ಹೊಸಪೇಟೆ/ವಿಜಯನಗರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಂಪಿಯ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮೌಢ್ಯ ಮುರಿದು ದೇವಾಲಯಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ದೇವರ ದರ್ಶನ ಪಡೆದಿದ್ದಾರೆ. ಈ ಹಿಂದೆ ಹಂಪಿ ವಿರೂಪಾಕ್ಷೇಶ್ವರ ದೇವಾಲಯ ಭೇಟಿ ಮಾಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತು ಹರಿದಾಡಿತ್ತು.
ನನಗೆ ಮೂಢನಂಬಿಕೆಗಳಲ್ಲಿ ಮೌಢ್ಯ ಗಳಲ್ಲಿ ನಂಬಿಕೆ ಇಲ್ಲ. ದೇವರನ್ನು ನಾನು ನಂಬುತ್ತೇನೆ. ಆದರೆ ಮೂಢನಂಬಿಕೆಗಳನ್ನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ದೇವರ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದನ್ನೂ ಓದಿ: Karnataka Chief Minister Siddaramaiah | ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ: ಸಿಎಂ ಸಿದ್ದರಾಮಯ್ಯ
ಚಾಮರಾಜನಗರಕ್ಕೆ ಭೇಟಿ ನೀಡಿರುವ ಬಗ್ಗೆ ಮಾತನಾಡಿದ ಅವರು ಎಲ್ಲಾರಿಗೂ ಅವರದ್ದೇ ನಂಬಿಕೆಗಳಿರುತ್ತವೆ. ಸಮಾಜಕ್ಕೆ ಒಳ್ಳೆಯದಾದರೆ ನಂಬೋಣ, ಅನಾನುಕೂಲವಾದರೆ ನಂಬುವ ಹಾಗಿಲ್ಲ ಎಂದರು.
ದಿ. ಧರ್ಮಸಿಂಗ್, ಯಡಿಯೂರಪ್ಪ, ರಾಜೀವ್ ಗಾಂಧಿ, ದೇವರಾಜ್ ಅರಸು ಅವರು ಸೇರಿದಂತೆ ಘಟಾನುಘಟಿ ನಾಯಕರು ಹಂಪಿಗೆ ಭೇಟಿ ನೀಡಿದ್ದ ಬಳಿಕ ಅಧಿಕಾರ ಕಳೆದುಕೊಂಡಿದ್ದರು. ಈ ನಡುವೆ ಸಿಎಂ ಸಿದ್ದರಾಮಯ್ಯ ಹಾಗು ಸಚಿವ ಶಿವರಾಜ್ ತಂಗಡಗಿ , ರಾಮಲಿಂಗಾರೆಡ್ಡಿ ಗವಿಯಪ್ಪ ವೀರುಪಾಕ್ಷನ ಸನ್ನಿಧಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.