Home ಬೆಂಗಳೂರು ನಗರ ಸದಾನಂದ ಗೌಡರಿಗೆ ಪ್ರಧಾನಿ ಮೋದಿ ಹುಟ್ಟುಹಬ್ಬದ ಶುಭಾಶಯ

ಸದಾನಂದ ಗೌಡರಿಗೆ ಪ್ರಧಾನಿ ಮೋದಿ ಹುಟ್ಟುಹಬ್ಬದ ಶುಭಾಶಯ

60
0

ಕನ್ನಡದಲ್ಲೇ ಶುಭಾಶಯ ಪತ್ರ

ಸಮಾಜಸೇವೆ ಮೂಲಕ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ

ನವದೆಹಲಿ:

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ತಮ್ಮ ಸಂಪುಟ ಸಹೋದ್ಯೋಗಿಯ 68ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಪತ್ರವೊಂದನ್ನು ಬರೆದಿರುವ ಪ್ರಧಾನಿಯವರು – “ತಮಗೆ ಜನ್ಮದಿನೋತ್ಸವದ ಹೃತ್ಪೂರ್ವಕ ಶುಭಾಶಯಗಳು. ಕೇಂದ್ರ ಮಂತ್ರಿಮಂಡಲದ ಪ್ರಮುಖ ಸದಸ್ಯರಾಗಿ ತಮ್ಮ ಕಠಿಣ ಪರಿಶ್ರಮ, ಅಸೀಮ ಶಕ್ತಿ ಹಾಗೂ ನಿರಂತರ ಕಾರ್ಯಪ್ರವೃತ್ತಿಯಿಂದ ತಾವು ನವಭಾರತದ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುತ್ತೀರಿ” ಎಂದಿದ್ದಾರೆ.

“ಪ್ರತಿಯೊಬ್ಬರ ಜೀವನದ ಮಹತ್ವವನ್ನು ತಿಳಿಯುವಂತಹ ಅಪೂರ್ವ ಸಂದರ್ಭವು ಅವರ ಜನ್ಮದಿನವಾಗಿರುತ್ತದೆ. ಅದೇ ಸಮಯದಲ್ಲಿ ಈ ಜನ್ಮದಿನವು ನಮ್ಮ ಕುಟುಂಬ, ಸಮಾಜ ಮತ್ತು ದೇಶಕ್ಕೆ ನಮ್ಮ ಕರ್ತವ್ಯಗಳನ್ನು ಪೂರೈಸಲು ಪ್ರೇರಣೆ ನೀಡುವ ದಿನವೂ ಹೌದು. ಈ ಸಂದರ್ಭದಲ್ಲಿ ತಾವು ದೇಶದ ಪ್ರಗತಿಗಾಗಿ ದುಡಿಯುವಲ್ಲಿನ ಶ್ರದ್ಧೆ ಮತ್ತು ಕಾರ್ಯವೈಕರಿಗಳೇ ನಮ್ಮ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಲಿವೆ ಎಂಬುದಾಗಿ ಹೇಳಲು ಹರ್ಷಿಸುತ್ತೇನೆ” ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

PM

“ನಾನು ಈ ಸಂದರ್ಭದಲ್ಲಿ ನಿಮ್ಮ ಜೀವನವು ಆರೋಗ್ಯ ಮತ್ತು ಸಂತೋಷಗಳಿಂದ ಸಮೃದ್ಧವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಅಭಿನಂದನೆಗಳು” ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ.

ಹಾಗೆಯೇ ಪ್ರಧಾನಿಯವರು ಟ್ಟೀಟ್ ಮೂಲಕವೂ ಸದಾನಂದ ಗೌಡ ಅವರಿಗೆ ಶುಭಾಶಯ ಕೋರಿದ್ದಾರೆ. “ಅವರೊಬ್ಬ ಅನುಭವಿ ನಾಯಕ ಹಾಗೂ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸಲು ಶ್ರಮಿಸಿದವರು. ರಾಸಾಯನಿಕ ಹಾಗೂ ರಸಗೊಬ್ಬರ ವಲಯಗಳ ಬೆಳವಣಿಗೆಗೆ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ಹಹಿಸುತ್ತಿದ್ದಾರೆ. ಅವರ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಮೋದಿ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಜನ್ಮದಿನದ ಶುಭಾಶಯಕ್ಕಾಗಿ ಪ್ರಧಾನಿಯವರಿಗೆ ಪ್ರತಿಟ್ವೀಟ್ ಮೂಲಕ ಕೃತಜ್ಞತೆ ವ್ಯಕ್ತಪಡಿಸಿರುವ ಸದಾನಂದ ಗೌಡರು ”ದೇಶದ ಅಭಿವೃದ್ಧಿಗಾಗಿ ದುಡಿಯಲು ನಿಮ್ಮ ಸಮರ್ಥ ನಾಯಕತ್ವವು ನಮಗೆಲ್ಲ ಪ್ರೇರಣಾದಾಯಕವಾಗಿದೆ. ಈ ದಿಸೆಯಲ್ಲಿ ಮುಂದೆಯೂ ತಮ್ಮ ಮಾರ್ಗದರ್ಶನವನ್ನು ಎದುರುನೋಡುವುದಾಗಿ” ಹೇಳಿದ್ದಾರೆ.

