ಶಿವಾಜಿನಗರದ 349 ಮಕ್ಕಳ ಶಾಲಾಭಿವೃದ್ಧಿಗೆ ಮೂರು ವರ್ಷಗಳ ಸಹಭಾಗಿತ್ವ
ಬೆಂಗಳೂರು: ಶಿವಾಜಿನಗರದ ಹಫೀಜಾ ಬ್ರಾಡ್ವೇ ಶಾಲೆಯಲ್ಲಿ ಕಲಿಯುತ್ತಿರುವ 349 ಮಕ್ಕಳಿಗೆ ಉತ್ತಮ ಸೌಲಭ್ಯ ಮತ್ತು ಕಲಿಕಾ ವಾತಾವರಣ ಒದಗಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಫೈಝಲ್ ಮತ್ತು ಶಬಾನಾ ಫೌಂಡೇಶನ್ ಮೂರು ವರ್ಷಗಳ ಶಾಲಾಭಿವೃದ್ಧಿ ಒಪ್ಪಂದ ಮಾಡಿಕೊಂಡಿವೆ.
ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು, ಮೂಲಸೌಕರ್ಯ ಸುಧಾರಿಸುವುದು ಮತ್ತು ಪಠ್ಯ–ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಸಹಭಾಗಿತ್ವದ ಉದ್ದೇಶಗಳಾಗಿವೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ. ಶಾಲೆಯಲ್ಲಿ ನರ್ಸರಿಯಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ.
ಶಾಲೆಯ ಸಮಗ್ರ ಅಭಿವೃದ್ಧಿಗೆ ಒತ್ತು
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಹಾಗೂ ಫೌಂಡೇಶನ್ ಸಂಸ್ಥಾಪಕಿ ಶಬಾನಾ ಕೊಟ್ಟಿಕೊಲ್ಲನ್ ಒಪ್ಪಂದಕ್ಕೆ ಸಹಿ ಹಾಕಿದರು. ಫೌಂಡೇಶನ್ ಮೂಲಕ ಶಾಲೆಯನ್ನು ಮೂರು ವರ್ಷಗಳ ಅವಧಿಗೆ ದತ್ತು ಪಡೆದು ಸಮಗ್ರ ಅಭಿವೃದ್ಧಿ ಕೈಗೊಳ್ಳುವ ವ್ಯವಸ್ಥೆ ಇದಾಗಿದೆ.
ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸೌಲಭ್ಯಗಳನ್ನು ಉತ್ತಮಪಡಿಸಿ, ತರಗತಿ ಕಲಿಕೆ ಮತ್ತು ಇತರ ಚಟುವಟಿಕೆಗಳಿಗೆ ಸೂಕ್ತ ವಾತಾವರಣ ಒದಗಿಸುವುದು ಕಾರ್ಯಕ್ರಮದ ಗುರಿಯಾಗಿದೆ.
ಅಭಿವೃದ್ಧಿ ಹೆಚ್ಚುವರಿ ಆಯುಕ್ತ ವೆಂಕಟ ಚಲಪತಿ ಆರ್., ಜಂಟಿ ಆಯುಕ್ತ ಹೇಮಂತ್ ಶರಣ್, ಶಿಕ್ಷಣಾಧಿಕಾರಿ ಭುವನೇಶ್ವರಿ ಹಾಗೂ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.
