ಬೆಂಗಳೂರು: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶೇಗುಣಸಿಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಎಂ.ಬಿ. ಪಾಟೀಲ್ ಭೂಮಿಪೂಜೆ ನೆರವೇರಿಸಿದರು. ಯೋಜನೆಯ ಅಂದಾಜು ವೆಚ್ಚ ₹16 ಕೋಟಿ.
ಸುಸಜ್ಜಿತ ತರಗತಿ ಕೊಠಡಿಗಳು ಹಾಗೂ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಗಳೊಂದಿಗೆ ಶಾಲೆಯ ಹೊಸ ಕಟ್ಟಡ ನಿರ್ಮಾಣವಾಗಲಿದೆ ಎಂದು ಪಾಟೀಲ್ ತಿಳಿಸಿದರು.

ಈ ವಸತಿ ಶಾಲೆಯಲ್ಲಿ ಶೇ.75ರಷ್ಟು ಪ್ರವೇಶವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು. ಶಿಕ್ಷಣದ ಅವಕಾಶಗಳು ಎಲ್ಲ ಸಮುದಾಯಗಳ ಮಕ್ಕಳಿಗೂ ದೊರೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಒಂದು ವರ್ಷದೊಳಗೆ ಶಾಲೆಯನ್ನು ವಿದ್ಯಾರ್ಥಿಗಳ ಬಳಕೆಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪಾಟೀಲ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಈ ಸಂಸ್ಥೆಯನ್ನು ಪದವಿ ಪೂರ್ವ ಕಾಲೇಜಾಗಿ ಉನ್ನತೀಕರಿಸುವ ಉದ್ದೇಶವೂ ಇದೆ ಎಂದು ಅವರು ಹೇಳಿದರು.
ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
