Home ಚಿಕ್ಕಮಗಳೂರು ಚಿಕ್ಕಮಗಳೂರು ಜನರೊಂದಿಗಿನ ಒಡನಾಟ ಸ್ಮರಿಸಿದ ಪ್ರಿಯಾಂಕಾ; ‘ಇಂದಿರಾ ಗಾಂಧಿಗೆ ಬೆಂಬಲ ನೀಡಿದ್ದಂತೆ ರಾಹುಲ್‌ಗೂ ನೀಡಿ’

ಚಿಕ್ಕಮಗಳೂರು ಜನರೊಂದಿಗಿನ ಒಡನಾಟ ಸ್ಮರಿಸಿದ ಪ್ರಿಯಾಂಕಾ; ‘ಇಂದಿರಾ ಗಾಂಧಿಗೆ ಬೆಂಬಲ ನೀಡಿದ್ದಂತೆ ರಾಹುಲ್‌ಗೂ ನೀಡಿ’

44
0
Priyanka recalled her association with people of Chikkamagaluru; 'Support Rahul like you supported Indira Gandhi'
Priyanka recalled her association with people of Chikkamagaluru; 'Support Rahul like you supported Indira Gandhi'

ಚಿಕ್ಕಮಗಳೂರು:

ಚಿಕ್ಕಮಗಳೂರು ಜಿಲ್ಲೆಯ ಜನರೊಂದಿಗಿನ ಒಡನಾಟವನ್ನು ಸ್ಮರಿಸುವ ಮೂಲಕ ಭಾವನಾತ್ಮಕವಾಗಿ ಮತಯಾಚನೆಗೆ ಯತ್ನಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಂತೆಯೇ ಈಗ ಕುಟುಂಬಕ್ಕಾಗಿ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ತಮ್ಮ ಸಹೋದರ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕಾ, ಸುಮಾರು 45 ವರ್ಷಗಳ ಹಿಂದೆ ಇಂದಿರಾಗಾಂಧಿ ಅವರು ಅನುಭವಿಸಿದ ಘಟನೆಯೇ ಇಂದು ಮರುಕಳಿಸಿದೆ. ಆಗ ಇಂದಿರಾ ಗಾಂಧಿಯವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ನಾವೀಗ ದೇವರು ಮತ್ತು ಜನರ ಆಶೀರ್ವಾದದಿಂದ ಸತ್ಯಕ್ಕಾಗಿ ಹೋರಾಡುತ್ತಿದ್ದು, ಜಯಶಾಲಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಶಾರದಾ ದೇವಿಗೆ (ಶೃಂಗೇರಿ ಶಾರದಾಂಬೆ) ಪ್ರಾರ್ಥನೆ ಸಲ್ಲಿಸಿದ ನಂತರ ಬರುತ್ತಿದ್ದೇನೆ. ಅಲ್ಲಿ ನಾನು ಶಂಕರಾಚಾರ್ಯರನ್ನು (ಈಗಿನ ಮಠಾಧೀಶರು) ಭೇಟಿಯಾದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಇಲ್ಲಿಂದ ಸ್ಪರ್ಧಿಸಿದ್ದಾರೋ ಅಥವಾ ಇಲ್ಲವೋ ಎಂದು ಪ್ರಶ್ನಿಸಿದರು. ಹೌದು, ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದರು ಎಂದು ಹೇಳಿದೆ. ಅವರು ನನ್ನನ್ನು ಆಶೀರ್ವದಿಸಿದರು. ನಾನು ನನ್ನ ಸಹೋದರನಿಗೂ ಆಶೀರ್ವಾದವನ್ನು ಕೋರಿದೆ ಎಂದು ಶೃಂಗೇರಿಯ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಪ್ರಿಯಾಂಕಾ ಗಾಂಧಿ ಹೇಳಿದರು.

ಇದನ್ನೂ ಓದಿ: ಮೈಸೂರು: ಮೈಲಾರಿ ಹೋಟೆಲ್ ನಲ್ಲಿ ದೋಸೆ ಮಾಡಿ, ಸವಿದ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ನನ್ನ ತಂದೆ (ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಕೂಡ ಇಲ್ಲಿಗೆ ಬಂದಿದ್ದರು, ಇಂದಿರಾ ಜಿ ಕೂಡ ಇಲ್ಲಿಗೆ ಬಂದಿದ್ದರು ಮತ್ತು ಯಾವಾಗ ಅವರು ಇಲ್ಲಿಗೆ ಬಂದಿದ್ದರೋ ಆಗ ಅವರಿಗೆ ಹೋರಾಟದ ಸಮಯವಾಗಿತ್ತು ಎಂದು ಮಠಾಧೀಶರು ನನಗೆ ಹೇಳಿದರು ಎಂದರು.

