Home ಕರ್ನಾಟಕ ಅಧಿಕಾರದಿಂದ ಬಿಜೆಪಿ ತೆಗೆದು ಕಾಂಗ್ರೆಸ್ ಕೂರಿಸಲು ಜನ ತೀರ್ಮಾನಿಸಿದ್ದಾರೆ; ಡಿ.ಕೆ. ಶಿವಕುಮಾರ್

ಅಧಿಕಾರದಿಂದ ಬಿಜೆಪಿ ತೆಗೆದು ಕಾಂಗ್ರೆಸ್ ಕೂರಿಸಲು ಜನ ತೀರ್ಮಾನಿಸಿದ್ದಾರೆ; ಡಿ.ಕೆ. ಶಿವಕುಮಾರ್

98
0

ಬೆಂಗಳೂರು:

‘ರಾಜ್ಯದ ಜನ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಕಾಂಗ್ರೆಸ್ ಅನ್ನು ಕೂರಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಬಿಜೆಪಿಯವರು ಏನೇ ಸರ್ಕಸ್ ಮಾಡಿದರೂ ಪ್ರಯೋಜನವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಅವರು ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ವೈರಲ್ ಆಗಿರುವ ಆಡಿಯೋ ತಮ್ಮದಲ್ಲ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಯಾರಿಗೂ ಗೊತ್ತಿಲ್ಲದ ಹಳ್ಳಿ ಜನ ಮಾತನಾಡಿದ್ದರೆ ಅದು ಬೇರೆ ವಿಚಾರ ಆಗುತ್ತಿತ್ತು. ಆಡಿಯೋ, ವಿಡಿಯೋ ಯಾರ್ಯಾರದು ಅನ್ನುವುದು ಬಗ್ಗೆ ಮಾಧ್ಯಮಗಳಿಗೆ ಚೆನ್ನಾಗಿ ಗೊತ್ತಿದೆ. ಯಾರ ಧ್ವನಿ ಯಾರ ದೇಹ ಎಂಬುದು ಎಲ್ಲರಿಗೂ ತಿಳಿದಿದೆ. ನನ್ನ ಧ್ವನಿ ಯಾವುದು, ಸಿದ್ದರಾಮಯ್ಯನವರದು, ಕುಮಾರಸ್ವಾಮಿಯವರದು, ದೇವೇಗೌಡರದು, ಯಡಿಯೂರಪ್ಪನವರದು, ಕಟೀಲ್ ಅವರ ಧ್ವನಿ ಏನು, ಹೇಗೆ ಅಂತಾ ಎಲ್ಲರಿಗೂ ಗೊತ್ತಿದೆ. ಅದನ್ನು ನಕಲು ಮಾಡಲು ಸಾಧ್ಯವೇ?” ಎಂದು ಮರುಪ್ರಶ್ನಿಸಿದರು.

“ಇದು ಬಿಜೆಪಿಯ ಆಂತರಿಕ ವಿಚಾರ. ಅವರು ಬೇಕಾದ್ದನ್ನು ಅವರು ಹೇಳಿಕೊಳ್ಳಬಹುದು. ಸತ್ಯ ಎಲ್ಲರಿಗೂ ಗೊತ್ತಿದೆ. ನಾವ್ಯಾಕೆ ಅದರ ಬಗ್ಗೆ ಮಾತನಾಡಬೇಕು? ನಮಗೂ ಅದಕ್ಕೂ ಸಂಬಂಧ ಇಲ್ಲ” ಎಂದೂ ಹೇಳಿದರು.

ನಾವು ಇದರ ಬಗ್ಗೆ ಮಾತನಾಡಿದರೆ, ಇದರ ಬಗ್ಗೆ ನಿಮಗೇನು ಗೊತ್ತು ಎಂದು ಕೇಳುತ್ತಾರೆ. ಯಾವುದೋ ಅಧಿಕಾರಿಯಿಂದ ಇದನ್ನು ನಕಲಿ ಎಂದು ಹೇಳಿಸುತ್ತಾರೆ. ಹಿಂದೆ ಯಡಿಯೂರಪ್ಪ ಅವರ ಆಡಿಯೋದಿಂದ ಮೊನ್ನೆ ನಡೆದ ವಿಡಿಯೋ ಪ್ರಕರಣದವರೆಗೂ ಆಗಿದ್ದು ಇದೇ. ಆಮೇಲೆ ಏನಾಯ್ತು? ನನ್ನದಲ್ಲ ಎಂದವರೆಲ್ಲ ಆಮೇಲೆ ಏನು ಹೇಳಿದರು? ಹೀಗಾಗಿ ಈ ವಿಚಾರವಾಗಿ ನಾನು ಮಾತನಾಡಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು.

ಬಿಜೆಪಿಯವರು ಏನೇ ಮಾಡಿದರೂ ರಾಜ್ಯದಲ್ಲಿ ಅವರ ಸರ್ಕಾರ ತೆಗೆಯಲು ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದು, ನಾವು ಜನರಿಗೆ ಸಾಧ್ಯವಾದಷ್ಟು ನೆರವಾಗಲು ಸರಿಯಾದ ಕಾರ್ಯಕ್ರಮ ರೂಪಿಸುವತ್ತ ಗಮನ ಹರಿಸಿದ್ದೇವೆ’ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here