ಮಹಿಳಾ ಶಾಸಕರಿಗೆ ಪ್ರತ್ಯೇಕ ಹೆಲ್ತ್ ಕ್ಲಬ್: ಶಾಸಕರ ಭವನದಲ್ಲಿ ಉಮಾಶ್ರೀ ಸಲಹೆ
ಬೆಂಗಳೂರು: ಶಾಸಕರ ಭವನದಲ್ಲಿ ಮಹಿಳಾ ಶಾಸಕರಿಗಾಗಿ ಪ್ರತ್ಯೇಕ ಹೆಲ್ತ್ ಕ್ಲಬ್ ತೆರೆಯುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಪರಿಷತ್ತಿನ ವಸತಿ ಸಮಿತಿ ಅಧ್ಯಕ್ಷೆ ಡಾ. ಉಮಾಶ್ರೀ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಗುರುವಾರ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ವಸತಿ ಸಮಿತಿ ಸಭೆ ನಡೆಸಿದ ಬಳಿಕ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ದಿಢೀರ್ ಪರಿಶೀಲನೆ ನಡೆಸಿದ ಅವರು, ಶಾಸಕರಿಗೆ ಆರೋಗ್ಯ ಸೇವೆಗಳು ಹಾಗೂ ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಗಮನಹರಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಸೇವೆ, ಸ್ವಚ್ಛತೆಗೆ ಆದ್ಯತೆ
ಹೆಲ್ತ್ ಕ್ಲಬ್ಗೆ ಭೇಟಿ ನೀಡಿದ ಉಮಾಶ್ರೀ, ಶಾಸಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಸಾಧ್ಯವಾದರೆ ಮಹಿಳಾ ಶಾಸಕರಿಗೆ ಪ್ರತ್ಯೇಕ ಹೆಲ್ತ್ ಕ್ಲಬ್ ತೆರೆಯಬೇಕು ಎಂದು ಸಲಹೆ ನೀಡಿದರು.
ಪಂಚಕರ್ಮ ಚಿಕಿತ್ಸಾ ಕೇಂದ್ರವನ್ನು ಮತ್ತಷ್ಟು ಸುಸಜ್ಜಿತಗೊಳಿಸಿ, ಶಾಸಕರ ಚಿಕಿತ್ಸಾಲಯದಲ್ಲಿ ಉತ್ತಮ ಸೇವೆ ನೀಡಬೇಕು ಎಂದು ಸೂಚಿಸಿದರು. ಗ್ರಂಥಾಲಯದಲ್ಲಿ ಶಾಸಕರಿಗಾಗಿ ಶೌಚಾಲಯ ನಿರ್ಮಿಸಬೇಕು ಹಾಗೂ ವಾಚನಾಲಯಕ್ಕೆ ಹೆಚ್ಚಿನ ಶಾಸಕರು ಬರುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕೊಠಡಿಗಳು, ಕಾರಿಡಾರ್ಗಳು ಮತ್ತು ಸಮ್ಮೇಳನ ಸಭಾಂಗಣಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕುಡಿಯುವ ನೀರು, ವಿದ್ಯುತ್ ಹಾಗೂ ಪೀಠೋಪಕರಣಗಳ ವ್ಯವಸ್ಥೆ ಸಮರ್ಪಕವಾಗಿರಬೇಕು. ಶಾಸಕರ ಶಾಂತ ವಾಸ್ತವ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಉದ್ಯಾನ, ಹೋಟೆಲ್ ಸೌಲಭ್ಯಗಳ ಪರಿಶೀಲನೆ
ಶಾಸಕರ ಭವನದ ಹೊರಾಂಗಣದಲ್ಲಿರುವ ಚಿಲುಮೆ ಮತ್ತು ಉದ್ಯಾನವನ್ನು ಸ್ವಚ್ಛವಾಗಿಡುವಂತೆ ಸೂಚಿಸಿದ ಅವರು, ಸಮೃದ್ಧಿ ಹೋಟೆಲ್ನ ಅಡುಗೆಮನೆ ಹಾಗೂ ದಾಸ್ತಾನು ಕೊಠಡಿಯನ್ನೂ ಪರಿಶೀಲಿಸಿದರು. ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ನಿರ್ವಹಣೆಗೆ ಗಮನಹರಿಸಬೇಕು ಎಂದರು.
ಸಚಿವಾಲಯದ ಸಿಬ್ಬಂದಿ, ವೈದ್ಯಕೀಯ ಘಟಕ ಮತ್ತು ಭದ್ರತಾ ಸಿಬ್ಬಂದಿ ಸದಾ ಕರ್ತವ್ಯಕ್ಕೆ ಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಸತಿ ಸಮಿತಿ ಸದಸ್ಯ ಬಿ.ಜಿ. ಪಾಟೀಲ್, ಶಾಸಕರ ಭವನದ ಕ್ಷೇತ್ರಾಧಿಕಾರಿ ಸಿ.ಟಿ. ರೂಪ ಹಾಗೂ ಇತರ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.
