4 ಕೋಟಿ ರೂ. ವೆಚ್ಚ: 6 ತಿಂಗಳಲ್ಲಿ ಲೋಕಾರ್ಪಣೆ ಸರಕಾರಿ-ಖಾಸಗಿ ಸಹಭಾಗಿತ್ವ
ಬೆಂಗಳೂರು:
ಮೇಕ್ರೀ ವೃತ್ತದ ಬಳಿ ಇರುವ ರಮಣ ಮಹರ್ಷಿ ಧ್ಯಾನ ಕೇಂದ್ರದಿಂದ ಅರಮನೆ ಮೈದಾನಕ್ಕೆ ಪಾದಚಾರಿಗಳಿಗೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ಎಸ್ಕಲೇಟರ್ ಸಹಿತ ಸ್ಕೈವಾಕ್ ನಿರ್ಮಾಣ ಕಾಮಗಾರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಬೆಳಗ್ಗೆ ಭೂಮಿಪೂಜೆ ನೆರೆವೇರಿಸಿದರು.
ಬಳ್ಳಾರಿ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಾದಚಾರಿಗಳು ದಾಟುವ ವ್ಯವಸ್ಥೆ ಇಲ್ಲದಿರುವುದರಿಂದ ಬಹಳ ಸಮಸ್ಯೆ ಆಗಿತ್ತಲ್ಲದೆ, ಅಪಘಾತಗಳು ಉಂಟಾಗಿ ಪ್ರಾಣ ನಷ್ಟವೂ ಉಂಟಾಗಿತ್ತು. ವಾಹನ ದಟ್ಟಣಿಯಿಂದ ಕೂಡಿರುವ ಈ ರಸ್ತೆಯಲ್ಲಿ ಸ್ಕೈವಾಕ್ ಅಗತ್ಯವನ್ನು ಮನಗಂಡ ಡಿಸಿಎಂ, ಅದರ ನಿರ್ಮಾಣಕ್ಕಿಂದು ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು. “ಇದು ಅತ್ಯಂತ ಅಗತ್ಯವಾಗಿದ್ದ ಯೋಜನೆ. ಪಾದಚಾರಿಗಳ ಸುರಕ್ಷತೆಗೆ ಬೇಕಾಗಿತ್ತು. ಬಳ್ಳಾರಿ ರಸ್ತೆಯು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾದ್ದರಿಂದ ವಾಹನ ದಟ್ಟಣೆ ಜಾಸ್ತಿ” ಎಂದರು.
ಪ್ರಕಾಶ್ ಆರ್ಟ್ಸ್ ಕಂಪನಿಗೆ ಯೋಜನೆ ವಹಿಸಲಾಗಿದ್ದು, ಅವರೇ ಮೇಲು ಸೇತುವೆಯನ್ನು ನಿರ್ಮಾಣ ಮಾಡಿ ನಿರ್ವಹಣೆಯನ್ನೂ ಮಾಡಲಿದ್ದಾರೆ. ಜತೆಗೆ, ವರ್ಷಕ್ಕೆ 12 ಲಕ್ಷ ರೂ. ಪರವಾನಗಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಲಿದ್ದಾರೆ. ಮೇಲು ಸೇತುವೆಯ ಎರಡೂ ಕಡೆ ಎಸ್ಕಲೇಟರ್‌ಗಳು ಇರುತ್ತವೆ. ಈ ಸೌಲಭ್ಯದಿಂದ ವಿಕಲಾಂಗರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳಿಗೆ ಅನುಕೂಲವಾಗುತ್ತದೆ. ಜತೆಗೆ ಲಿಫ್ಟ್ ಕೂಡ ಇರುತ್ತದೆ ಎಂದರು ಡಿಸಿಎಂ.
ಈ ಸ್ಕೈವಾಕ್ ನಿರ್ಮಾಣಕ್ಕೆ 4 ಕೋಟಿ ರೂ. ವೆಚ್ಚವಾಗುತ್ತಿದ್ದು, ಆರು ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಪಾಲಿಕೆ ಮಾಜಿ ಸದಸ್ಯೆ ಸರ್ವಮಂಗಳ ಕೇಶವಮೂರ್ತಿ ಇದ್ದರು.