ಕೊಂದವರನ್ನು ಖಂಡಿಸುವ ಎದೆಗಾರಿಕೆ ತೋರಬೇಕಾಗಿದೆ.

  52
  0
  Prakash Sesharaghavachar

  ಭಾರತೀಯ ಮೂಲದ ಫುಲಿಟ್ಜ್ ರ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ 38ವರ್ಷದ ಡ್ಯಾನಿಶ್ ಸಿದ್ದಕ್ಕಿ ಆಫ್ಘಾನಿಸ್ಥಾನ ಮತ್ತು ತಾಲೀಬಾನ್ ನಡುವೆ ನಡೆಯುತ್ತಿರುವ ಕಾಳಗವನ್ನು ಫೋಟೋ ತೆಗೆಯುತ್ತಿರುವ ಸಂದರ್ಭದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಭಯೋತ್ಪಾದಕ ಸಂಘಟನೆ ತಾಲೀಬಾನ್ ಗುಂಡಿಗೆ ಬಲಿಯಾದರು.

  ಇವರ ಸಾವು ಎಡ ಮತ್ತು ಬಲಗಳ ನಡುವೆ ಸಾಮಾಜಿಕ ತಾಣದಲ್ಲಿ ಕಿತ್ತಾಟಕ್ಕೆ ವೇದಿಕೆಯಾಗಿದೆ. ಪರ ಮತ್ತು ವಿರೋಧಗಳ ಅಭಿಪ್ರಾಯಗಳಿಂದ ಸಾಮಾಜಿಕ ತಾಣದ ವೇದಿಕೆ ಸುಡುತ್ತಿದೆ. ಟ್ವೀಟರ್ ಫೇಸ್ ಬುಕ್ ತೆರೆದ ಕೂಡಲೇ ಪರಸ್ಪರ ದೋಷಾರೋಪಣೆಗಳು ಮತ್ತು ಕಟುವಾದ ಟೀಕೆ ಟಿಪ್ಪಣಿಗಳು ಮುಖಕ್ಕೆ ರಾಚುತ್ತದೆ.

  ಈತನ ಸಾವಿನ ಸುದ್ದಿಯು ಬಂದ ತರುವಾಯ ಡ್ಯಾನೀಶ್ ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಫೋಟೋ ತೆಗೆದು ವಿದೇಶಿ ಪತ್ರಿಕೆಗಳಿಗೆ ಮಾರಾಟ ಮಾಡಿದ ಸುದ್ದಿಯು ದೊಡ್ಡದಾಗಿ ಚರ್ಚೆಯಾಗುತ್ತಿದೆ.

  ಮೋದಿ ಸರ್ಕಾರವು ದೆಹಲಿ ಗದ್ದುಗೆಯನ್ನು ಹಿಡಿದ ತರುವಾಯ ಎಡ ಬಲಗಳ ಜಟಾಪಟಿ ಅವರವರ ಮೂಗ ನೇರಕ್ಕೆ ವ್ಯಾಖ್ಯಾನಿಸಿಕೊಂಡ ವಿಶ್ಲೇಷಣೆಗಳು ಪ್ರತಿಯೊಂದು ವಿಚಾರದಲ್ಲಿಯೂ ನಡೆಯುವುದು ಸಾಮಾನ್ಯವಾಗಿದೆ. ಡ್ಯಾನೀಶ್ ಅವರ ಸಾವಿನ ಸುದ್ದಿಯೂ ಕೂಡಾ ಎರಡು ಬಣಗಳ ಸಂರ್ಫಷಕ್ಕೆ ದಾಳವಾಗಿದೆ.ಬದುಕಿದ್ದಾಗಿಂತ ಗುಂಡಿಗೆ ಬಲಿಯಾದ ತರುವಾಯ ಡ್ಯಾನೀಶ್ ಹೆಚ್ಚು ಪ್ರಚಾರದಲ್ಲಿ ಇದ್ದಾರೆ ಎಂದರೆ ತಪ್ಪಾಗಲಾರದು.

