ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸಭೆಯಲ್ಲಿ ಅಧಿಕಾರಿಗಳು. ಚಿತ್ರ: ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಬೆಂಗಳೂರು: ಪಾಲಿಕೆಯಿಂದ ಮಾತ್ರ ನಗರದ ಎಲ್ಲಾ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ; ನಾಗರಿಕರು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್ಡಬ್ಲ್ಯೂಎ) ಪಾಲಿಕೆಯೊಂದಿಗೆ ಕೈಜೋಡಿಸಿದಾಗ ಮಾತ್ರ ಸ್ವಚ್ಛ ನಗರ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಹೇಳಿದ್ದಾರೆ ಎಂದು ನವೆಂಬರ್ 22ರಂದು ಹೊರಡಿಸಿದ ಪ್ರಕಟಣೆ ತಿಳಿಸಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ಆಯುಕ್ತ ಕೆ.ಎನ್. ರಮೇಶ್ ನೇತೃತ್ವದಲ್ಲಿ ಆರ್ಡಬ್ಲ್ಯೂಎ, ಅಸೋಸಿಯೇಷನ್ ಮತ್ತು ವಿವಿಧ ಬಡಾವಣೆಗಳ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ ಎಂದರು. ಸ್ಥಳೀಯ ನಿವಾಸಿಗಳು ತಮ್ಮ ಏರಿಯಾದ ಸಮಸ್ಯೆಗಳನ್ನು ಮೊದಲೇ ಪಟ್ಟಿ ಮಾಡಿ ಕಚೇರಿಗೆ ನೀಡಿದರೆ, ಅಧಿಕಾರಿಗಳು ಮತ್ತು ಶಾಸಕರೊಂದಿಗೆ ಖುದ್ದಾಗಿ ಭೇಟಿ ನೀಡಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ದಕ್ಷಿಣ ಪಾಲಿಕೆಯಿಂದಲೇ ಅಭಿವೃದ್ಧಿಪಡಿಸಲು ಬಿಡಿಎ ಒಪ್ಪಿಗೆ ಸೂಚಿಸಿದ್ದು, ನ್ಯಾಯಾಲಯ ಪ್ರಕರಣಗಳ ಅಂತಿಮ ಆದೇಶದ ಪತ್ರ ಮುಂದಿನ ಒಂದು ತಿಂಗಳೊಳಗೆ ಕೈಸೇರಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಜೆ.ಪಿ. ನಗರ ಸಿಂಧೂರ ಛತ್ರದ ರಸ್ತೆಯಲ್ಲಿ ಮಳೆನೀರು ನಿಲುಗಡೆ ತಡೆಯಲು ತಕ್ಷಣವೇ ಪರ್ಯಾಯ ಚರಂಡಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಕನಕಪುರ ಮುಖ್ಯ ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗಿನ ಸುಮಾರು 30 ಪಬ್ಗಳು ತಡರಾತ್ರಿವರೆಗೂ ನಡೆಯುತ್ತಿರುವುದು ಮತ್ತು ಮಾದಕವಸ್ತುಗಳ ಹಾವಳಿ ನಿಯಂತ್ರಿಸಲು ಪೊಲೀಸರಿಗೆ ಸೂಚಿಸಿದರು. ಪ್ರಮುಖ ಜಂಕ್ಷನ್ಗಳನ್ನು 7.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ರಾಘವೇಂದ್ರ ಸ್ವಾಮಿ ಮಠದ ಬಳಿ 23 ಕೋಟಿ ರೂ. ವೆಚ್ಚದಲ್ಲಿ ಅಂಡರ್ಪಾಸ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಹಾಗೂ ನೈಸ್ ರಸ್ತೆಯವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೂ ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.
ಶಾಕಾಂಬರಿ ನಗರದ ಸ್ಯಾನಿಟರಿ ಲೈನ್ ಕಾಮಗಾರಿಯನ್ನು ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು, ಜೊತೆಗೆ ಜಯನಗರ ಪೂರ್ವ ವಾರ್ಡ್ನಲ್ಲಿ ಕಂದಾಯ ಕಚೇರಿ ಸ್ಥಳಾಂತರ ಹಾಗೂ 4ನೇ ಟಿ ಬ್ಲಾಕ್ನಲ್ಲಿ ಅತ್ಯಾಧುನಿಕ ಬೆಂಗಳೂರು ಒನ್ ಕೇಂದ್ರವನ್ನು ಮುಂದಿನ 15 ದಿನಗಳಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದರು. 45 ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನೀತಿ ಜಾರಿ ಹಾಗೂ ಸಿಸಿಟಿವಿ ಅಳವಡಿಕೆಗೆ ಕ್ರಮ ವಹಿಸಲಾಗಿದೆ.
ಜಯನಗರ 5ನೇ ಬ್ಲಾಕ್ನಲ್ಲಿ ರೋಡ್ ಹಂಪ್ ಅಳವಡಿಕೆ, ಒಣಗಿದ ಮರದ ಕೊಂಬೆಗಳ ತೆರವು, ರಸ್ತೆ ಗುಂಡಿ ಮುಚ್ಚುವುದು ಹಾಗೂ ದಕ್ಷಿಣ್ ತಿಂಡಿ ಹೋಟೆಲ್ ಅಕ್ಕಪಕ್ಕದ ಸಂಚಾರ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ನಿವಾಸಿಗಳು ಮನವಿ ಮಾಡಿದರು. 4ನೇ ಬ್ಲಾಕ್ನ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಮುತ್ತ ಫುಟ್ಪಾತ್ ಅಂಗಡಿಗಳು ಮತ್ತು ಜೈನ ದೇವಸ್ಥಾನದ ಮುಂದಿನ ಬಲೂನ್ ಮಾರಾಟಗಾರರನ್ನು ತೆರವುಗೊಳಿಸಿ ನೋ ಪಾರ್ಕಿಂಗ್ ಫಲಕ ಹಾಕಬೇಕು, ಪಾರ್ಕ್ಗಳಲ್ಲಿ ಜಿಮ್ ಪರಿಕರಗಳ ಕಳವು ತಡೆದು ಹಳೆಯ ವಾಹನಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಕೋರಿದರು.
ಜಲಭವನ ರಸ್ತೆ ಮತ್ತು ಈಸ್ಟ್ ಎಂಡ್ ಮುಖ್ಯ ರಸ್ತೆಯ ಫುಟ್ಪಾತ್ಗಳನ್ನು ಹಳೆ ಕಾರು ಮಾರಾಟಗಾರರು, ಫ್ಯಾಬ್ರಿಕೇಶನ್ ಅಂಗಡಿ ಮತ್ತು ಹೋಟೆಲ್ನವರು ಒತ್ತುವರಿ ಮಾಡಿಕೊಂಡಿದ್ದು, 38ನೇ ಕ್ರಾಸ್ನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಅಪಾಯಕಾರಿಯಾಗಿದೆ. ಮಿನಿ ಫಾರೆಸ್ಟ್ನಿಂದ ಜೆ.ಪಿ. ನಗರ 4ನೇ ಫೇಸ್ಗೆ ಫುಟ್ಪಾತ್ ನಿರ್ಮಿಸಬೇಕು ಹಾಗೂ ಗೇಲ್ ಮತ್ತು ಜಲಮಂಡಳಿ ಕಾಮಗಾರಿಗೆ ಅಗೆದ ರಸ್ತೆಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಎನ್ಎಎಲ್ ಲೇಔಟ್ನಲ್ಲಿ ಹಿರಿಯ ನಾಗರಿಕರಿಗಾಗಿ ಹೊಸ ಪಾರ್ಕ್ ನಿರ್ಮಿಸಿ ಕಸ ಮತ್ತು ಒಣಗಿದ ಮರಗಳನ್ನು ತೆರವುಗೊಳಿಸಬೇಕು, ಎಲ್ಐಸಿ ಕಾಲೋನಿ ಪಾರ್ಕ್ ಅಭಿವೃದ್ಧಿಪಡಿಸಿ ಸೀವೇಜ್ ನೀರು ನುಗ್ಗುವುದನ್ನು ತಡೆಯಬೇಕು ಎಂದು ಸ್ಥಳೀಯರು ಕೋರಿದರು. ನಿಮ್ಹಾನ್ಸ್ ಲೇಔಟ್ ಮತ್ತು ಅರಸು ಕಾಲೋನಿಯ ಎಬಿಸಿಡಿ ಮುಖ್ಯ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ನಿಮ್ಹಾನ್ಸ್ ಲೇಔಟ್ನಲ್ಲಿ ಗಾಂಜಾ ವ್ಯಸನಿಗಳನ್ನು ನಿಯಂತ್ರಿಸಬೇಕು ಹಾಗೂ ಬಿದ್ದ ಮರಗಳನ್ನು ತೆರವುಗೊಳಿಸಬೇಕು ಎಂದರು.
ಗುರಪ್ಪನಪಾಳ್ಯ ಲೇಔಟ್ ಮತ್ತು ಜೆ.ಪಿ. ನಗರ 2ನೇ ಫೇಸ್ನ ಪಾರ್ಕ್ನಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಸಾರಕ್ಕಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕಸ ಬಿಟ್ಟು ಹೋಗುವುದರಿಂದ ಉಂಟಾಗಿರುವ ದುರ್ವಾಸನೆಗೆ ನಿವಾಸಿಗಳು ಮನೆ ಖಾಲಿ ಮಾಡುವಂತಾಗಿದೆ. ಶಾಕಾಂಬರಿ ನಗರ ಮತ್ತು ಸಿ.ಆರ್. ಲೇಔಟ್ನಲ್ಲಿ ರಸ್ತೆ ಹಾಗೂ ಸ್ಯಾನಿಟರಿ ದುರಸ್ತಿ ಮಾಡಬೇಕು, ನವೋದಯ ಮತ್ತು ತಾರಾಮಂಡಲ ಲೇಔಟ್ಗಳಲ್ಲಿ ಸಿಸಿಟಿವಿ ಅಳವಡಿಸಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.
ಜೆ.ಪಿ. ನಗರ 3ನೇ ಮತ್ತು 4ನೇ ಫೇಸ್ನಲ್ಲಿ ಮಳೆನೀರು ಚರಂಡಿ ಸಮಸ್ಯೆ ಸರಿಪಡಿಸಬೇಕು, ಸಾರ್ವಜನಿಕ ಸ್ಥಳ ಹಾಗೂ ಶಾಂತಿ ಪಾರ್ಕ್ ಅಪಾರ್ಟ್ಮೆಂಟ್ ಮುಂದೆ ಕಾಲೇಜು ಹುಡುಗರ ಧೂಮಪಾನಕ್ಕೆ ಕಡಿವಾಣ ಹಾಕಬೇಕು. ಜಯನಗರ ಪೂರ್ವ ಭಾಗದಲ್ಲಿ ನಿಯಮಾನುಸಾರ ಮಾತ್ರ ಮೈಕ್ ಬಳಕೆಗೆ ಅನುಮತಿಸಬೇಕು, ಎಂ.ಆರ್. ಲೇಔಟ್ನಲ್ಲಿ ಮೀಟರ್ ಕಳವು ತಡೆಯಲು ಸಿಸಿಟಿವಿ ಅಳವಡಿಸಬೇಕು, ಡಾಲರ್ಸ್ ಕಾಲೋನಿ ರಾಜಕಾಲುವೆ ಮೇಲಿನ ಅನಧಿಕೃತ ಸೇತುವೆ ಮೇಲೆ ರಸ್ತೆ ಮಾಡಬಾರದು ಹಾಗೂ ಪುಟ್ಟೇನಹಳ್ಳಿ ಮತ್ತು ಎಸ್ಬಿಐ ಕಾಲೋನಿ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು. ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಪ್ರತ್ಯೇಕ ಕಾಲ್ ಸೆಂಟರ್ ಮತ್ತು ಟಿಕೆಟಿಂಗ್ ವ್ಯವಸ್ಥೆ ಆರಂಭಿಸಲು ನಾಗರಿಕರು ಸಲಹೆ ನೀಡಿದರು.
ಈ ವೇಳೆ ಜಂಟಿ ಆಯುಕ್ತ ಪಿ. ವಿವೇಕಾನಂದ, ಉಪ ಆಯುಕ್ತೆ ಗಗನ, ಮುಖ್ಯ ಅಭಿಯಂತರ ಬಸವರಾಜ ಕಬಾಡೆ, ಪೊಲೀಸ್, ಬಿಡಬ್ಲ್ಯೂಎಸ್ಎಸ್ಬಿ, ಅರಣ್ಯ, ಟೌನ್ ಪ್ಲಾನಿಂಗ್ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
