ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆ. ಚಿತ್ರ: ಬೆಂಗಳೂರು ಉತ್ತರ ನಗರ ಪಾಲಿಕೆ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್-2027) ಕುರಿತ ಮಾರ್ಗಸೂಚಿಗಳು ಮತ್ತು ವಿವಿಧ ಅಂಶಗಳನ್ನು ಚರ್ಚಿಸಲು ಬೆಂಗಳೂರು ಉತ್ತರ ನಗರ ಪಾಲಿಕೆ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ ಎಂದು ಪಾಲಿಕೆ ಹೊರಡಿಸಿದ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರೂ ಬೆಂಗಳೂರು ಉತ್ತರ ಜಿಲ್ಲೆಯ ಅಪರ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಒಂದೇ ಕುಟುಂಬದ ಸದಸ್ಯರಿಗೆ ಬೇರೆ ಬೇರೆ ಮತಗಟ್ಟೆಗಳನ್ನು ಹಂಚಿಕೆ ಮಾಡುವ ಕುರಿತ ಆತಂಕಗಳನ್ನು ಚರ್ಚಿಸಲಾಯಿತು ಎಂದು ಪ್ರಕಟಣೆ ಹೇಳಿದೆ. ಸಾಧ್ಯವಿರುವೆಡೆ ಒಂದೇ ಕುಟುಂಬದ ಮತದಾರರಿಗೆ ಒಂದೇ ಮತಗಟ್ಟೆ ಹಂಚಿಕೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಯಿತು; ಇದರಿಂದ ಮತದಾರರಿಗೆ ಅನುಕೂಲವಾಗಲಿದ್ದು, ತಮ್ಮ ವಸತಿ ಪ್ರದೇಶಗಳಿಂದ ದೂರದಲ್ಲಿರುವ ಮತಗಟ್ಟೆಗಳಿಗೆ ಪ್ರಯಾಣಿಸುವುದು ತಪ್ಪುತ್ತದೆ.
ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಮತದಾನ ವ್ಯವಸ್ಥೆ, ಮತಗಟ್ಟೆಗಳ ಹಂಚಿಕೆ ಹಾಗೂ ಒಟ್ಟಾರೆ ಚುನಾವಣಾ ಪ್ರಕ್ರಿಯೆ ನಿರ್ವಹಣೆ ಕುರಿತೂ ಚರ್ಚೆ ನಡೆಯಿತು.
ಅರ್ಹ ನಾಗರಿಕರನ್ನು ಗುರುತಿಸಲು ಹಾಗೂ ಅನರ್ಹ ವ್ಯಕ್ತಿಗಳ ಹೆಸರು ಪಟ್ಟಿಗೆ ಸೇರದಂತೆ ತಡೆಯಲು ಮತದಾರರ ವಿವರಗಳ ಎಚ್ಚರಿಕೆಯ ಪರಿಶೀಲನೆ ಮತ್ತು ಸೂಕ್ತ ಪರಿಶ್ರಮ ಅಗತ್ಯ ಎಂದು ಆಯುಕ್ತರು ಒತ್ತಿ ಹೇಳಿದರು.
ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ಮತದಾರರ ವಿವರ ತಿದ್ದುಪಡಿ ಅಥವಾ ಮಾರ್ಪಾಡಿಗೆ ಸಂಬಂಧಿಸಿದ ನಮೂನೆ 6, 7 ಮತ್ತು 8 ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು. ನಮೂನೆ 8ರಲ್ಲಿ ಅಗತ್ಯ ಬದಲಾವಣೆಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಲಾಯಿತು ಎಂದು ಪ್ರಕಟಣೆ ಹೇಳಿದೆ.
ಎಸ್‌ಎಸ್‌ಆರ್ ಪ್ರಕ್ರಿಯೆ ಸುಗಮ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ನಡೆಯಲು ಸಹಕರಿಸುವಂತೆ ಸುನೀಲ್ ಕುಮಾರ್ ರಾಜಕೀಯ ಪ್ರತಿನಿಧಿಗಳನ್ನು ಕೋರಿದರು. ಅಪರ ಆಯುಕ್ತ (ಕಂದಾಯ) ಸತೀಶ್ ಕುಮಾರ್, ಜಂಟಿ ಆಯುಕ್ತೆ ಪಲ್ಲವಿ, ಕಂದಾಯ ಅಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