  2014ರ ನಂತರ ಸುದ್ದಿಗಳು ತಮ್ಮ ಸೈದ್ಧಾಂತಿಕ ನಿಲುವುಗನುಗುಣವಾಗಿಯೇ ವರದಿಯಾಗುತ್ತಿರುವುದು. ಸ್ಟಾನ್ ಸ್ವಾಮಿ ಖಾಸಗಿ ಆಸ್ಪತ್ರೆಯಲ್ಲಿ ವಯೋ ಸಹಜ ಖಾಯಿಲೆಯಿಂದ ಮೃತಪಟ್ಟರೆ ಅದಕ್ಕೆ ಪ್ರಭುತ್ವದ ಅಮಾನವೀಯ ನಡೆಯೆ ಕಾರಣ ಅವರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಸಾವನ್ನು ತಮ್ಮ ಕಾರ್ಯಸೂಚಿಗೆ ತಕ್ಕ ಹಾಗೆ ತಿರುಚಿ ವರದಿ ಮಾಡಿದರು.

  ಡ್ಯಾನೀಶ್ ಸಿದ್ದಕೀ ಸಹಾ ತನ್ನ ನಂಬಿಕೆಯ ವಿಚಾರಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿದ್ದದ್ದು. ದೆಹಲಿ ಗಲಭೆ, ರೈತರ ಹೆಸರಲ್ಲಿ ಜನವರಿ 26ರ ರಂದು ನಡೆಸಿದ ದಾಂಧಲೆ ಮತ್ತು ಸಿಎಎ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಕೇವಲ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವ ಚಿತ್ರಗಳಿಗೆ ಪ್ರಾಶಸ್ತ್ಯ ಇವರ ಕೈಚಳಕದಲ್ಲಿ ಕಾಣುತ್ತಿತ್ತು. ಕೋವಿಡ್ ಸೋಂಕಿನ ಎರಡನೆಯ ಅಲೆಯಲ್ಲಿ ಏಕಾಏಕಿ ಹೆಚ್ಚಳವಾದ ಸೋಂಕಿನ ಸಂಖ್ಯೆಯಿಂದ ಕೊಂಚ ದಿನ ಮೂಲಭೂತ ಸೌಕರ್ಯ ಕುಸಿದು ದೇಶ ಪರದಾಡಿತ್ತು. ಸಾವಿನ ಸಂಖ್ಯೆಯೂ ಒಮ್ಮೆಗೆ ಏರಿಕೆ ಕಂಡಿತ್ತು.

  ನಮ್ಮ ಸಂಸ್ಕೃತಿಯಲ್ಲಿ ದೇಹವನ್ನು ದಹನ ಮಾಡಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ವಿಶೇಷವಾಗಿ ಕೋವಿಡ್ ನಿಂದ ಸಾವನ್ನಪ್ಪಿದವರನ್ನು ಹೂಳುವ ಪದ್ದತಿಯವರು ಸಹಾ ದಹನ ಮಾಡಿದ್ದರು.

  ದಿನವೊಂದಕ್ಕೆ ಹತ್ತು ಅಥವಾ ಹನ್ನೆರೆಡು ಸಾವು ಸಂಭವಿಸಿದಾಗ ಇದ್ದ ಚಿತಾಗಾರಗಳೇ ಸಾಕಾಗಿತ್ತು ಆದರೆ ದಿನಕ್ಕೆ 300ರಿಂದ 400 ಸಾವು ಸಂಭವಿಸಿದಾಗ ಚಿತಾಗಾರಗಳು ಸಾಕಾಗದೆ ಬಯಲು ಪ್ರದೇಶದಲ್ಲಿ ಒಮ್ಮೆಗೆ ಹತ್ತಾರು ಹೆಣಗಳ ಅಂತ್ಯಸಂಸ್ಕಾರಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡುವುದು ಅನಿವಾರ್ಯವಾಯಿತು.

