ಟುಕೊಂಡು ನಂದಿನಿ ತುಪ್ಪ, ಬೆಣ್ಣೆ ಹಾಗೂ ಹಾಲಿನ ಪುಡಿ ಉತ್ಪನ್ನಗಳ ಮಾರಾಟ ದರವನ್ನು ಇಳಿಕೆ ಮಾಡಿದೆ.
ನಂದಿನಿ ತುಪ್ಪದ ದರವನ್ನು ಪ್ರತಿ ಕೆಜಿಗೆ ₹ 20 ಕಡಿಮೆ ಮಾಡಲಾಗಿದೆ. ಈ ಮೊದಲು ₹ 470ಕ್ಕೆ ಮಾರಾಟವಾಗುತ್ತಿದ್ದ ಒಂದು ಕೆಜಿ ತುಪ್ಪವು ಈಗ ₹ 450ಕ್ಕೆ ಗ್ರಾಹಕರ ಕೈಸೇರಲಿದೆ. ₹ 440ಕ್ಕೆ ಮಾರಾಟವಾಗುತ್ತಿದ್ದ ಒಂದು ಕೆಜಿ ಬೆಣ್ಣೆಯು ₹ 420ಕ್ಕೆ ಸಿಗಲಿದೆ. ನಂದಿನಿ ಕೆನೆರಹಿತ ಹಾಲಿನ ಪುಡಿಯ ದರವನ್ನು ₹ 300ರಿಂದ ₹ 270ಕ್ಕೆ ತಗ್ಗಿಸಲಾಗಿದೆ.

‘ಕೋವಿಡ್ ಸಮಯದಲ್ಲಿ ಕೆಎಂಎಫ್, ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಮೊದಲ ಅಲೆಯ ವೇಳೆ ನಂದಿನಿ ತುಪ್ಪ, ಬೆಣ್ಣೆಯ ಉತ್ಪನ್ನಗಳ ಮಾರಾಟ ದರ ಕಡಿತಗೊಳಿಸಲಾಗಿತ್ತು. ನಂದಿನಿ ಪನ್ನೀರ್ ಜೊತೆ ಚೀಸ್ ಅನ್ನು ಉಚಿತವಾಗಿ ನೀಡಲಾಗಿತ್ತು. ಈಗ ಮತ್ತೊಮ್ಮೆ ದರ ಇಳಿಸಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕೆಎಂಎಫ್ ಪ್ರಕಟಣೆ ತಿಳಿಸಿದೆ.