ಇ3 ಬ್ಲಾಕ್ ಪುನರ್ನಿರ್ಮಾಣ: ಹೊಣೆ ಒಪ್ಪಿಕೊಳ್ಳುವ ಬದಲು ನಾಗಡಿ ಕನ್ಸಲ್ಟೆಂಟ್ಸ್ ಹೊಣೆ ತಪ್ಪಿಸಲು ಯತ್ನಿಸುತ್ತಿದೆ ಎಂದು ಎಸ್ಎನ್ಎನ್ ರಾಜ್ ಕಾರ್ಪ್ ಆರೋಪ
ಬೆಂಗಳೂರು: ಇ3 ಬ್ಲಾಕ್ನ 49 ಮನೆಗಳ ಪುನರ್ನಿರ್ಮಾಣ ಪ್ರಕರಣದಲ್ಲಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಬದಲು ನಾಗಡಿ ಕನ್ಸಲ್ಟೆಂಟ್ಸ್ ಹೊಣೆ ತಪ್ಪಿಸಲು ಯತ್ನಿಸುತ್ತಿದೆ ಎಂದು ಎಸ್ಎನ್ಎನ್ ರಾಜ್ ಕಾರ್ಪ್ ನಿರ್ದೇಶಕ ಅನುಜ್ ಸಂಜಯ್ ಜೈನ್ ಆರೋಪಿಸಿದ್ದಾರೆ.
ವಿಡಿಯೋ ಹೇಳಿಕೆಯಲ್ಲಿ ಮಾತನಾಡಿದ ಅವರು, 2022ರ ಅಧಿಕೃತವಾಗಿ ಸಹಿ ಮಾಡಲಾದ ಜಿಯೋಟೆಕ್ನಿಕಲ್ ವರದಿಯನ್ನು ಸಾರ್ವಜನಿಕರ ಪರಿಶೀಲನೆಗಾಗಿ ಬಿಡುಗಡೆ ಮಾಡಿರುವುದಾಗಿ ಹೇಳಿದರು. ಪುನರ್ನಿರ್ಮಾಣಗೊಳ್ಳುತ್ತಿರುವ 49 ಮನೆಗಳ ಕೆಳಭಾಗದಲ್ಲಿರುವ ಬೋರ್ಹೋಲ್–3ಕ್ಕೆ ಕೇವಲ 1.5 ಮೀಟರ್ ಆಳದಲ್ಲಿ ಕಲ್ಲಿನ ಪದರವಿದೆ ಎಂದು ಉಲ್ಲೇಖಿಸಿ ಶ್ಯಾಲೋ ಫೌಂಡೇಶನ್ ಶಿಫಾರಸು ಮಾಡಲಾಗಿತ್ತು. ಆದರೆ ಬೋರ್ಹೋಲ್ ವಿವರಗಳನ್ನು ಪರಸ್ಪರ ಬದಲಾಯಿಸಲಾಗಿದ್ದು, ಇದೇ ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಸಮಸ್ಯೆ ಪತ್ತೆಯಾಗುವ ಮೊದಲೇ ಯೋಜನೆಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ ಸೇರಿದಂತೆ ಎಲ್ಲ ಕಾನೂನುಬದ್ಧ ಅನುಮತಿಗಳು ದೊರೆತಿದ್ದವು. ಗ್ರಾಹಕರು ಮನೆಗಳಿಗೆ ಭೇಟಿ ನೀಡಿ ತೃಪ್ತಿ ವ್ಯಕ್ತಪಡಿಸಿದ್ದರು ಎಂದು ಜೈನ್ ಹೇಳಿದರು.