  Danish Siddiqui
  ಡ್ಯಾನಿಶ್ ಸಿದ್ದಕ್ಕಿ

  ಬಯಲಿನಲ್ಲಿ ಒಮ್ಮೆಗೆ 15ರಿಂದ 20 ಚಿತ್ರಗಳು ಉರಿಯುವ ದೃಶ್ಯ ಎಂತವರನ್ನು ತಲ್ಲಣಗೊಳಿಸುವಂತಹದು. ಈ ರೀತಿ ಹಲವಾರು ಹೆಣಗಳು ಅಗ್ನಿಸ್ಪರ್ಶ ವಾಗುವ ಸಂಕಟದ ಹಾಗೂ ನೋವಿನ ಚಿತ್ರಗಳನ್ನು ಡ್ರೋನ್ ಕ್ಯಾಮರಾ ಮೂಲಕ ಡ್ಯಾನೀಶ್ ಕ್ಲಿಕ್ಕಿಸಿ ಅವನ್ನು ನ್ಯೂಯಾರ್ಕ್ ಟೈಂಸ್ ಮುಂತಾದ ವೀದೇಶಿ ಮಾಧ್ಯಮಗಳಗೆ ನೀಡಿ ದೇಶದ ಮಾನವನ್ನು ಹರಾಜು ಹಾಕಿದರು ಎಂಬುದು ಇವರ ಮೇಲೆ ಇದ್ದ ಆರೋಪ.

  35 ಕೋಟಿ ಜನಸಂಖ್ಯೆಯ ಅಮೇರಿಕಾ ದೇಶದಲ್ಲಿ 6ಲಕ್ಷ ಜನ ಕೋವಿಡ್ ಗೆ ಬಲಿಯಾಗಿ ಸ್ಮಶಾನದಲ್ಲಿ ಸಮಾಧಿ ಮಾಡಿದರು. ಎಲ್ಲಿಯಾದರು ಒಂದೇ ಒಂದು ಚಿತ್ರವು ಸಾಮೂಹಿಕವಾಗಿ ಮಣ್ಣು ಮಾಡುವ ಫೋಟೋ ಕಾಣಲು ಸಿಗುವುದಿಲ್ಲ. ಹಾಗೊಮ್ಮೆ ಯಾರಾದರು ಆ ರೀತಿಯ ಚಿತ್ರವನ್ನು ಪ್ರಕಟ ಮಾಡಿದರೆ ಕುಟುಂಬಸ್ಥರು ಸಾವಿರಾರು ಡಾಲರ್ ಗಳಿಗೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಪತ್ರಿಕೆಯವರಿಂದ ಕಕ್ಕಿಸುತ್ತಿದ್ದರು.

  ಸಾವಿನ ಅಂತ್ಯವಿಧಿಯು ಕುಟುಂಬಸ್ಥರ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಿದ್ದು. ಅದು ಸಾರ್ವಜನಿಕ ಪ್ರದರ್ಶನಕ್ಕೊ ಅಥವಾ ಯಾವುದೊ ಸಿದ್ಧಾಂತದ ಕಾರ್ಯಸೂಚಿ ಭಾಗವಾಗಲು ಸಾಧ್ಯವಿಲ್ಲ. ತಮ್ಮ ಕುಂಟುಬದ ಸದಸ್ಯರ ಅಂತ್ಯಕ್ರಿಯೆಯು ಪತ್ರಿಕೆಗಳಿಗೆ ಆಹಾರವಾದರೆ ಮನೆಯವರಿಗೆ ಅದೆಷ್ಟು ದು:ಖವಾಗುವುದಿಲ್ಲ. ಆದರೆ ಹೆಸರು ಹಾಳು ಮಾಡುವ ಉದ್ದೇಶವೆ ಪ್ರಬಲವಾಗಿದ್ದಾಗ ಸಂವೇದನಾಶೀಲತೆಯಾಗಲೀ ಸರಿ ತಪ್ಪುಗಳು ಮಸಕಾಗಿ ಹೋಗುತ್ತದೆ.

