ಬೆಂಗಳೂರು:
ಬೆಂಗಳೂರು ನಗರದಲ್ಲಿ ಮನೆ ಅಪಾರ್ಟ್ಮೆಂಟ್ ಹಾಗೂ ಕಾಮಗಾರಿಗಳೇ ಹೆಚ್ಚು ನಡೆಯುತ್ತಿದ್ದು ಗಿಡ ಮರಗಳ ಅನಿವಾರ್ಯತೆ ಕಾಡುತ್ತಿದೆ. ಸರ್ಕಾರಿ ಜಾಗ ಲಭ್ಯವಿರುವುದನ್ನು ಗುರುತಿಸಿ 15 ದಿನಗಳಿಗೊಮ್ಮೆ ಗಿಡ ನೆಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂ ಕೃಷ್ಣಪ್ಪ ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯ ಅನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಎಸ್ ಬಿಂಗಿಪುರದಲ್ಲಿ ಇಂದು 2000 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹುಳಿಮಾವು ಕೆರೆ ಬಳಿ 500 ಗಿಡಗಳನ್ನು ನೆಡಲಾಗಿದ್ದು, ಉಳಿದಿರುವ 8 ರಿಂದ 9 ಎಕರೆ ಜಾಗದಲ್ಲಿಯೂ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಗಿಡಗಳನ್ನು ನೆಡುವ ಹವ್ಯಾಸ ಬೆಳಸಿಕೊಳ್ಳಬೇಕು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಕೆಲಸ ಮಾಡಬೇಕು. ಅಪಾರ್ಟ್ಮೆಂಟ್ ಗಳಲ್ಲಿ ಉತ್ಪಾದನೆಯಾಗುವ ಸಂಸ್ಕರಿಸಿದ ತ್ಯಾಜ್ಯ ನೀರನ್ನು ರಸ್ತೆ ಬದಿಯ ಗಿಡಗಳಿಗೆ ಹಾಕಲು ಬಳಸುವಂತಾಗಬೇಕು.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾದ ಜೆ ಮಂಜುನಾಥ್ ಅವರು ಮಾತನಾಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ 1.5 ಕೋಟಿ ಜನಸಂಖ್ಯೆಯಿದ್ದು ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಾ ಇದೆ. ಒಂದು ತಜ್ಞ ವಿಶ್ಲೇಷಣೆ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಿರುವ ಆಮ್ಲಜನಕ ಸಿದ್ಧಮಾಡುವುದಕ್ಕೆ 8 ರಿಂದ 9 ದೊಡ್ಡ ಮರಗಳ ಅವಶ್ಯಕತೆ ಇದೆ. ನಮ್ಮ ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಬೃಹತ್ ಜನಸಂಖ್ಯೆಗೆ ಬೇಕಾಗುವ ಆಮ್ಲಜನಕವನ್ನು ಪೂರೈಸುವುದು ಸವಾಲಾಗಿ ಪರಿಣಮಿಸಲಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡೆದಾಗ ಬೇರೆಡೆ ಮರಗಳನ್ನು ನೆಡುವ ಕಾರ್ಯವಾಗಬೇಕು. ಆಗ ಮಾತ್ರ ಅದರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅನೇಕಲ್ ತಹಶೀಲ್ದಾರರಾದ ಪಿ.ದಿನೇಶ್ ಕಂದಾಯ ಅಧಿಕಾರಿಯಾದ ಪ್ರಶಾಂತ್, ಹುಲಿಮಂಗಳ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು .