ಅಮೆರಿಕ ಗ್ರೀನ್ ಕಾರ್ಡ್ ನಿರ್ಬಂಧದಿಂದ ಭಾರತಕ್ಕೆ ಹೆಚ್ಚಿನ ತಂತ್ರಜ್ಞಾನ ಕೆಲಸ ಬರಬಹುದು: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಅಮೆರಿಕದಲ್ಲಿ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪಡೆಯುವ ಮಾರ್ಗಗಳು ಕಠಿಣವಾದರೆ ಭಾರತೀಯ ಐಟಿ ಹೊರಗುತ್ತಿಗೆ ಕಂಪನಿಗಳಿಗೆ ಒತ್ತಡ ಹೆಚ್ಚಬಹುದು. ಅದೇ ವೇಳೆ ಭಾರತದಲ್ಲಿ ಹೆಚ್ಚಿನ ಮೌಲ್ಯದ ತಂತ್ರಜ್ಞಾನ ಕೆಲಸಗಳಿಗೆ ಅವಕಾಶ ಸೃಷ್ಟಿಯಾಗಬಹುದು ಎಂದು ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ಐಟಿ ಹೊರಗುತ್ತಿಗೆ ಕಂಪನಿಗಳಿಗೆ ಅಮೆರಿಕ ಸರ್ಕಾರದ ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್ ಕಾರ್ಯಕ್ರಮದ ಅಮಾನತಿನ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಯಾಚರಣೆಯ ವೆಚ್ಚ ಏರಿಕೆ, ನುರಿತ ಸಿಬ್ಬಂದಿಯನ್ನು ಉಳಿಸಿಕೊಳ್ಳುವ ಸವಾಲು ಹಾಗೂ ಭಾರತೀಯ ವೃತ್ತಿಪರರನ್ನು ಅಮೆರಿಕಕ್ಕೆ ಕಳುಹಿಸುವಲ್ಲಿನ ಅವಕಾಶಗಳು ಕಡಿಮೆಯಾಗಬಹುದು ಎಂದಿದ್ದಾರೆ.
ಎಚ್-1ಬಿ ವೀಸಾ ಹೊಂದಿರುವವರೂ ಸೇರಿದಂತೆ ವಿದೇಶಿ ಉದ್ಯೋಗಿಗಳು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿ ಈ ಕಾರ್ಯಕ್ರಮ ಮಹತ್ವದ ಹಂತವಾಗಿದೆ ಎಂದು ಅವರು ವಿವರಿಸಿದ್ದಾರೆ.
ಭಾರತೀಯ ಎಂಜಿನಿಯರ್ಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವುದು ಕಷ್ಟಕರ ಮತ್ತು ದುಬಾರಿಯಾದರೆ, ಪ್ರತಿಭೆ ಈಗಾಗಲೇ ಇರುವ ಭಾರತದಲ್ಲೇ ಹೆಚ್ಚಿನ ಕೆಲಸಗಳು ನಡೆಯಬಹುದು ಎಂದು ಖರ್ಗೆ ಹೇಳಿದ್ದಾರೆ.
ಇದರಿಂದ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ಗಳ ವಿಸ್ತರಣೆ ವೇಗಗೊಳ್ಳಬಹುದು; ಸಂಶೋಧನೆ ಮತ್ತು ಅಭಿವೃದ್ಧಿ, ಎಂಜಿನಿಯರಿಂಗ್ ಹಾಗೂ ಉತ್ಪನ್ನ ಅಭಿವೃದ್ಧಿಯ ಹೆಚ್ಚಿನ ಜವಾಬ್ದಾರಿಗಳು ಭಾರತೀಯ ನಗರಗಳಿಗೆ ಬರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ತಂತ್ರಜ್ಞಾನ ಪ್ರತಿಭೆಗೆ ಬೇಡಿಕೆ ಹೆಚ್ಚುವುದರ ಜತೆಗೆ AI ಮತ್ತು ಡೀಪ್ ಟೆಕ್ ಕ್ಷೇತ್ರಗಳಲ್ಲಿ ಭಾರತದ ಸ್ಥಾನ ಬಲಗೊಳ್ಳಬಹುದು ಎಂದಿದ್ದಾರೆ.
ಆದರೆ ಈ ಅವಕಾಶಗಳಿಗೆ ನಾವು ಇನ್ನಷ್ಟು ಸಿದ್ಧರಾಗಬೇಕು ಎಂದು ಖರ್ಗೆ ಒತ್ತಿ ಹೇಳಿದ್ದಾರೆ.
