ಬೆಂಗಳೂರು:
ಕೋವಿಡ್ ಪ್ರಕರಣಗಳನ್ನು ಮೊದಲೇ ಗುರುತಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ‘ವೈದ್ಯರು ಪ್ರತಿ ಮನೆಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆಗೊಳಪಡಿಸುವ’ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ರೂಪಿಸಲಿದೆ. ಕೋವಿಡ್ ಪರಿಸ್ಥಿತಿಯ ಕುರಿತಂತೆ ವಸ್ತುಸ್ಥಿತಿ ಅರಿಯಲು ಸೋಮವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕಂದಾಯ ಸಚಿವ ಆರ್ ಅಶೋಕ ಅವರು ಈ ವಿಶೇಷ ಕಾರ್ಯಕ್ರಮವನ್ನು ಆಗಸ್ಟ್ 16 ರಿಂದ ಆರಂಭಿಸಲಾಗುವ ಕುರಿತಂತೆ ಮಾಹಿತಿ ನೀಡಿದರು. ಮೊದಲಿಗೆ ಪರೀಕ್ಷಾರ್ಥವಾಗಿ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿ ಎರಡು ವಾರ್ಡ್‍ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವೈದ್ಯರು, ನರ್ಸ್ ಗಳು ಮತ್ತು ಆಶಾ ಕಾರ್ಯಕರ್ತೆಯರ ತಂಡವು ಪ್ರತಿ ಮನೆಗೆ ಭೇಟಿ ನೀಡಲಿದೆ. ಈ ಉದ್ದೇಶಕ್ಕಾಗಿ, ಒಂದು ಆಪ್ ನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ರೋಗಿಗಳ ರೋಗಲಕ್ಷಣಗಳನ್ನು ಪರೀಕ್ಷಿಸಿ ಮಾಹಿತಿ ಅಪ್‍ಲೋಡ್ ಮಾಡಲಾಗುತ್ತದೆ. ನಿವಾಸಿಗಳು ಲಸಿಕೆ ತೆಗೆದುಕೊಂಡಿದ್ದಾರೆಯೇ ಮತ್ತು ತೆಗೆದುಕೊಳ್ಳದೇ ಇರಲು ಕಾರಣಗಳೇನು ಎನ್ನುವದನ್ನು ಪರೀಕ್ಷಿಸಲಾಗುತ್ತದೆ. ಯಾರಿಗಾದರು ಕೋವಿಡ್ ಲಕ್ಷಣ ಕಂಡುಬಂದರೆ ಸ್ಥಳದಲ್ಲೇ ಪರೀಕ್ಷೆ ಮಾಡಲಾಗುತ್ತದೆ ಮತ್ತು ವೈದ್ಯಕೀಯ ಕಿಟ್‍ಗಳನ್ನು ಸಹ ನೀಡಲಾಗುತ್ತದೆ.
“ಕೋವಿಡ್ ಪಾಸಿಟಿವ್ ಆದ ಆರು ಗಂಟೆಯೊಳಗೆ ವೈದ್ಯರ ತಂಡವು ಮನೆ ತಲುಪಬೇಕೆಂದು ನಾವು ನಿರ್ಧರಿಸಿದ್ದೇವೆ. ವೈದ್ಯರ ಹೆಸರು ಮತ್ತು ದೂರವಾಣಿ ಸಂಖ್ಯೆಗಳೊಂದಿಗೆ ವೈದ್ಯಕೀಯ ಕಿಟ್‍ಗಳನ್ನು ಸಹ ನೀಡುತ್ತೇವೆ. ಮನೆಯಲ್ಲಿ ಪ್ರತ್ಯೇಕವಾಗಿರುವ ರೋಗಿಗಳು ಅದರಲ್ಲಿನ ವೈದ್ಯರನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಲು ನೆರವಾಗುತ್ತದೆ. ಕ್ರಮೇಣ, ಮನೆ ಮನೆ ಸಮೀಕ್ಷೆಯನ್ನು ಬೆಂಗಳೂರಿನ ಎಲ್ಲಾ 29 ಲಕ್ಷ ಮನೆಗಳಿಗೆ ವಿಸ್ತರಿಸಲಾಗುತ್ತದೆ. ಅಗತ್ಯ ವಾಹನಗಳು ಮತ್ತು ಪಿಪಿಇ ಕಿಟ್‍ಗಳನ್ನು ತಂಡಗಳಿಗೆ ಒದಗಿಸಲಾಗುವುದು. ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಸಹ ಮಾಡುತ್ತೇವೆ ಮತ್ತು ಈ ಯೋಜನೆಯನ್ನು ಆರಂಭಿಸುವ ಮೂಲಕ ಬೆಂಗಳೂರು ಇಡೀ ದೇಶದಲ್ಲಿ ಒಂದು ಮಾದರಿ ನಗರವಾಗಿ ಹೊರಹೊಮ್ಮಲಿದೆ. ಆರಂಭದಲ್ಲಿ ಸುಮಾರು 108 ತಂಡಗಳನ್ನು ರಚಿಸಲಾಗುವುದು ” ಎಂದು ಅಶೋಕ ಹೇಳಿದರು.