  ವಿದೇಶಿ ಮಾಧ್ಮಗಳು ಭಾರತವನ್ನು ಕಳಪೆಯಾಗಿ ಬಿಂಬಿಸಲು ದೊರೆಯುವ ಎಲ್ಲಾ ಅವಕಾಶವನ್ನು ಗರಿಷ್ಟ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ ಮತ್ತು ಪುಲಿಟ್ಜರ್ ಮುಂತಾದ ಪ್ರಶಸ್ತಿಗಳನ್ನು ನೀಡಿ ಅವರನ್ನು ಉತ್ತೇಜಿಸುತ್ತಾರೆ. ಚನ್ನಿ ಆನಂದ್, ಮುಖ್ತಾರ್ ಖಾನ್ ಮತ್ತು ದಾರ್ ಯಾಸೀನ್ ಎಂಬ ಮೂವರು ಜಮ್ಮು ಕಾಶ್ಮೀರದ ಅಸೋಸಿಯೇಟಡ್ ಪ್ರೆಸ್ ಸಂಸ್ಥೆಗೆ ಸೇರಿದ ಛಾಯಾಗ್ರಾಹಕರಿಗೆ ಕಾಶ್ಮೀರದ 370ನೇ ವಿಧಿಯನ್ನು ತೆಗೆದು ಹಾಕಿದ ತರುವಾಯ ವಿಧಿಸಿದ ಕರ್ಫೂ ಮತ್ತು ಪೊಲೀಸ್ ಕಾರ್ಯಾಚರಣೆಯ ಫೋಟೋಗಳಿಗೆ 2020ರ ಪುಲಿಟ್ಜರ್ ಪ್ರಶಸ್ತಿಯನ್ನು ನೀಡಲಾಗಿತ್ತು.

  ಇದನ್ನು ಖಂಡಿಸಿ ಕಾಶ್ಮೀರದ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಮೀರ್ ರವರು ತನ್ನ ಪೊಲೀಸ್ ಅಧಿಕಾರಿಯೊಬ್ಬರು ಭಯೋತ್ಪಾದಕರ ಗುಂಡಿಗೆ ಬಲಿಯಾದಾಗ ಅವರ ಚಿಕ್ಕ ಮಗಳು ತೀವ್ರ ದು:ಖದಿಂದ ಅಳುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿ ಈ ಚಿತ್ರಕ್ಕೆ ಪ್ರಶಸ್ತಿ ಇಲ್ಲವಾ ಎಂದು ಪ್ರಶ್ನಿಸಿದ್ದರು. ಇವರಿಗೆ ಉತ್ತರಿಸುವ ಧೈರ್ಯ ಪ್ರಶಸ್ತಿ ನೀಡುವವರಿಗೂ ಮತ್ತು ಪಡೆದವರಿಗೂ ಇರಲಿಲ್ಲ.

  ಆಫ್ಘಾನಿಸ್ಥಾನದಿಂದ ಅಮೆರಿಕಾ ಸೈನ್ಯವು ರಾತ್ರೋ ರಾತ್ರಿ ತಮ್ಮ ಡೇರಾ ಕಿತ್ತುಕೊಂಡು ವಾಪಸ್ ಹೋಗಿಬಿಟ್ಟರು. ಈ ಸಮಯಕ್ಕೆ ಕಾಯುತ್ತಿದ್ದ ತಾಲೀಬಾನ್ ತನ್ನ ಹಿಡಿತವನ್ನು ಭದ್ರಪಡಿಸಿಕೊಳ್ಳಲು ಆರಂಭಿಸಿತು. ತತ್ಪರಿಣಾಮವೆ ಈಗ ಆಫ್ಘಾನಿಸ್ಥಾನದಲ್ಲಿ ಯುದ್ಧ ಆರಂಭವಾಗಿರುವುದು. ಡೋನಾಲ್ಡ್ ಟ್ರಂಪ್ ಶತಾಯು ಗತಾಯ ಸೋಲಲ್ಲಿ ಎಂದು ಬಯಸುತ್ತಿದ್ದ ಎಡಪಂಥೀಯರು ಮತ್ತು ಮೋದಿ ವಿರೋಧಿಗಳು ಜೋ ಬೈಡನ್ ಪರ ಬಲವಾದ ವಕಾಲತ್ತು ವಹಿಸಿದ್ದರು. ಇಂದು ಇವರ ಬೈಡನ್ ನ ಆತುರದ ನಿರ್ಧಾರವೆ ಡ್ಯಾನೀಶ್ ಸಾವಿಗೆ ಕಾರಣವಾಗಿರುವುದು ಎಂತಹ ವಿಪರ್ಯಾಸ

  ಡ್ಯಾನೀಶ್ ಸಿದ್ದಕಿ ಸಾವು ತಾಲೀಬಾನ್ ನಿಂದ ಸಾವು ಸಂಭವಿಸಿದರೂ ನಮ್ಮ ದೇಶದ ಡೋಂಗಿ ಜಾತ್ಯಾತೀತ ವಾದಿಗಳಿಗೆ ತಾಲೀಬಾನ್ ಹೆಸರಿಸಿ ಖಂಡಿಸುವ ಧೈರ್ಯವೇ ಇಲ್ಲವಾಗಿದೆ. ಡ್ಯಾನೀಶ್ ಸಾವು ಗುಂಡೇಟಿನಿಂದ ಸಂಭವಿಸಿದೆ. ಆಫ್ಘನ್ ಮತ್ತು ತಾಲೀಬಾನ್ ನಡುವಿನ ಚಕಮಕಿಯಲ್ಲಿ ಮೃತಪಟ್ಟನ್ನು ಎಂದು ತಾಲೀಬಾನ್ ಕ್ರೌರ್ಯವಾಗಲಿ ಅಥವಾ ಅವರ ಭಯೋತ್ಪಾದಕ ಕೃತ್ಯವನ್ನಾಗಲೀ ಖಂಡಿಸುವ ಎದೆಗಾರಿಕೆಯೇ ಬೇಡವಾ? ಅಯ್ಯೊ ತಮ್ಮ ನಡುವಿನ ಅಪ್ರತಿಮ ಪ್ರತಿಭೆಯು ತಮ್ಮದೆ ಬಂಧು ಇಂದು ಮೂಲಭೂತವಾದಿಗಳ ಕೈಯಲ್ಲಿ ಮರಣವನ್ನಪ್ಪಿದರೂ ಅಪ್ಪಿತಪ್ಪಿಯೂ ಸಹಾ ತಾಲೀಬಾನ್ ಇವರ ಬಾಯಲ್ಲಿ ಬರಲೇ ಇಲ್ಲ.ಜೀವಪರರಿಗೆ ತಮ್ಮ ಜೀವದ ಭಯವಾ? ಇಲ್ಲ ತಾಲಿಬಾನ್ ಖಂಡಿಸುವುದು ತಮ್ಮ ಜಾತ್ಯಾತೀತ ಸಿದ್ಧಾಂತಕ್ಕೆ ಧಕ್ಕೆಯಾಗುತ್ತದೆ ಎಂಬ ಕೊರಗಾ?

  ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ ಡ್ಯಾನೀಶ್ ಸಾವಿಗ ಶೋಕ ವ್ಯಕ್ತ ಪಡಿಸುತ್ತಾ ಇವನ ಸಾವನ್ನು ಸಂಭ್ರಮಿಸಿದವರು ಬಾಸ್ಟರ್ಡ್ ಎಂದು ತುಚ್ಛ ಭಾಷೆಯಲ್ಲಿ ನಿಂದಿಸಿದ ಈ ಮಹಾನುಭಾವನು ತಾಲೀಬಾನ್ ರಾಕ್ಷಸೀ ಕೃತ್ಯದಿಂದ ಡ್ಯಾನೀಶ್ ಸಾವು ಸಂಭವಿಸಿರುವುದು ಎಂದು ಖಂಡಿಸುವ ತಂಟೆಗೆ ಹೋಗಲಿಲ್ಲ. ಖ್ಯಾತ ಪತ್ರಕರ್ತ ರಾಜ್ ದೀಪ್ ಸರ್ದೆಸಾಯಿಯವರು ಡ್ಯಾನೀಶ್ ಸಾವಿಗೆ ದು:ಖ ವ್ಯಕ್ತ ಪಡಿಸುತ್ತಾರೆ ಆದರೆ ಕೊಂದವರ ಬಗ್ಗೆ ಚಕಾರವಿಲ್ಲ ಎನ್ ಡಿ ಟೀವಿ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಡ್ಯಾನೀಶ್ ಕ್ಲಿಕ್ಕಿಸಿದ ದೆಹಲಿ ದಂಗೆಯ ಚಿತ್ರವನ್ನು ಹಾಕಿ ತಮ್ಮ ಸಂತಾಪ ಹೇಳುತ್ತಾರೆ ಯಾರಿಂದ ಮೃತಪಟ್ಟ ಎಂದು ಹೇಳುವ ಗೋಜಿಗೆ ಹೋಗಲ್ಲ.

  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಬಹಳ ನಾಜೂಕಾಗಿ ಟ್ವೀಟ್ ಮಾಡಿ ಒಂದಕ್ಷರವೂ ಕೊಂದವರ ಬಗ್ಗೆ ಉಲ್ಲೇಖಿಸುವುದಿಲ್ಲ. ಪ್ರಾಯಶ: 2013 ರಲ್ಲಿ ತಾಲಿಬಾನ್ ಸ್ಥಾಪಕ ಮುಲ್ಲಾ ಅಬ್ದುಲ್ ಸಲೀಂ ಜ಼ಾಫಿ ಗೆ ಭಾರತದಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಕೆಂಪುಗಂಬಳಿ ಹಾಸಿ ಸ್ವಾಗತಿಸಿದ್ದ ಕಾರಣ ತಾಲಿಬಾನ್ ಖಂಡಿಸಲು ರಾಹುಲ್ ಗಾಂಧಿಗೆ ಬಾಯಿ ಕಟ್ಟಿರಬೇಕು.

  ಎಡಿಟರ್ ಗಿಲ್ಡ್ ಆಫ್ ಇಂಡಿಯಾ ದೇಶದ ಪತ್ರಕರ್ತರ ಅತ್ಯುನ್ನತ ಪತ್ರಿಕಾ ಬಳಗ. ಗಿಲ್ಡ್ ನವರು ಡ್ಯಾನೀಶ್ ಸಾವಿಗೆ ಸಂತಾಪ ವ್ಯಕ್ತ ಪಡಿಸುವಾಗ ಇವರ ಖಂಡನೆಯ ಗುರಿಯು ರೈಟ್ ವಿಂಗ್ ಟ್ರೋಲ್ ಗಳನ್ನು ಖಂಡಿಸಿ ನಿರ್ಣಯ ಮಾಡುವಷ್ಟು ಭೌಧ್ದಿಕ ದಿವಾಳಿತನವನ್ನು ತೋರುತ್ತಾರೆ. ಇಂತಹ ಪ್ರತಿಷ್ಟಿತ ಸಂಸ್ಥೆಯು ಟ್ರೋಲ್ ಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಕೊಂದವರ ಹೆಸರೂ ಹೇಳಲು ಭಯಬಿದ್ದಿದ್ದಾರೆ. ಇವರ ಹೇಡಿತನ ಆ ಸಾಹಸಿ ಛಾಯಾಗ್ರಾಹಕನಿಗೆ ಅಪಮಾನ ಮಾಡಿದಂತಲ್ಲವಾ?

