Home ಬೆಂಗಳೂರು ನಗರ ಗೃಹ ಸಚಿವರ ಸ್ವಕ್ಷೇತ್ರದಲ್ಲಿ ಊರ ಹೊರಗಿಟ್ಟಿದ್ದ ಬಾಣಂತಿ, ಹಸುಗೂಸುಗಳನ್ನು ಮನೆಗೆ ಸೇರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

ಗೃಹ ಸಚಿವರ ಸ್ವಕ್ಷೇತ್ರದಲ್ಲಿ ಊರ ಹೊರಗಿಟ್ಟಿದ್ದ ಬಾಣಂತಿ, ಹಸುಗೂಸುಗಳನ್ನು ಮನೆಗೆ ಸೇರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

19
0

ತುಮಕೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ, ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದಲ್ಲಿ ಮೂಢನಂಬಿಕೆಯಿಂದಾಗಿ ಮಳೆ-ಚಳಿ ಲೆಕ್ಕಿಸದೇ ಊರಹೊರಗಿನ ಕೃಷ್ಣ ಕುಟೀರದಲ್ಲಿಟ್ಟಿದ್ದ, ಮೂವರು ಬಾಣಂತಿ ಮತ್ತು ಮಕ್ಕಳನ್ನು ಸೋಮವಾರ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮನೆಗೆ ಸೇರಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಈ ಗ್ರಾಮಕ್ಕೆ ಭೇಟಿ ನೀಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಕೃಷ್ಣ ಕುಟೀರದಲ್ಲಿದ್ದ ಬಾಣಂತಿ ಮತ್ತು ಮಕ್ಕಳ ಆರೋಗ್ಯವನ್ನು ವಿಚಾರಿಸಿ ಮರಳಿ ಅವರ ಮನೆಗೆ ಸೇರಿಸಲು ಅವರ ಕುಟುಂಬ ಮತ್ತು ಗ್ರಾಮಸ್ಥರ ಮನವೊಲಿಸಿದ್ದರು. ಆದರೆ ಅವರ ಮನೆಗಳು ಮಳೆ ಬಂದರೆ ಸೋರುವ ಸ್ಥಿತಿಯಲ್ಲಿದ್ದುದರಿಂದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಅವರ ಮನೆಗಳನ್ನು ದುರಸ್ತಿ ಮಾಡಿಸಿದ ನಾಗಲಕ್ಷ್ಮೀ ಚೌಧರಿ ಕೃಷ್ಣ ಕುಟೀರದಲ್ಲಿದ್ದ ಶಿವಮ್ಮ, ರಕ್ಷಿತಾ, ಶಾರದಾರನ್ನು ಅವರ ಮನೆಗಳಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯವರ ನಡೆಗೆ ಬಾಣಂತಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮಗುವಿಗೆ ನಾಗಲಕ್ಷ್ಮೀ ಎಂದು ನಾಮಕರಣ ಮಾಡುವುದಾಗಿ ಬಾಣಂತಿಯೊಬ್ಬರು ಹೇಳಿದ್ದಾರೆ. ದುರಸ್ತಿ ಮಾಡಿಕೊಟ್ಟ ಮನೆಗೂ ನಾಗಲಕ್ಷ್ಮೀ ಎಂದು ಹೆಸರಿಡುವುದಾಗಿ ಗ್ರಾಮಸ್ಥರು ತಿಳಿಸಿರುವುದು ನಾಗಲಕ್ಷ್ಮೀ ಅವರಿಗೆ ಸಂತಸ ತಂದಿದೆ.

ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರನ್ನು ಶಾಲೆಗೆ ಕಳುಹಿಸುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ ಅವರು, ಶಾಲಾ ಮಕ್ಕಳು ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಇನ್ನು ಮುಂದೆ ಯಾರೂ ಕೂಡ ತಮ್ಮ ಮಕ್ಕಳು, ಬಾಣಂತಿಯರನ್ನು ಕೃಷ್ಣ ಕುಟೀರದಲ್ಲಿ ಬಿಡದಂತೆ ಮನವಿ ಮಾಡಿದರು. ಬಳಿಕ ಕೃಷ್ಣ ಕುಟೀರಕ್ಕೆ ಬೀಗ ಹಾಕಿಸಿ, ಅದನ್ನು ಗ್ರಂಥಾಲಯ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿನಾರಾಯಣ ಅವರಿಗೆ ಕೃಷ್ಣ ಕುಟೀರದ ಬೀಗದ ಕೈ ಹಸ್ತಾಂತರಿಸಿದರು.

ಋತುಮತಿಯಾದಾಗ ಯಾರಾದರೂ ಹೆಣ್ಣು ಮಕ್ಕಳನ್ನು ಊರ ಹೊರಗಡೆ ಬಿಟ್ಟಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಪೊಲೀಸರಿಗೆ ಸೂಚಿಸಿದರು. ಅದನ್ನು ತಡೆಯಲು ಬೀಟ್ ಹೆಚ್ಚಿಸುವಂತೆ ಪೊಲೀಸರಿಗೆ ಮನವಿ ಮಾಡಿದರು. ಈ ಸಂದರ್ಭಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ, ತಹಶೀಲ್ದಾರ್ ಮಂಜುನಾಥ್, ತಾಪಂ ಇಒ ಅಪೂರ್ವ, ತೋವಿನಕೆರೆ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ, ಅಧಿಕಾರಿಗಳು ಉಪಸ್ಥಿತರಿದ್ದರು.

ಏನಿದು ಕೃಷ್ಣ ಕುಠೀರ?

ಗೊಲ್ಲರ ಹಟ್ಟಿಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣುಮಕ್ಕಳು ಋತುಮತಿಯಾದರೆ, ಮಹಿಳೆಯರಿಗೆ ಮಗು ಹುಟ್ಟಿದರೆ ಮನೆಯಿಂದ ಹೊರಗೆ ಇರಿಸುವ ಮೌಢ್ಯ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಈ ಸಂದರ್ಭದಲ್ಲಿ ಮಹಿಳೆಯರು ಯಾರ ಸಹಾಯವೂ ಇಲ್ಲದೆ ಇರಬೇಕಾಗಿದ್ದು, ನಂಜಿಗೆ ಒಳಗಾಗಿ, ಮಹಿಳೆಯರು, ಹಸುಗೂಸು ಸಾವನ್ನಪ್ಪಿರುವ ಪ್ರಕರಣಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ 2004ರಲ್ಲಿ ಹಾಲಿ ಸಹಕಾರ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ತುಮಕೂರಿನ ಬೆಳ್ಳಾವೆ ಕ್ಷೇತ್ರದಲ್ಲಿ ರಾತ್ರಿ ವೇಳೆ ಮಹಿಳೆಯರ ರಕ್ಷಣೆಗಾಗಿ ಕೃಷ್ಣ ಕುಟೀರದ ಹೆಸರಿನಲ್ಲಿ ಪ್ರತೀ ಗೊಲ್ಲರಹಟ್ಟಿಗಳಲ್ಲಿ ಒಂದೊಂದು ಮನೆಗಳನ್ನು ನಿರ್ಮಿಸಿ ಆ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಿದ್ದರು, ಇಂದಿಗೂ ಕ್ಷೇತ್ರದ ಕೆಲವು ಕಡೆಗಳಲ್ಲಿ ಕೃಷ್ಣ ಕುಟೀರಗಳನ್ನು ಕಾಣಬಹುದು.

LEAVE A REPLY

Please enter your comment!
Please enter your name here