ಮನೆಗಳನ್ನು ಹಸ್ತಾಂತರಿಸಬಹುದಾಗಿದ್ದರೂ ಕಂಪನಿಯ ಗುಣಮಟ್ಟದ ಮಾನದಂಡಗಳಿಗೆ ಇದು ತಕ್ಕುದಲ್ಲ ಎಂಬ ಕಾರಣಕ್ಕೆ ಸ್ವಯಂಪ್ರೇರಿತವಾಗಿ ಹಸ್ತಾಂತರ ಮಾಡದೆ ಪುನರ್ನಿರ್ಮಾಣಕ್ಕೆ ಮುಂದಾದೆವು ಎಂದರು. 60 ಮೀಟರ್ ಎತ್ತರದ ಕಟ್ಟಡದಲ್ಲಿ ಕೇವಲ 0.2 ಮೀಟರ್ ಓರೆಯಾಗಿದ್ದು, ಇದು ಪ್ರತಿ ಮಹಡಿಗೆ ಸುಮಾರು ಒಂದು ಸೆಂಟಿಮೀಟರ್ ಮಾತ್ರ. ಇದನ್ನು ಅಳೆಯಲು ಟೋಟಲ್ ಸ್ಟೇಷನ್ ಉಪಕರಣವೇ ಬೇಕಾಗುತ್ತದೆ ಎಂದು ಹೇಳಿದರು.
“ವಾಸಿಸಲು ಸುರಕ್ಷಿತವಾಗಿತ್ತೇ? ಖಂಡಿತವಾಗಿಯೂ ಹೌದು. ಆದರೆ ನಮ್ಮ ಗುಣಮಟ್ಟದ ಮಾನದಂಡಗಳಿಗೆ ತಕ್ಕಂತೆ ಪರಿಪೂರ್ಣವಾಗಿರಲಿಲ್ಲ” ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಕಂಪನಿಯು ಸ್ವಯಂಪ್ರೇರಿತವಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮುಖ್ಯ ಆಯುಕ್ತರು ಹಾಗೂ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಅವರನ್ನು ಸಂಪರ್ಕಿಸಿ 49 ಮನೆಗಳನ್ನು ಪುನರ್ನಿರ್ಮಿಸಲು ಅನುಮತಿ ಕೋರಿದೆ ಎಂದು ತಿಳಿಸಿದರು.
ಈ ಹಣಕಾಸು ವರ್ಷದಲ್ಲೇ ಸುಮಾರು 2,000 ಮನೆಗಳನ್ನು ಹಸ್ತಾಂತರಿಸಲಿದ್ದು, ಅಗತ್ಯವಿದ್ದರೆ ಇನ್ನೂ 49 ಮನೆಗಳನ್ನು ನಿರ್ಮಿಸುವುದಾಗಿ ಹೇಳಿದರು. ಇದು ಹೆಮ್ಮೆಪಡುವ ವಿಷಯವಲ್ಲ, ಮರೆಮಾಚುವ ವಿಷಯವೂ ಅಲ್ಲ ಎಂದರು.
ಎಲ್ಲ ನಿರ್ಮಾಣ ಸಂಸ್ಥೆಗಳು ಮಣ್ಣಿನ ಪರೀಕ್ಷೆಗೆ ಹೊರಗಿನ ತಜ್ಞ ಸಂಸ್ಥೆಗಳನ್ನೇ ಅವಲಂಬಿಸುತ್ತವೆ. ಇಂತಹ ತಪ್ಪು ಯಾರಿಗಾದರೂ ಸಂಭವಿಸಬಹುದು ಎಂದು ಹೇಳಿದ ಜೈನ್, ತಾವು ಇಂದಿಗೂ ಎಸ್ಎನ್ಎನ್ನ ಅತ್ಯಂತ ಹಳೆಯ ಅಪಾರ್ಟ್ಮೆಂಟ್ಗಳಲ್ಲಿ ಒಂದರಲ್ಲಿ ವಾಸಿಸುತ್ತಿದ್ದು, ಅದೇ ಕಂಪನಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದರು.
ಎಲ್ಲ ವರದಿಗಳನ್ನು ಎಸ್ಎನ್ಎನ್ ಯೋಜನೆಗಳ ಕಚೇರಿಗಳಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಲಾಗುವುದು. ವಾಸ್ತವಾಂಶಗಳನ್ನು ಪರಿಶೀಲಿಸಿದ ಬಳಿಕವೇ ಸುದ್ದಿಗಳನ್ನು ಪ್ರಕಟಿಸುವಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದರು.