  ಬಹುತೇಕ ಎಡಪಂಥೀಯ ಪತ್ರಕರ್ತರು ಸ್ವಯಂಘೋಷಿತ ಬುದ್ಧಿಜೀವಿಗಳ ವರ್ತನೆಯು ಇದಕ್ಕಿಂತ ಭಿನ್ನವಾಗಿಲ್ಲ. ಇವರೆಲ್ಲರಿಗೂ ಡ್ಯಾನೀಶ್ ಕೊಂದವರಿಗಿಂತ ಅವನ ಸಾವನ್ನು ಸಂಭ್ರಮಿಸಿದವರು ಮಹಾಪರಾಧಿಗಳಾಗಿ ಕಂಡಿದ್ದಾರೆ.

  ಕೆಲವು ತಿಂಗಳ ಹಿಂದೆ ಆಜ್ ತಕ್ ಸಂಪಾದಕ ರೋಹಿತ್ ಸರ್ಡಾನ ಕೊರೋನಾಗೆ ಬಲಿಯಾದರು. ಆ ಸಂದರ್ಭದಲ್ಲಿ ಇವರ ಸಾವನ್ನು ಒಂದು ವರ್ಗದ ಜನ ತುಂಬಾ ಸಂಭ್ರಮಿಸಿದ್ದರು ಆ ವೇಳೆಯಲ್ಲಿ ಇಂದು ಬಲ ಪಂಥೀಯರ ಮೇಲೆ ಕಿಡಿ ಕಾರುತ್ತಿರುವವರು ಮೌನಕ್ಕೆ ಶರಣಾಗಿದ್ದರು.

  ಅಮಿತ್ ಶಾ ರವರಿಗೆ ಕೊರೊನಾ ಎಂದು ಸುದ್ದಿ ಬಿತ್ತರವಾದ ತರುವಾಯ ಅದೆಷ್ಟು ಜನ ಅವರಿಗೆ ಕೇಡು ಬಗೆದು ಟ್ವೀಟ್ ಮಾಡಲಿಲ್ಲ? ಆಗ ಮಾನವೀಯತೆಯ ಪಾಠವು ಮಂಜುಪೆಟ್ಟಿಗೆಯನ್ನು ಸೇರಿತ್ತು ಆದರೆ ಇಂದು ಕಂಡ ಕಂಡವರೆಲ್ಲಾ ಮಾನವೀಯ ಮೌಲ್ಯಗಳ ಬಗ್ಗೆ ಪ್ರವಚನ ನೀಡುತ್ತಿದ್ದಾರೆ.

  ಸತ್ತವರ ಸಾವನ್ನು ಸಂಭ್ರಮಿಸುವುದು ಎಷ್ಟು ತಪ್ಪೊ ಅಷ್ಟೇ ತಪ್ಪು ಕೊಂದವರನ್ನು ಖಂಡಿಸದಿರುವುದು ಎಂಬುದನ್ನು ಈ ಡೋಂಗಿ ಮಾನವತಾವಾದಿಗಳು ಅರಿತುಕೊಳ್ಳಬೇತು.

  ಡ್ಯಾನೀಶ್ ಸಿದ್ದಕ್ಕಿಯ ಸಾವಿಗೆ ಕಾರಣರಾದ ಭಯೋತ್ಪಾದಕ ಸಂಘಟನೆಯನ್ನು ಕಟುವಾಗಿ ಖಂಡಿಸದೆ ಅವನ ಸಹೋದ್ಯೊಗಿಗಳು ಮೃತಪಟ್ಟ ಪೋಟೋಗ್ರಾಫರ್ ಗೆ ಬಹುದೊಡ್ಡ ಅಪಚಾರವೆಸಗಿರುವುದಲ್ಲದೆ ಅಪಮಾನವನ್ನು ಇಂದು ಮಾಡಿದ್ದಾರೆ.

  ಪ್ರಕಾಶ್ ಶೇಷರಾಘವಾಚಾರ್
  sprakashbjp@gmail.com

  Prakash Sesharaghavachar is a Joint Spokesperson of Karnataka BJP

  Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

  LEAVE A REPLY

  Please enter your comment!
  Please enter your name here