ಯಶವಂತಪುರ–ವಿಜಯಪುರ ವಿಶೇಷ ರೈಲಿನ ಸಂಚಾರ ವಾರಕ್ಕೆ ಎರಡು ದಿನ; ದಕ್ಷಿಣ ಪಶ್ಚಿಮ ರೈಲ್ವೆಯಿಂದ ಘೋಷಣೆ
ಬೆಂಗಳೂರು, ಮೇ 29: ರೈಲ್ವೆ ಮಂಡಳಿಯ ಅನುಮೋದನೆಯೊಂದಿಗೆ ದಕ್ಷಿಣ ಪಶ್ಚಿಮ ರೈಲ್ವೆ ಯಶವಂತಪುರ–ವಿಜಯಪುರ–ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರ ಅವಧಿಯನ್ನು ವಾರಕ್ಕೊಮ್ಮೆ ಇದ್ದುದರಿಂದ ವಾರಕ್ಕೆ ಎರಡು ಬಾರಿ (ಬೈ-ವೀಕ್ಲಿ) ಹೆಚ್ಚಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ದಕ್ಷಿಣ ಪಶ್ಚಿಮ ರೈಲ್ವೆ, ರೈಲು ಸಂಖ್ಯೆ 06577/06578 ವಿಶೇಷ ರೈಲು ಈಗಿನ ನಿಲ್ದಾಣಗಳು, ಸಮಯ ಹಾಗೂ ಕೋಚ್ ಸಂಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ವಾರಕ್ಕೆ ಎರಡು ದಿನ ಸಂಚರಿಸಲಿದೆ ಎಂದು ತಿಳಿಸಿದೆ.
ರೈಲು ಸಂಖ್ಯೆ 06577 ಯಶವಂತಪುರ–ವಿಜಯಪುರ ಬೈ-ವೀಕ್ಲಿ ವಿಶೇಷ ಎಕ್ಸ್ಪ್ರೆಸ್ ಜೂನ್ 1, 2026ರಿಂದ ಜೂನ್ 29, 2026ರವರೆಗೆ ಪ್ರತಿ ಸೋಮವಾರ ಮತ್ತು ಶನಿವಾರ ಯಶವಂತಪುರದಿಂದ ಸಂಚರಿಸಲಿದೆ.
ಹಾಗೆಯೇ, ರೈಲು ಸಂಖ್ಯೆ 06578 ವಿಜಯಪುರ–ಯಶವಂತಪುರ ಬೈ-ವೀಕ್ಲಿ ವಿಶೇಷ ಎಕ್ಸ್ಪ್ರೆಸ್ ಜೂನ್ 2, 2026ರಿಂದ ಜೂನ್ 30, 2026ರವರೆಗೆ ಪ್ರತಿ ಮಂಗಳವಾರ ಮತ್ತು ಭಾನುವಾರ ವಿಜಯಪುರದಿಂದ ಸಂಚರಿಸಲಿದೆ.
ರೈಲು ಸಂಖ್ಯೆ 06577 ಯಶವಂತಪುರದಿಂದ ಸಂಜೆ 6.15ಕ್ಕೆ ಹೊರಟು ಮರುದಿನ ಬೆಳಗ್ಗೆ 5.15ಕ್ಕೆ ವಿಜಯಪುರ ತಲುಪಲಿದೆ. ವಾಪಸ್ ಪ್ರಯಾಣದಲ್ಲಿ ರೈಲು ಸಂಖ್ಯೆ 06578 ವಿಜಯಪುರದಿಂದ ಸಂಜೆ 5.00ಕ್ಕೆ ಹೊರಟು ಮರುದಿನ ಬೆಳಗ್ಗೆ 4.10ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ಎರಡೂ ದಿಕ್ಕುಗಳಲ್ಲಿ ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್ಎಂಎಂ ಹಾವೇರಿ, ಗದಗ್ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಹಾಗೂ ಬಸವನ ಬಾಗೇವಾಡಿ ರಸ್ತೆ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಇದು ಸಹಕಾರಿಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸೇವೆಯಿಂದ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಇತರೆ ಅಗತ್ಯಗಳಿಗಾಗಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಪ್ರಯಾಣದ ಆಯ್ಕೆಗಳು ಹೆಚ್ಚಲಿವೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ತಿಳಿಸಿದೆ.