ಗಾಲಿಕುರ್ಚಿ ವಿತರಣೆ: ಈ ಮಧ್ಯೆ ಬೆಂಗಳೂರಿನಲ್ಲಿ ವಿಶೇಷವಾಗಿ ಸದಾನಂದ ಗೌಡ ಅವರು ಪ್ರತಿನಿಧಿಸುವ ಬೆಂಗಳೂರು ಉತ್ತರ ಲೊಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಂಘ-ಸಂಸ್ಥೆಯವರು ಸಮಾಜ ಸೇವಾ ಕಾರ್ಯಗಳ ಮೂಲಕ ಕೇಂದ್ರ ಸಚಿವರ ಹುಟ್ಟುಹಬ್ಬ ಆಚರಿಸಿದರು.

ಗೌಡರ ಕುಟುಂಬದವರು ನಡೆಸುವ ಸದಾಸ್ಮಿತ ಫೌಂಡೇಶನ್ ಹಾಗೂ ಸಹಕಾರಿ ವಲಯದ ಗೊಬ್ಬರ ತಯಾರಿಕಾ ಕಂಪನಿ “ಇಫ್ಕೋ”ದವರು ಜಂಟಿಯಾಗಿ 25 ಜನ ದಿವ್ಯಚೇತನರಿಗೆ ಗಾಲಿಕುರ್ಚಿಗಳನ್ನು (ವೀಲ್ ಚೇರ್ಸ್) ವಿತರಿಸಿದರು. ಕೆ ಆರ್ ಪುರ ಆಸ್ಪತ್ರೆ ಹಾಗೂ ಮಲ್ಲೇಶ್ವರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹಣ್ಣು-ಹಂಪಲ, ಸಿಹಿ ವಿತರಿಸಲಾಯಿತು. ಫೌಂಡೇಶನ್ ಅಧ್ಯಕ್ಷ ಶ್ರೀ ಡಿ ವಿ ಶಿವರಾಮ ಗೌಡ, ಕಾರ್ಯದರ್ಶಿ ಶ್ರೀ ಡಿ ಎಸ್ ಕಾರ್ತಿಕ್, ಇಫ್ಕೋ ಮಾರ್ಕೆಟಿಂಗ್ ಮ್ಯಾನೆಜರ್ (ಕರ್ನಾಟಕ ವೃತ್ತ) ಡಾ. ನಾರಾಯಣಸ್ವಾಮಿ ಮುಂತಾದವರು ಪಾಲ್ಗೊಂಡರು.

Sadananda Gowda Birthday

ತಾವರೆಕೆರೆ ಹೋಬಳಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ನರಸಿಂಹ ಮೂರ್ತಿ ಅವರ ನೇತೃತ್ವದಲ್ಲಿ ವಿಶಿಷ್ಟವಾಗಿ ಸದಾನಂದ ಗೌಡರ ಹುಟ್ಟುಹಬ್ಬ ಆಚರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಸುಮಾರು 70 ಜನ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವರು ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ. ಸಜ್ಜನರಾಗಿರುವ ಸದಾನಂದ ಗೌಡರು ಯುವ ರಾಜಕಾರಣಿಗಳಿಗೆ ಆದರ್ಶವಾಗಿದ್ದಾರೆ ಎಂದು ಶ್ರೀ ನರಸಿಂಹಮೂರ್ತಿ ಹೇಳಿದರು. ತಾವರೆಕೆರೆ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು ಪಾಲ್ಗೊಂಡರು.

ಕ್ಷೇತ್ರದ ವಿವಿದೆಡೆ ಅಭಿಮಾನಿಗಳು ಸದಾನಂದ ಗೌಡರ ಹೆಸರಿನಲ್ಲಿ ಪೂಜೆ-ಪುನಸ್ಕಾರಗಳನ್ನೂ ನೆರವೇರಿಸಿದರು.

ಈ ಮಧ್ಯೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ ಎಲ್ಲ ಕಾರ್ಯಕರ್ತ ಮಿತ್ರರಿಗೂ, ಹಿತೈಶಿಗಳಿಗೂ ಸದಾನಂದ ಗೌಡ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಶುಭಾಶಯ ಕೋರಿದ ಗಣ್ಯರು, ಸಚಿವರು, ಸಂಸದರು, ಶಾಸಕರು ಮತ್ತಿತರ ಎಲ್ಲ ಸ್ನೇಹಿತರಿಗೂ ಧನ್ಯವಾದ ಹೇಳಿದ್ದಾರೆ.

LEAVE A REPLY

Please enter your comment!
Please enter your name here