ಬೆಂಗಳೂರು ನಗರ ಕೋವಿಡ್ ಮತ್ತು ಪ್ರವಾಹ ಉಸ್ತುವಾರಿ ಸಚಿವನಾಗಿ ಕೋವಿಡ್-೧೯ ನಿರ್ವಹಣೆ ಹಾಗೂ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನಡೆಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) August 9, 2021
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ಗೌರವ ಗುಪ್ತ, ಎಲ್ಲಾ ವಲಯದ ಕಮಿಷನರ್ ಗಳು, ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/HSdUorFxgV
ಕಳೆದ 40 ದಿನಗಳಿಂದ ಬೆಂಗಳೂರಿನಲ್ಲಿ ಪ್ರತಿನಿತ್ಯ ಸರಾಸರಿ ಸುಮಾರು 400 ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಕುರಿತು ತಿಳಿಸಿದ ಸಚಿವರು “ಪ್ರಸ್ತುತ, 181 ಕೋವಿಡ್ ರೋಗಿಗಳನ್ನು ಬಿಬಿಎಂಪಿ ಆಸ್ಪತ್ರೆಯಲ್ಲಿ ಮತ್ತು 462 ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಂಗಳೂರು ನಗರ (ಬಿಬಿಎಂಪಿ ಹೊರತುಪಡಿಸಿ) ಮಿತಿಯಲ್ಲಿ 88 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಲಸಿಕೆಯ ಬಗ್ಗೆ ಹೇಳುವುದಾದರೆ, 60,54,264 (67%) ಜನರಿಗೆ ಮೊದಲ ಡೋಸ್ ನೀಡಲಾಗಿದೆ ಮತ್ತು 17,07,679 (19%) ಎರಡನೇ ಡೋಸ್ ಅನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನೀಡಲಾಗಿದೆ. ಬೆಂಗಳೂರು ನಗರ (ಬಿಬಿಎಂಪಿ ಮಿತಿಗಳನ್ನು ಹೊರತುಪಡಿಸಿ), 92% (9,78,671) ಮೊದಲ ಪಡೆದಿದೆ ಮತ್ತು 22% (2,13,976) ಎರಡೂ ಡೋಸ್‍ಗಳನ್ನು ಪಡೆದಿವೆ. ಪಾಸಿಟಿವಿಟಿ ದರವು 0.9% ನಿಂದ 0.64%ಗೆ ಕಡಿಮೆಯಾಗಿದೆ” ಎಂದು ಕಂದಾಯ ಸಚಿವರು ಹೇಳಿದರು.
ಕೋವಿಡ್ ಮುನ್ನೆಚ್ಚರಿಕೆ ಮತ್ತು ಮಳೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಇಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳೊಂದಿಗೆ ನೆಡೆಸಿದ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು. pic.twitter.com/hSM2NNSzxn
— R. Ashoka (ಆರ್. ಅಶೋಕ) (@RAshokaBJP) August 9, 2021
ಯಲಹಂಕ, ಮಹದೇವಪುರ ಮತ್ತು ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಅಪಾರ್ಟ್‍ಮೆಂಟ್‍ಗಳಿಂದ ವರದಿಯಾಗುತ್ತಿವೆ. “ನಾವು ಮಾರ್ಷಲ್‍ಗಳು ಮತ್ತು ಆರೋಗ್ಯ ಅಧಿಕಾರಿಗಳಿಗೆ ಅಪಾರ್ಟ್‍ಮೆಂಟ್‍ಗಳ ಮೇಲೆ ನಿಗಾ ಇಡುವಂತೆ ತಿಳಿಸಿದ್ದೇವೆ ಮತ್ತು ಮಾರ್ಷಲ್‍ಗಳಿಗೆ ಅಡ್ಡಿಪಡಿಸಿದರೆ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಪ್ರಕರಣಗಳ ಏರಿಕೆಯನ್ನು ತಡೆಯಲು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ನಾನು ಎಲ್ಲರನ್ನೂ ವಿನಂತಿಸುತ್ತೇನೆ. ನಾವು ಆಗಸ್ಟ್ 15 ರ ನಂತರ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಮತ್ತು ಅಗತ್ಯವಿದ್ದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅಶೋಕ ಹೇಳಿದರು.