Home ರಾಜಕೀಯ ವಿಧಾನ ಪರಿಷತ್ ಅಹಿತಕರ ಘಟನೆ ಕುರಿತು ಸದನ ಸಮಿತಿಯಿಂದ 84 ಪುಟಗಳ ಮಧ್ಯಂತರ ವರದಿ ಸಲ್ಲಿಕೆ

ವಿಧಾನ ಪರಿಷತ್ ಅಹಿತಕರ ಘಟನೆ ಕುರಿತು ಸದನ ಸಮಿತಿಯಿಂದ 84 ಪುಟಗಳ ಮಧ್ಯಂತರ ವರದಿ ಸಲ್ಲಿಕೆ

63
0

ಬೆಂಗಳೂರು:

ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ 15-12-2020 ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯ ಸದನ ಸಮಿತಿ ಇಂದು 84 ಪುಟಗಳ ಮಧ್ಯಂತರ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಲ್ಲಿಸಿತು.

ಇಂದು ವಿಧಾನ ಸೌಧದ ಸಭಾಪತಿಗಳ ಕೊಠಡಿಯಲ್ಲಿ ವರದಿ ಸಲ್ಲಿಸಿ ಮಾತಾನಾಡಿದ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಅವರು ಸಮಿತಿಗೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು, ಈವರೆಗೆ ಸಮಿತಿ ಒಟ್ಟು ಐದು ಸಭೆಗಳನ್ನು ನಡೆಸಿದ್ದು, ಹೆಚ್ಚಿನ ಸಮಯವಾಕಾಶ ಬೇಕಾಗಿದೆ. ಆದ್ದರಿಂದ, ಸಮಿತಿಯ ಮೊದಲ ನಾಲ್ಕು ಸಭೆಗಳ ಮಾಹಿತಿಯನ್ನೊಳಗೊಂಡ ವರದಿ ಹಾಗೂ ಸಾಕ್ಷ್ಯದಾರಗಳನ್ನು ಸಿ.ಡಿ ರೂಪದಲ್ಲಿ ಮಧ್ಯಂತರ ವರದಿಯಲ್ಲಿ ಸಲ್ಲಿಸಲಾಗಿದೆ, ಸಂಪೂರ್ಣ ವರದಿ ಸಲ್ಲಿಸಲು ಇನ್ನೂ ಹೆಚ್ಚಿನ ಸಮಯವಾಕಾಶ ಕೇಳಲಾಗುವುದು ಎಂದು ತಿಳಿಸಿದರು.

IMG 20210122 WA0027

ಘಟನೆಯ ಕುರಿತು ಈವರೆಗೆ ನಡೆಸಿದ ಐದು ಸಭೆಗಳಲ್ಲಿ ಅಂದು ವಿಧಾನ ಪರಿಷತ್‍ನಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಕಾರ್ಯದರ್ಶಿ, ಮಾರ್ಷಲ್ಸ್ ಮತ್ತು ವಿಧಾನ ಪರಿಷತ್ ಸದಸ್ಯ ರಮೇಶ್ ಅವರಿಗೆ ನೋಟಿಸ್ ನೀಡಿ ಪ್ರಾಥಮಿಕ ಹೇಳಿಕೆ ಪಡೆಯಲಾಗಿದೆ. ಅಂದಿನ ಅಧಿವೇಶನದಲ್ಲಿ ಹಾಜರಿದ್ದು ಅಧಿವೇಶನದ ಕಲಾಪಗಳನ್ನು ಚಿತ್ರೀಕರಿಸಿರುವ ಖಾಸಗಿ ಸುದ್ದಿ ವಾಹಿನಿಗಳು, ವಿಧಾನ ಪರಿಷತ್‍ನ ವೆಬ್‍ಕಾಸ್ಟ್, ಲೋಕೋಪಯೋಗಿ ಇಲಾಖೆ ನಿರ್ವಹಿಸುವ ಸಿಸಿ ಕ್ಯಾಮೆರಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಘಟನೆ ಕುರಿತು ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಸಮಿತಿ ತೀರ್ಮಾನಿಸಿದೆ.

ಘಟನೆಯ ನಂತರ ನಡೆದ ಉಪ ಸಭಾಪತಿ ಧರ್ಮೆಗೌಡ ಅವರ ಸಾವಿನ ಕುರಿತು ಅವರು ಬರೆದಿಟ್ಟಿರುವರು ಎನ್ನಲಾಗಿರುವ ಪತ್ರವನ್ನು ಒದಗಿಸಲು ಕೋರಿ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿದೆ. ಆದ್ದರಿಂದ, 20 ದಿನಗಳ ಒಳಗಾಗಿ ಪೂರ್ಣ ವರದಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ನಮ್ಮ ದೇಶದ ಇತರೆ ರಾಜ್ಯಗಳಲ್ಲಿ ಸಹ ಇಂತಹ ಘಟನೆಗಳು ನಡೆದಿರುವ ಕುರಿತು ಮಾಹಿತಿಯನ್ನು ಪಡೆಯಲು ಸಮಿತಿ ತೀರ್ಮಾನಿಸಿದ್ದು, ಇನ್ನೂ ಎಷ್ಟು ಸಮಯ ಬೇಕಾಗಬಹುದು ಎನ್ನುವುದರ ಸ್ಪಷ್ಟತೆ ಸಿಕ್ಕಮೇಲೆ ಸಭಾಪತಿಗಳಿಗೆ ಪತ್ರ ಬರೆದು ಹೆಚ್ಚಿನ ಸಮಯಾವಾಕಾಶವನ್ನು ಲಿಖಿತವಾಗಿ ಕೇಳಲಾಗುವುದು ಎಂದು ತಿಳಿಸಿದರು.

ಸಮಿತಿಯ ಮಧ್ಯಂತರ ವರದಿಯನ್ನು ಸ್ವೀಕರಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮಾತನಾಡಿ ಅಂದು ನಡೆದ ಅಹಿತಕರ ಘಟನೆ ಕುರಿತು ಐದು ಸದಸ್ಯರನ್ನೊಳಗೊಂಡ ಸದನ ಸಮಿತಿಯನ್ನು ಸರ್ಕಾರ ರಚಿಸಿ ಆದೇಶ ಹೊರಡಿಸಿತ್ತು. ಆದರೇ, ಅದರಲ್ಲಿ ಹೆಚ್.ವಿಶ್ವನಾಥ್ ಮತ್ತು ಸಂಕನೂರು ಅವರು ಖಾಸಗಿ ಕಾರಣಗಳಿಂದ ಸಮಿತಿಗೆ ರಾಜಿನಾಮೆ ನೀಡಿದ್ದು, ಪ್ರಸ್ತುತ ಸಮಿತಿಯಲ್ಲಿ 3 ಸದಸ್ಯರಿದ್ದಾರೆ. ಸಮಿತಿಗೆ 20 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು, ಸಮಿತಿಗೆ ಕಾಲಾವಕಾಶ ಸಾಕಾಗುತ್ತಿಲ್ಲವೆಂದು ಇಂದು ಮಧ್ಯಂತರ ವರದಿಯನ್ನು ಸಲ್ಲಿಸಿ ಹೆಚ್ಚಿನ ಸಮಯವನ್ನು ಕೋರಿದೆ. ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸದನ ಸಮಿತಿಯ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಹಾಗೂ ಆರ್.ಬಿ.ತಿಮ್ಮಾಪುರ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here