ಬೆಂಗಳೂರು:
ಮುಂದಿನ ದಿನಗಳಲ್ಲಿ ಜಿಲ್ಲಾಪಂಚಾಯಿತಿ ಹಾಗೂ ಸಿಇಓ ಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜನೋಪಯೋಗಿ ಸರ್ಕಾರ ಆಗಬೇಕಾದರೆ ಜಿಲ್ಲಾ ಪಂಚಾಯಿತಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗಿದೆ. ನಿಮ್ಮ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯಶೈಲಿಯಿಂದ ನಿಮ್ಮದೇ ಛಾಪನ್ನು ಮೂಡಿಸಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ತಳಹಂತದಲ್ಲಿ ಯೋಜನೆಗಳ ಅನುಷ್ಠಾನ ಅತಿ ಮುಖ್ಯವಾದುದು. ವಿಕೇಂದ್ರೀಕರಣ ಮೂಲಕ ನಿಮಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿಮ್ಮ ವಿವೇಚನಾಧಿಕಾರವನ್ನು ಜಾಗರೂಕತೆಯಿಂದ ಜನರ ಹಿತಕ್ಕಾಗಿ ಬಳಕೆ ಮಾಡಬೇಕು. ಬಡವರ ಅನುಕೂಲಕ್ಕಾಗಿ ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಅಧಿಕಾರಿಗಳು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು. ಅನಿಶ್ಚಿತತೆ ಪ್ಲೇಗ್ ಇದ್ದಂತೆ. ವಿಳಂಬ ಧೋರಣೆ ಅತ್ಯಂತ ದುಬಾರಿ ಎಂದ ಮುಖ್ಯಮಂತ್ರಿಗಳು, ಅಧಿಕಾರಿಗಳ ವಿಳಂಬ ಧೋರಣೆ ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ ಎಂದು ನುಡಿದರು.

ಜನರ ಸುತ್ತ ಅಭಿವೃದ್ಧಿಯಾಗಬೇಕೇ ಹೊರತು ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಹತ್ತಿರ ಬರುತ್ತಾರೆ ಎಂದರೆ ತಳಹಂತದಲ್ಲಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅರ್ಥ. ಆದ್ದರಿಂದ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸಮಾಡಬೇಕು. ವ್ಯಕ್ತಿಗಳು ವ್ಯವಸ್ಥೆಯನ್ನು ಮುನ್ನಡೆಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ತಳಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಹತೋಟಿ ಹೊಂದಿರಬೇಕು. ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಬೇಕು. ಹಳ್ಳಿಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಅಂತೆಯೇ ಸರ್ಕಾರಕ್ಕೆ ಕಾರ್ಯಕ್ರಮ ಅನುಷ್ಠಾನದಲ್ಲಿರುವ ಕಾನೂನು ಸಮಸ್ಯೆಗಳು, ಎದುರಾಗುವ ತೊಡಕುಗಳ ಬಗ್ಗೆ ವರದಿ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶನ ನೀಡಿದರು.

ಎಂಜಿನಿಯರಿಂಗ್ ವಿಭಾಗದ ಮೇಲೆ ಹತೋಟಿ ಹೊಂದಿರಬೇಕು. ಎಂಜಿನಿಯರುಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕುರಿತು ನೀವು ವರದಿ ಸಲ್ಲಿಸಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಇಂದಿನ ಸಭೆಯಲ್ಲಿ ನಮ್ಮ ಕಾರ್ಯನಿರ್ವಹಣೆಯ ಕುರಿತು ಆತ್ಮಾವಲೋಕನ ನಡೆಸಿ, ಲೋಪದೋಷಗಳನ್ನು ತಿದ್ದಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಜಲ ಜೀವನ್ ಮಿಷನ್, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತಿತರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಕುರಿತು ತೀವ್ರ ನಿಗಾ ವಹಿಸಬೇಕು. ಇವುಗಳ ಕುರಿತ ಪ್ರಗತಿ ಮಾಹಿತಿಯನ್ನು ಪ್ರತ್ಯೇಕವಾಗಿ ನಿರ್ವಹಿಸಿ ಎಂದು ಸೂಚಿಸಿದರು.

