Home ಆರೋಗ್ಯ ಕೋವಿಡ್ ಮೂರನೆ ಅಲೆ ತಡೆಯೋದು ನಮ್ಮ ಮೊದಲ ಆದ್ಯತೆ: ಬೊಮ್ಮಾಯಿ

ಕೋವಿಡ್ ಮೂರನೆ ಅಲೆ ತಡೆಯೋದು ನಮ್ಮ ಮೊದಲ ಆದ್ಯತೆ: ಬೊಮ್ಮಾಯಿ

50
0
Our first priority is to prevent Covid-19 third wave Karnataka CM in Mysore

ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಪರಿಶೀಲಿಸಿದ ಮುಖ್ಯಮಂತ್ರಿ

ಮೈಸೂರು:

ಕೋವಿಡ್ 3ನೇ ಅಲೆಯನ್ನು ತಡೆಯಲು ನಮ್ಮ ಗಮನ ಕೇಂದ್ರೀಕರಿಸಿದ್ದೇವೆ. ಮುಂಜಾಗೃತವಾಗಿ ಸೂಕ್ತ ಹಾಗೂ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್ 3ನೇ ಅಲೆಯನ್ನು ತಡೆಯಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಹೇಳಿದರು.

ಮೈಸೂರಿನ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಕೋವಿಡ್-19 ಕುರಿತ ಪರಿಶೀಲನಾ ಸಭೆ ನಡೆಸಿದ ಅವರು 1ನೇ ಮತ್ತು 2ನೇ ಅಲೆಯು ಮೊದಲು ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ, ನಂತರ ನಮ್ಮ ರಾಜ್ಯದಲ್ಲಿ ಹರಡಿದೆ. ಈ ಹಿನ್ನೆಲೆಯಲ್ಲಿ 3ನೇ ಅಲೆ ತಡೆಗಟ್ಟುವ ದೃಷ್ಟಿಯಿಂದ ಈ ಎರಡು ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದರು.

ಈ ರಾಜ್ಯಗಳ ಗಡಿಯಿಂದ ಕೋವಿಡ್ ನೆಗಿಟಿವ್ ವರದಿ ಇಲ್ಲದೆ ಪ್ರಯಾಣಿಕರು ಬರುವಂತಿಲ್ಲ. ಇದರಲ್ಲಿ ಲೋಪವಾಗದಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಗಡಿಯಲ್ಲಿ ಅಧಿಕಾರಿಗಳು 3 ಪಾಳಿಯಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಆಗಾಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಸೂಚಿಸಲಾಗಿದೆ ಎಂದರು.

Our first priority is to prevent Covid-19 third wave Karnataka CM in Mysore

ಗಡಿಯಲ್ಲಿ ಚೆಕ್‌ಪೋಸ್ಟ್ ಹೊರತುಪಡಿಸಿಯೂ ಹಲವಾರು ದಾರಿಗಳು ಇರುತ್ತವೆ. ಅಲ್ಲೆಲ್ಲ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಗಡಿ ಭಾಗದ 10 ಕಿ.ಮೀ. ವ್ಯಾಪ್ತಿಯಲ್ಲಿ ಶೇ. 100ರಷ್ಟು ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸೂಚಿಸಿದ್ದೇನೆ ಎಂದರು.

3ನೇ ಅಲೆ ಎದುರಿಸಲು ಐ.ಸಿ.ಯು. ಬೆಡ್ ಹೆಚ್ಚಳ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಮ್ಲಜನಕಯುಕ್ತ ಹಾಸಿಗೆಗಳ ಸೌಲಭ್ಯ, ಮಕ್ಕಳ ತಜ್ಞರ ನಿಯೋಜನೆ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ನೀಡಿದ ಸಲಹೆಗೆ ಅನುಗುಣವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ 14 ಆಕ್ಸಿಜನ್ ಜನರೇಟರ್ ಸ್ಥಾಪಿಸಲು ಮಂಜೂರಾಗಿದೆ. ಈ ಪೈಕಿ ಈಗಾಗಲೇ 3 ಪ್ಲಾಂಟ್‌ಗಳು ಆಗಿವೆ. ಇನ್ನು 6 ಆಕ್ಸಿಜನ್ ಜನರೇಟರ್ ಸ್ಥಾಪನೆ ಪ್ರಗತಿಯಲ್ಲಿದೆ. ಉಳಿದ 5 ಜನರೇಟರ್ ಬರಬೇಕಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು ಎಂದರು.

ಪ್ರತಿ ಹಳ್ಳಿಯಲ್ಲೂ ಮಕ್ಕಳ ಆರೋಗ್ಯ ಸ್ಥಿತಿಗತಿಯನ್ನು ಅರಿಯಲು ಆರೋಗ್ಯ ಶಿಬಿರ ಮಾಡಬೇಕು. ಅಪೌಷ್ಠಿಕ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ನೀಡಬೇಕು. ಆರೋಗ್ಯ ಇಲಾಖೆಯಿಂದ ಪೋಷಕಾಂಶ ಔಷಧಿಗಳನ್ನು ನೀಡಬೇಕು ಎಂದರು.

ಪ್ರಸ್ತುತ 60-65 ಲಕ್ಷ ಡೋಸ್ ಲಸಿಕೆ ಕೇಂದ್ರದಿಂದ ಬರುತ್ತಿದೆ. ಈ ಪ್ರಮಾಣವನ್ನು 1.5 ಕೋಟಿಗೆ ಹೆಚ್ಚಿಸುವಂತೆ ಕೇಳುತ್ತಿದ್ದೇವೆ. ಅದು ಬಂದರೆ ಬಹುತೇಕ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದರು.

ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬರುವವರ ಸಂಖ್ಯೆ ತುಂಬಾ ಹೆಚ್ಚಿದೆ. ಗಡಿ ಜಿಲ್ಲೆಯಾಗಿರುವ ಇಲ್ಲಿ ನಿಯಂತ್ರಣ ಸಾಧ್ಯವಾದರೆ ರಾಜ್ಯದಲ್ಲಿ ನಿಯಂತ್ರಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ ಎಂದರು.

ರಾಜ್ಯದಲ್ಲಿ ಲಾಕ್‌ಡೌನ್ ಮಾಡಬೇಕಾದ ಪರಿಸ್ಥಿತಿ ಆಗದಂತೆ ತಡೆಯುವ ಪ್ರಯತ್ನ ನನ್ನದು. ಸೂಕ್ತ ಮುಂಜಾಗೃತ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಂಡರೆ ಇದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕೆ.ಸಿ.ನಾರಾಯಣಗೌಡ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಸಾ.ರಾ.ಮಹೇಶ್, ಮರಿತಿಬ್ಬೇಗೌಡ, ಸಂದೇಶ್ ನಾಗರಾಜು, ಎಲ್. ನಾಗೇಂದ್ರ, ಹೆಚ್.ಪಿ.ಮಂಜುನಾಥ್, ಡಾ. ಯತೀಂದ್ರ ಸಿದ್ದರಾಮಯ್ಯ, ಹರ್ಷವರ್ಧನ್, ಕೆ. ಮಹದೇವ, ಕೆ.ಟಿ.ಶ್ರೀಕಂಠೇಗೌಡ, ಎಂ.ಅಶ್ವಿನ್ ಕುಮಾರ್, ಉಪ ಮೇಯರ್ ಅನ್ವರ್ ಬೇಗ್, ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪಂಚಾಯಿತಿ ಸಿ.ಇ.ಓ ಎ.ಎಂ. ಯೋಗೀಶ್, ಎಸ್‌ಪಿ ಆರ್. ಚೇತನ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here