ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿ ಆದೇಶಿಸಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನುಸಾರ ಸರ್ಕಾರಿ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ತನಿಖೆಗ ರಾಜ್ಯಪಾಲರಿಂದ ಪೂರ್ವಾನುಮತಿ ಪಡೆದಿಲ್ಲ ಎಂಬ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಅರ್ಜಿ ವಿಚಾರಣೆ ವೇಳೆ ತಾವೇ ಖುದ್ದು ವಾದ ಮಂಡಿಸಿದ್ದ ಅಬ್ರಹಾಂ, ಭ್ರಷ್ಟಾಚಾರ ಆರೋಪಕ್ಕೆ ಪೂರಕವಾಗಿ ಕೆಲ ಬ್ಯಾಂಕ್ ದಾಖಲೆಗಳು ಹಾಗೂ ವಾಟ್ಸಪ್ ಚಾಟ್ಗಳನ್ನು ಒಳಗೊಂಡ ದಾಖಲೆಗಳನ್ನು ಸಲ್ಲಿಸಿದ್ದರು.
ಇಂದು ಆದೇಶ ಪ್ರಕಟಿಸಿದ ನ್ಯಾಯಾಲಯ ಆರೋಪಿತರ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ದೂರು ಸಲ್ಲಿಸಿದ್ದರಿಂದ ಎಸಿಬಿ ಅರ್ಜಿದಾರರ ಮನವಿ ತಿರಸ್ಕರಿಸಿದೆ. ಹೀಗಾಗಿ ಅರ್ಜಿದಾರರು ಮಾಡಿರುವ ಮನವಿಯಂತೆ ತನಿಖೆಗೆ ನಿರ್ದೇಶಿಸಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
2021ರ ಜೂನ್ 6ರಂದು ಟಿ.ಜೆ.ಅಬ್ರಹಾಂ ಭ್ರಷ್ಟಚಾರ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ಆಪ್ತರಾದ ಶಶಿಧರ ಮರಡಿ, ವಿರೂಪಾಕ್ಷಪ್ಪ ಯಮಕನಮರಡಿ, ಸಂಜಯಶ್ರೀ, ಚಂದ್ರಕಾಂತ್ ರಾಮಲಿಂಗಂ, ಸಚಿವ ಎಸ್.ಟಿ. ಸೋಮಶೇಖರ್, ಐಎಎಸ್ ಅಧಿಕಾರಿ ಡಾ. ಜಿ.ಸಿ ಪ್ರಕಾಶ್, ಕ್ರೆಸೆಂಟ್ ಹೋಟೆಲ್ ಮಾಲೀಕರಾದ ಕೆ.ರವಿ ವಿರುದ್ಧ ತನಿಖೆ ಮಾಡುವಂತೆ ಕೋರಿ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯಕ್ಕೆ (ನಗರದ 82 ನೇ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಕೋರ್ಟ್) ಖಾಸಗಿ ದೂರು ಸಲ್ಲಿಸಿದ್ದರು.