ಇಂದಿನ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಮುಕ್ತವಾಗಿ ನಿಮ್ಮ ಅಭಿಪ್ರಾಯ ತಿಳಿಸಿ. ಮುಂದಿನ ಆಯವ್ಯಯದಲ್ಲಿ ಸೂಕ್ತ ಅಂಶಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿವಿಧ ಯೋಜನೆಗಳಡಿ ಗುತ್ತಿಗೆದಾರರು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು. ಗುಣಮಟ್ಟದ ವಸ್ತುಗಳ ಬಳಕೆ ಹಾಗೂ ಕಾಮಗಾರಿ ಅನುಷ್ಠಾನವನ್ನು ಖಾತರಿಪಡಿಸಿ ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಸಾಕಷ್ಟು ಸಂಖ್ಯೆಯಲ್ಲಿ ಆಗಿದೆ. ಇವುಗಳ ಬಳಕೆಯನ್ನೂ ಜನರು ಮಾಡಿಕೊಳ್ಳುವಂತೆ ಮನವೊಲಿಸಬೇಕು. ಅಂತೆಯೇ ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಜನಸಂಪರ್ಕ ಬೆಳೆಸಿಕೊಳ್ಳಿ: ಸಿಇಓಗಳಿಗೆ ಮುಖ್ಯಮಂತ್ರಿ ಸಲಹೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಮುಖ್ಯಾಂಶಗಳು
ಜಲಜೀವ್ ಮಿಷನ್
- ಎಲ್ಲ ಜಿಲ್ಲೆಗಳ ಅಧಿಕಾರಿಗಳಿಂದ ಜಲಜೀವನ್ ಯೋಜನೆಯ ಪ್ರಸಕ್ತ ಸಾಲಿನಲ್ಲಿ ಆಗಿರುವ ಪ್ರಗತಿ,ಮುಂದಿನ 3 ತಿಂಗಳಲ್ಲಿ ಮಾಡುವ ಗುರಿಸಾಧನೆ ಹಾಗೂ ಬ್ಯಾಚ್ -2 ಕಾಮಗಾರಿಗಳ ಪ್ರಗತಿಯ ಮಾಹಿತಿಯನ್ನು ಪಡೆಯಲಾಯಿತು.
- ಕೆಲವು ವಿಶೇಷ ಪ್ರಕರಣಗಳನ್ನು ಹೊರತು ಪಡಿಸಿ, ಎಲ್ಲ ಜಿಲ್ಲೆಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಗುರಿ ಸಾಧನೆ ಮಾಡುವಂತೆ ಸೂಚಿಸಿದರು.
- ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಯೋಜನೆಯ ಪ್ರಗತಿ, ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಬೇಕು.
- ಈ ಯೋಜನೆಯ ಯಶಸ್ಸು, ವೈಫಲ್ಯ ಎರಡಕ್ಕೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಹೊಣೆ. ಯಶಸ್ವಿಯಾದವರಿಗೆ ಮನ್ನಣೆ ನೀಡಲಾಗುವುದು, ವಿಫಲರಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚಿಸಲಾಯಿತು.
- ಬರಪೀಡಿತ ಜಿಲ್ಲೆಗಳಾದ ಯಾದಗಿರಿ. ಕಲ್ಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಪ್ರಾಶಸ್ತ್ಯದ ಮೇಲೆ ಕಾಮಗಾರಿ ಪೂರ್ಣಗೊಳ್ಳಬೇಕು. ತುಮಕೂರು ಜಿಲ್ಲೆಯಲ್ಲಿ ವಿವಿಧ ಮೂಲಗಳಿಂದ ನೀರು ಪಡೆದು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಲು ಸಮಗ್ರ ಯೋಜನೆ ರೂಪಿಸುವಂತೆ ಸೂಚಿಸಿದರು.
- ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ಎತ್ತರದಲ್ಲಿರುವ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ವಿಶೇಷ ಯೋಜನೆ ರೂಪಿಸುವಂತೆ ನಿರ್ದೇಶನ ನೀಡಲಾಯಿತು.
- ಬಹುಗ್ರಾಮ ಯೋಜನೆಗಳನ್ನು ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಬೇಕು. ಜಲಜೀವನ್ ಮಿಷನ್ ನೊಂದಿಗೆ ಇವುಗಳನ್ನು ಹೇಗೆ ಸಂಯೋಜನೆಗೊಳಿಸಬಹುದು ಎಂದು ಪರಿಶೀಲಿಸಿ, ಪ್ರತಿ ಮನೆಗೆ ನೀರು ಒದಗಿಸಲು ಆದ್ಯತೆ ನೀಡುವಂತೆ ತಿಳಿಸಲಾಗಿದೆ.
- ಗುತ್ತಿಗೆದಾರರಿಗೆ ನೀಡಲಾಗುವ ಕಾಮಗಾರಿಗಳ ಸಂಖ್ಯೆಯನ್ನು ನಿಗದಿಪಡಿಸುವಂತೆ ಗ್ರಾಮೀಣಾಭಿವೃದ್ಧೀ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು. ಒಬ್ಬ ಗುತ್ತಿಗೆದಾರನಿಗೆ ಹೆಚ್ಚಿನ ಕಾಮಗಾರಿಗಳನ್ನು ನೀಡುವುದರಿಂದ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಸರ್ಕಾರದ ಇಚ್ಛೆಯಂತೆ ಯೋಜನೆಗಳು ಕಾರ್ಯಗತವಾಗಬೇಕು ಎಂದು ತಿಳಿಸಿದರು.
- ನಳ ಸಂಪರ್ಕ ನೀಡುವಾಗ ಉತ್ತಮ ಗುಣಮಟ್ಟದ ಮೀಟರ್ ಅಳವಡಿಸಬೇಕು. ಅಧಿಕಾರಿಗಳು ಕಾಮಗಾರಿಗಳ ಖುದ್ದು ಪರಿಶೀಲನೆ ಮಾಡಬೇಕು.
- ಕಾಮಗಾರಿಗಳ ಬಾಹ್ಯ ಸಂಸ್ಥೆಗಳ ಪರಿಶೀಲನೆ (ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್) ಸಮರ್ಪಕವಾಗಿ ಆಗುತ್ತಿರುವ ಬಗ್ಗೆ ಗಮನ ಹರಿಸಬೇಕು. ಬಾಹ್ಯ ಸಂಸ್ಥೆಗಳ ತಪಾಸಣೆಯ ನಂತರ ಪುನ: ಪರಿಶೀಲನೆಗಾಗಿ ಸ್ಕ್ವಾಡ್ ನ್ನು ನೇಮಿಸಬೇಕು.
- ಕಾಮಗಾರಿ ಪ್ರಗತಿಯ ಬಗ್ಗೆ ಸಿಇಓಗಳು ಪ್ರತಿ ತಿಂಗಳು ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ವರದಿ ನೀಡಬೇಕು.
- ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ 1 ಕೋಟಿ ಮೊತ್ತದ ಕಾಮಗಾರಿ, ಅಧೀಕ್ಷಕ ಇಂಜಿನಿಯರ್ ರವರಿಗೆ 2.5 ಕೋಟಿ ಮೊತ್ತದ ಕಾಮಗಾರಿಗಳನ್ನು ಪರಿಶೀಲನೆ ಮಾಡುವ ಅಧಿಕಾರ ನೀಡಬೇಕು ಎಂದು ಸೂಚಿಸಲಾಯಿತು.
ಉದ್ಯೋಗ ಖಾತರಿ ಹಾಗೂ ಜೆಜೆಎಂ ಆಡಿಟ್ - ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಆಡಿಟ್ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಆಡಿಟ್ (ಹಂಚಿಕೆ ಮತ್ತು ಬಳಕೆಗೆ ಸಂಬಂಧಿಸಿದಂತೆ) ಆಗಬೇಕು ಎಂದು ಸೂಚಿಸಲಾಗಿದೆ.
- ರಾಜ್ಯದಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ವಿವಿಧ ಆಯಾಮಗಳಿಂದ ಅಪೌಷ್ಟಿಕ ಮಕ್ಕಳ ಸಮೀಕ್ಷೆಯನ್ನು ನಡೆಸಬೇಕು. ಹಾಗೂ ಅಪೌಷ್ಟಿಕತೆ ನಿವಾರಣೆಗೆ ಸಮಗ್ರ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.
- ಅಪೌಷ್ಟಿಕತೆ ನಿವಾರಣೆಗೆ ಕಾರ್ಯಕ್ರಮಗಳಿಗೆ ಇರುವ ಮಾನದಂಡಗಳನ್ನು ಪುನರ್ರಚನೆಯಾಗಬೇಕು. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ: - ಕುಡಿಯುವ ನೀರಿನ ಯೋಜನೆಯ ನಂತರ ವಸತಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆ ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು.
- ಅಮೃತ ವಸತಿ ಯೋಜನೆಯಡಿ 750 ಗ್ರಾಮಪಂಚಾಯ್ತಿಗಳಲ್ಲಿ ಫಲಾನುಭವಿಗಳ ಆಯ್ಕೆಯನ್ನು ಶೀಘ್ರವಾಗಿ ಪೂರ್ಣಗೊಳ್ಳಬೇಕು.
- ಅತ್ಯಂತ ಕಡಿಮೆ ಪ್ರಗತಿ ಇರುವ ಜಿಲ್ಲೆಗಳಲ್ಲಿ ಮಾರ್ಚ್ ಅಂತ್ಯದೊಳಗೆ 75 % ಹಾಗೂ ಜೂನ್ ಒಳಗೆ 100% ಪ್ರಗತಿ ಆಗಬೇಕು.
