ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್. ವಿಡಿಯೊ ಸ್ಕ್ರೀನ್ಶಾಟ್: ಸಿಎಂಒ ಕರ್ನಾಟಕ.
ಮಂಡ್ಯ: ಮಂಡ್ಯದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ತೆರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜಿಲ್ಲೆಯ ಆರೋಗ್ಯ ಮತ್ತು ಅಭಿವೃದ್ಧಿ ಕ್ರಮಗಳ ವಿವರವನ್ನು ಅವರು ನೀಡಿದ್ದಾರೆ.
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅಂಶಗಳನ್ನು ಶನಿವಾರ ತಡರಾತ್ರಿ ಹಂಚಿಕೊಂಡ ಪೋಸ್ಟ್ನಲ್ಲಿ ಅವರು ವಿವರಿಸಿದ್ದಾರೆ. ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಕ್ಕೆ ₹115 ಕೋಟಿ ಮತ್ತು ಮೈಶುಗರ್ ಕಾರ್ಖಾನೆಯ ಬಾಯ್ಲರ್ ಘಟಕಕ್ಕೆ ₹60 ಕೋಟಿ ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.

ಹೊಸೂರಿನಲ್ಲಿ ನೂರು ಹಾಸಿಗೆಗಳ ತಾಯಿ–ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದೆ ಎಂದೂ ಶಿವಕುಮಾರ್ ಹೇಳಿದ್ದಾರೆ.
ಪಾಂಡವಪುರ, ನಾಗಮಂಗಲ ಮತ್ತು ಕೆ.ಆರ್. ಪೇಟೆಯ ಕೆರೆಗಳನ್ನು ತುಂಬಿಸಲು ಹಾಗೂ ಕಾಲುವೆಗಳ ದುರಸ್ತಿಗೆ ಸುಮಾರು ₹806 ಕೋಟಿ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಮಳವಳ್ಳಿ, ಮದ್ದೂರು ಸೇರಿದಂತೆ ಜಿಲ್ಲೆಯ ಕಟ್ಟಕಡೆಯ ಪ್ರದೇಶಗಳವರೆಗೆ ಕೆಆರ್ಎಸ್ನಿಂದ ನೀರು ಒದಗಿಸಲು ಸರ್ಕಾರ ಪ್ರಯತ್ನಿಸಿದೆ ಎಂದಿದ್ದಾರೆ.
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕುಗಳ ಅಭಿವೃದ್ಧಿಗೆ ಸುಮಾರು ₹224 ಕೋಟಿ ನೀಡಲಾಗಿದೆ ಎಂದು ಹೇಳಿದ್ದಾರೆ. ಹಂಪಾಪುರ–ನಾಗಮಂಗಲದಲ್ಲಿ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ₹420 ಕೋಟಿ ನೀಡಿರುವುದನ್ನೂ ಉಲ್ಲೇಖಿಸಿದ್ದಾರೆ.
ಕಬ್ಬಿನ ಬೆಲೆಗಾಗಿ ರೈತರು ನಡೆಸುತ್ತಿರುವ ಹೋರಾಟದ ಕುರಿತು ಪ್ರಸ್ತಾಪಿಸಿದ ಶಿವಕುಮಾರ್, ಅವರ ಸಮಸ್ಯೆ ಪರಿಹರಿಸಲು ಬೆಳಗಾವಿಯಲ್ಲಿ ಎರಡು ದಿನ ಪ್ರಯತ್ನಿಸಿರುವುದಾಗಿ ಹೇಳಿದ್ದಾರೆ. ಸಕ್ಕರೆ ಬೆಲೆ ಹೆಚ್ಚಿಸಲು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತಿದ್ದು, ರೈತರಿಗೆ ಸೂಕ್ತ ಬೆಲೆ ಕೊಡಿಸುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.
