Home ಬೆಂಗಳೂರು ನಗರ ಸ್ವಯಂ ಘೋಷಿತ ಆಸ್ತಿ ತೆರಿಗೆ: ವಲಯ ವರ್ಗೀಕರಣದಲ್ಲಿ ತಪ್ಪು ಘೋಷಣೆ ದಂಡ-ಬಡ್ಡಿಗೆ ವಿನಾಯಿತಿ ನೀಡಲು ಬಿಬಿಎಂಪಿಗೆ...

ಸ್ವಯಂ ಘೋಷಿತ ಆಸ್ತಿ ತೆರಿಗೆ: ವಲಯ ವರ್ಗೀಕರಣದಲ್ಲಿ ತಪ್ಪು ಘೋಷಣೆ ದಂಡ-ಬಡ್ಡಿಗೆ ವಿನಾಯಿತಿ ನೀಡಲು ಬಿಬಿಎಂಪಿಗೆ ಅಶ್ವತ್ಥನಾರಾಯಣ ಸಲಹೆ

56
0
Self-Assesment Property Tax wrong declaration: Malleswaram MLA Ashwathnarayana advises BBMP to exempt peanlty and interest

ಬೆಂಗಳೂರು:

ನಗರದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡು ದಂಡ ಮತ್ತು ಬಡ್ಡಿ ಸುಳಿಗೆ ಸಿಲುಕಿರುವ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡುವಂತೆ ಮಲ್ಲೇಶ್ವರದ ಶಾಸಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಿಬಿಎಂಪಿಗೆ ಸಲಹೆ ನೀಡಿದರು.

ಈ ವಿಷಯಕ್ಕೆ ಸಂಬಂಧಿಸಿ ಮಂಗಳವಾರ ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಅವರು, ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣದಿಂದ ಆಸ್ತಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ದಂಡ ಮತ್ತು ಬಡ್ಡಿಗೆ ಗುರಿಯಾದ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡಬೇಕು. ಈ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸೂಚಿಸಿದರು.

ನಗರದಲ್ಲಿ ಒಟ್ಟು 22 ಲಕ್ಷ ಆಸ್ತಿಗಳಿದ್ದು, 78,000 ಆಸ್ತಿಗಳ ಮಾಲೀಕರು 2016ರಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡಿದ್ದಾರೆ. ಇದರಿಂದಾಗಿ ಬಿಬಿಎಂಪಿಗೆ ಸುಮಾರು 116 ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ. ಈ ವಿಷಯವನ್ನು ಯೋಜನೆ ಜಾರಿ‌ ಮಾಡಿದಾಗಲೇ ಆಸ್ತಿ ಮಾಲೀಕರಿಗೆ ಮನವರಿಕೆ ಮಾಡಬೇಕಿತ್ತು. ಹಾಗೆ ಮಾಡದೇ 2016ರಿಂದ ಅನ್ವಯವಾಗುಂತೆ ಇದರ ಮೇಲೆ ಬಡ್ಡಿ (89 ಕೋಟಿ ರೂಪಾಯಿ) ಮತ್ತು ಮಾಡಿದ ತಪ್ಪಿಗೆ ದಂಡ (232 ಕೋಟಿ ರೂಪಾಯಿ) ವಿಧಿಸುವುದು ತಪ್ಪಾಗುತ್ತದೆ. ಇದರ ಬದಲು ಬಡ್ಡಿ ಮತ್ತು ದಂಡದ ಮೊತ್ತಕ್ಕೆ ವಿನಾಯಿತಿ ಕೊಟ್ಟು, ಆಸ್ತಿ ತೆರಿಗೆಯನ್ನು ಮಾತ್ರ ಕಟ್ಟಿಸಿಕೊಳ್ಳುವ ವ್ಯವಸ್ಥೆ ಆದರೆ ಸೂಕ್ತ ಎಂದು ಅವರು ಅಧಿಕಾರಿಗಳ ಗಮನಕ್ಕೆ ತಂದರು.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಜತೆಗೂ ಚರ್ಚೆ ನಡೆಸುವಂತೆ ಅಶ್ವತ್ಥನಾರಾಯಣ ಅವರು ಸೂಚಿಸಿದರು.  .

ಸಾರ್ವಜನಿಕರು ಆಸ್ತಿ ತೆರಿಗೆ ಮೇಲೆ ವಿಧಿಸುತ್ತಿರುವ ದಂಡ- ಬಡ್ಡಿಯ ಬಗ್ಗೆ ದೂರು ಸಲ್ಲಿಸಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇಂಥ ಸಮಯದಲ್ಲಿ ದುಪ್ಪಟ್ಟು ದಂಡ, ಬಡ್ಡಿ ವಿಧಿಸಿದರೆ ಜನರಿಗೆ ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ಪಶ್ಚಿಮ ವಲಯದ ವಿಶೇಷ ಆಯುಕ್ತ ಬಸವರಾಜ್‌ ಹಾಗೂ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ಮುಂತಾದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here