- ಈ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿರುವ 4 ಲಕ್ಷ ಮನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲೇಬೇಕು. ಈ ಸರ್ಕಾರದ ಅವಧಿಯಲ್ಲಿಯೇ ಫಲಾನುಭವಿಗಳಿಗೆ ಮನೆಗಳು ದೊರಕುವಂತಾಗಬೇಕು.
ಎಸ್ ಸಿ ಎಸ್ ಟಿ , ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ : - ವಿದ್ಯಾರ್ಥಿ ವೇತನ ತಲುಪಿಸಲು ಆಧಾರ್ ಕಾರ್ಡ್ ಜೋಡಣೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ವಿದ್ಯಾರ್ಥಿ ವೇತನ ಡಿಬಿಟಿ ಮೂಲಕ ತಲುಪಿಸಲು ಆಧಾರ್ ಕಾರ್ಡ್ ಬ್ಯಾಂಕುಗಳಿಗೆ ಲಿಂಕ್ ಮಾಡಿಸುವ ಕಾರ್ಯವೂ ತ್ವರಿತವಾಗಿ ಆಗಬೇಕು.
- ಬಡವರಿಗಾಗಿ ರೂಪಿಸಲಾಗಿರುವ ಯೋಜನೆಗಳು ನಿಗದಿತ ಅವಧಿಯಲ್ಲಿ ನಿಗದಿತ ಪರಿಹಾರ ತಲುಪಿದಾಗ ಮಾತ್ರ ಸರ್ಕಾರದ ಯೋಜನೆಗಳು ಫಲಪ್ರದವಾಗುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು.
ಕೋವಿಡ್ ಲಸಿಕೆ ಕಾರ್ಯಕ್ರಮ - ರಾಜ್ಯದಲ್ಲಿ ಜನವರಿ 14 ರೊಳಗೆ ಶೇ. 100 ರಷ್ಟು ಮೊದಲ ಡೋಸ್ ಲಸಿಕೆ ನೀಡಬೇಕು.
- ರಾಜ್ಯದ ಸರಾಸರಿಗಿಂತ ಕಡಿಮೆ ಪ್ರಗತಿ ಆಗಿರುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಬೇಕು.
- ಹಿಂದೇಟು ಹಾಕುತ್ತಿರುವ ಕೆಲವು ಸಮುದಾಯಗಳನ್ನು ಸಿಇಓಗಳೂ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಮನವೊಲಿಸುವಂತೆ ನಿರ್ದೇಶನ ನೀಡಿದರು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ - ರಾಜ್ಯದಲ್ಲಿ ಬಡ ರೋಗಿಗಳಿಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ನೀಡಲು ಅನುವಾಗುವಂತೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡುಗಳ ವಿತರಣೆಯಲ್ಲಿ ಪ್ರಗತಿ ಕಡಿಮೆ ಇದ್ದು, ಈ ಕಾರ್ಡುಗಳನ್ನು ವಿತರಿಸಲು ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಿದರು.
- ಕೋವಿಡ್ ಸಂಭಾವ್ಯ 3ನೇ ಅಲೆಗೆ ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಮಾರ್ಗಸೂಚಿಗಳನ್ನು ಗಂಭೀರವಾಗಿ ಪಾಲನೆ ಮಾಡಬೇಕು. ಆಕ್ಸಿಜನ್ ಲಭ್ಯತೆ, ಆಕ್ಸಿಜನೇಟೆಡ್ ಬೆಡ್ ಗಳು, ಐಸಿಯು ಬೆಡ್ ಗಳು ಹಾಗೂ ಔಷಧಿಗಳ ಲಭ್ಯತೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಯಿತು. ಶಿಕ್ಷಣ :
- ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಸಂಪೂರ್ಣ ನಾಶವಾಗಿರುವ ಶಾಲಾಕೊಠಡಿಗಳ ನಿರ್ಮಾಣದ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.
- ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ.
- ಜನವರಿ ಅಂತ್ಯದೊಳಗೆ ಹಾನಿಗೊಳಗಾದ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಬೇಕೆಂದು ಸೂಚಿಸಿದರು.
- ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಂದಾಜು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಬೇಕು.
- ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ ಹೊಸ ಶಾಲಾ ಕೊಠಡಿಗಳ ನಿರ್ಮಾಣವೂ ಪೂರ್ಣಗೊಳ್ಳಬೇಕು.
- ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಜಿಲ್ಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.
- ಕಲ್ಯಾಣ ಕರ್ನಾಟಕದ ಭಾಗಕ್ಕೆ 16000 ಹುದ್ದೆಗಳನ್ನು ಮಂಜೂರು ಮಾಡಿದ್ದು, ಇದರಲ್ಲಿ 5000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.