ಹೈಕಮಾಂಡ್ ಸೂಚನೆ ಬಳಿಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಪಾಲರ ಕಾರ್ಯದರ್ಶಿಗೆ ಪತ್ರ ಸಲ್ಲಿಕೆ
ಬೆಂಗಳೂರು, ಮೇ 28: ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಗುರುವಾರ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದರು.
ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ಸೂಚನೆ ಬಂದಾಗ ರಾಜೀನಾಮೆ ನೀಡುವುದಾಗಿ ತಾವು ಹಲವು ಬಾರಿ ಹೇಳಿದ್ದಾಗಿ ತಿಳಿಸಿದ್ದಾರೆ.
“ಹೈಕಮಾಂಡ್ ಯಾವಾಗ ಸೂಚನೆ ಕೊಡುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ನಾನು ಅನೇಕ ಬಾರಿ ಹೇಳಿದ್ದೆ. ಅದರಂತೆ ಹೈಕಮಾಂಡ್ ರಾಜೀನಾಮೆ ನೀಡಿ ಎಂದು ಸೂಚಿಸಿದ ಬಳಿಕ ಇಂದು ರಾಜೀನಾಮೆ ಸಲ್ಲಿಸಿದ್ದೇನೆ,” ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋಟ್ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ರಾಜಭವನದಲ್ಲಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
“ರಾಜ್ಯಪಾಲರು ಊರಿನಲ್ಲಿ ಇಲ್ಲ ಎಂದು ಅವರ ಕಚೇರಿಯಿಂದ ಮಾಹಿತಿ ನೀಡಲಾಯಿತು. ಆದ್ದರಿಂದ ನನ್ನ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ನೀಡಿದ್ದೇನೆ,” ಎಂದು ಹೇಳಿದರು.
ಸಂವಿಧಾನದ ಪ್ರಕಾರ ತಮ್ಮ ರಾಜೀನಾಮೆ ಅಂಗೀಕಾರವಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.
“ಒಮ್ಮೆ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟ ಬಳಿಕ ಅದನ್ನು ಅಂಗೀಕರಿಸಿ ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡುವುದು ಸಂವಿಧಾನಬದ್ಧ ಜವಾಬ್ದಾರಿ,” ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇರುವುದನ್ನೂ ಅವರು ಪುನರುಚ್ಚರಿಸಿದರು.
“ನಮ್ಮ ಪಕ್ಷಕ್ಕೆ 135ಕ್ಕೂ ಹೆಚ್ಚು ಶಾಸಕರ ಬೆಂಬಲ ಇದೆ. ಇಬ್ಬರು ಸ್ವತಂತ್ರ ಶಾಸಕರು ಕೂಡ ಬೆಂಬಲ ನೀಡಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ,” ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಭಾವುಕರಾದ ಸಿದ್ದರಾಮಯ್ಯ, ಕರ್ನಾಟಕದ ಜನತೆಗೆ ಸೇವೆ ಮಾಡುವ ಅವಕಾಶ ನೀಡಿದ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
“ಏಳು ಕೋಟಿ ಕನ್ನಡಿಗರಿಗೆ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ದೊರಕಿತ್ತು. ಅದಕ್ಕಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಾರ ಧನ್ಯವಾದಗಳನ್ನು ಸಲ್ಲಿಸುತ್ತೇನೆ,” ಎಂದು ಹೇಳಿದರು.
ಈ ವೇಳೆ ನಟ ಡಾ. ರಾಜ್ಕುಮಾರ್ ಅವರನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ಅಭಿಮಾನಿಗಳೇ ದೇವರು ಎಂದು ರಾಜ್ಕುಮಾರ್ ಹೇಳುತ್ತಿದ್ದರು. ನಾನು ಸಂವಿಧಾನವೇ ನಮ್ಮ ಧರ್ಮ ಎಂದು ನಂಬಿರುವ ರಾಜಕಾರಣಿ. ಮತದಾರರೇ ನಮ್ಮ ಅಭಿಮಾನಿ ದೇವರು,” ಎಂದು ಹೇಳಿದರು.
2006ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಪಕ್ಷದ ಕಾರ್ಯಕರ್ತರು, ಶಾಸಕರು, ಸಂಸದರು ಹಾಗೂ ಸಹೋದ್ಯೋಗಿಗಳು ನೀಡಿದ ಪ್ರೀತಿ, ಬೆಂಬಲ ಮತ್ತು ಸಹಕಾರವನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ನಡೆಯುವ ಸಾಧ್ಯತೆ ಇದೆ.