‘ಅಂದಿನಂತೆ ಇಂದು ಕೂಡ ನನ್ನ ಕುಟುಂಬಕ್ಕೆ ಹೋರಾಟ ಮಾಡಬೇಕಾದ ಸಮಯ ಇದಾಗಿದೆ. 1978ರಲ್ಲಿ ಇಂದಿರಾಜಿ ಈ ನೆಲಕ್ಕೆ ಬಂದಿದ್ದಾಗ, ಆ ದಿನವೂ ಹೀಗೆ ಮಳೆ ಸುರಿಯುತ್ತಿತ್ತು. ಮಳೆಯು ಶುಭ ಶಕುನವಾಗಿರುವುದರಿಂದ ಇದು ದೇವರ ಆಶೀರ್ವಾದ ಎಂದು ನಾನು ನಂಬುತ್ತೇನೆ. ಆದ್ದರಿಂದ, ಇದು ನನಗೆ ಭಾವನಾತ್ಮಕ ಕ್ಷಣವಾಗಿದೆ. ನಾನು ಕೂಡ ನಿಮ್ಮ ಮುಂದೆ ವೇದಿಕೆಯಲ್ಲಿ, ಅದೇ ಮೈದಾನದಲ್ಲಿ ಮತ್ತು ಅಂತಹುದೇ ವಾತಾವರಣದಲ್ಲಿ ನಿಂತಿದ್ದೇನೆ’ ಎಂದು ಅವರು ಹೇಳಿದರು.

1975 ರಿಂದ 1977ರ ತುರ್ತು ಪರಿಸ್ಥಿತಿ ಹೇರಿಕೆ ನಂತರ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಜನತಾ ಪಕ್ಷದ ರಾಜ್ ನಾರಾಯಣ್ ಅವರೆದುರು ಸೋತ ಒಂದು ವರ್ಷದ ನಂತರ 1978 ರಲ್ಲಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು.

ನಂತರ ಅವರ ನಿಷ್ಠಾವಂತರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಡಿಬಿ ಚಂದ್ರೇಗೌಡ (ನಂತರದ ವರ್ಷಗಳಲ್ಲಿ ಬಿಜೆಪಿ ಸೇರಿದವರು) ಅವರಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಇಂದಿರಾ ಅವರು ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ಜನತಾ ಪಕ್ಷದ ಅಭ್ಯರ್ಥಿ ವೀರೇಂದ್ರ ಪಾಟೀಲ್ ಅವರನ್ನು 77,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.

ತಮ್ಮ ಕುಟುಂಬದ ಮೂರು ತಲೆಮಾರುಗಳ ಪರವಾಗಿ ಜನರಿಗೆ ‘ಹೃದಯಪೂರ್ವಕ’ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದಿರಾ ಜೀ ಅವರು ತಮ್ಮ ಅತ್ಯಂತ ಕಷ್ಟಕರವಾದ ಹೋರಾಟದ ಸಮಯವನ್ನು ಎದುರಿಸುತ್ತಿರುವಾಗ, ಚಿಕ್ಕಮಗಳೂರಿನ ಜನರು ಅವರ ಬೆಂಬಲಕ್ಕೆ ನಿಂತರು ಮತ್ತು ಅವರನ್ನು ಕೈಬಿಡಲಿಲ್ಲ ಎಂದು ಹೇಳಿದರು.

ಅಂದು ಕೂಡ ಇಂದಿರಾ ಗಾಂಧಿ ಅವರ ವಿರುದ್ಧ ಪ್ರಕರಣವನ್ನು ದಾಖಲಾಗಿತ್ತು ಮತ್ತು ಅವರನ್ನೂ ಸಂಸತ್ ಸದಸ್ಯತ್ವದಿಂದ ತೆಗೆದು ಹಾಕಲಾಗಿತ್ತು. ಆಗ ನೀವು ಅವರನ್ನು ಮತ್ತೆ ಸಂಸತ್ತಿಗೆ ಕರೆತಂದಿದ್ದೀರಿ. ಅವರಿಗೆ ದೇಶದ ಜನರು ಇನ್ನೂ ನಿಮ್ಮೊಂದಿಗಿದ್ದಾರೆ ಇಂದಿರಾಜೀ, ನೀವು ಹೋರಾಡುತ್ತೀರಿ ಎಂಬ ವಿಶ್ವಾಸ ನೀಡಿದಿರಿ. ಇಂದು ಅದೇ ರೀತಿ ಅವರ ಮೊಮ್ಮಗ ರಾಹುಲ್ ಗಾಂಧಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಂಸತ್ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಮತ್ತು ನನ್ನ ಇಡೀ ಕುಟುಂಬಕ್ಕೆ ಈ ದೇಶದ ಜನರು ನಮ್ಮೊಂದಿಗೆ ನಿಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ದೇವರ ಆಶೀರ್ವಾದ, ಶಿವ ಪರಮಾತ್ಮನ ಆಶೀರ್ವಾದ ಸದಾ ನಮ್ಮೊಂದಿಗಿರುತ್ತದೆ. ಏಕೆಂದರೆ ನಾವು ಸತ್ಯಕ್ಕಾಗಿ ಹೋರಾಡುತ್ತಿದ್ದೇವೆ. ಈ ಕರ್ನಾಟಕ ಚುನಾವಣೆಯೂ ಸತ್ಯದ ಹೋರಾಟವಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಕಳ್ಳರು ಮೋದಿ ಎಂಬ ಹೆಸರನ್ನೇ ಹೊಂದಿರುತ್ತಾರೆ ಎಂಬ ಹೇಳಿಕೆಗಾಗಿ ಮಾರ್ಚ್ 23 ರಂದು ಗುಜರಾತ್‌ನ ಸೂರತ್‌ನ ನ್ಯಾಯಾಲಯವು 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಅದಾದ ಒಂದು ದಿನದ ನಂತರ, ರಾಹುಲ್ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.

LEAVE A REPLY

Please enter your comment!
Please enter your name here