ಬೆಂಗಳೂರಿನಲ್ಲಿ ಶುಕ್ರವಾರ ಸಹಿ ಹಾಕಿದ ತಿಳುವಳಿಕೆ ಒಪ್ಪಂದದ ದಾಖಲೆಗಳೊಂದಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮತ್ತು ಸಹಾಸ್ ಪ್ರತಿನಿಧಿಗಳು.
ಬೆಂಗಳೂರು: ನಗರದ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಶುಕ್ರವಾರ ಸಹಾಸ್ ಸಂಸ್ಥೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ. ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮತ್ತು ಸಹಾಸ್ ಸಿಇಒ ಅರ್ಚನಾ ತ್ರಿಪಾಠಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಘನತ್ಯಾಜ್ಯ ನಿರ್ವಹಣೆಯಲ್ಲಿ ನಗರದಾದ್ಯಂತ ಪಾಲಿಕೆಯ ಸಾಮರ್ಥ್ಯ ಹೆಚ್ಚಿಸುವ ಹಾಗೂ ಸುಸ್ಥಿರ ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಈ ಪಾಲುದಾರಿಕೆಯಡಿ ಸಹಾಸ್ ಸಂಸ್ಥೆ ತಾಂತ್ರಿಕ ಸಲಹಾ ಹಾಗೂ ಬೆಂಬಲ ಪಾಲುದಾರನಾಗಿ ಏಳು ಪ್ರಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡಲಿದೆ. ಇವುಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ, ಗುತ್ತಿಗೆದಾರರು ಹಾಗೂ ಇತರ ಪಾಲುದಾರರ ನಡುವೆ ಉತ್ತಮ ಸಮನ್ವಯ ಸಾಧಿಸಿ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ವ್ಯವಸ್ಥೆ ಸುಧಾರಿಸುವುದು ಹಾಗೂ ಜಿಬಿಎ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಕ್ಷೇತ್ರ ಮಟ್ಟದ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುವುದು ಸೇರಿವೆ.
ವಾರ್ಡ್ ಮಟ್ಟದ ಘನತ್ಯಾಜ್ಯ ನಿರ್ವಹಣಾ ಸೂಕ್ಷ್ಮ ಯೋಜನೆಗಳನ್ನು ಪರಿಶೀಲಿಸಿ ಬಲಪಡಿಸಲು ಹಾಗೂ ಕಾರ್ಯಾಚರಣಾ ಮಾರ್ಗಸೂಚಿ ಮತ್ತು ಪ್ರಮಾಣಿತ ಕಾರ್ಯವಿಧಾನಗಳನ್ನು (ಎಸ್‌ಒಪಿ) ರೂಪಿಸಲು ಸಹಾಸ್ ನೆರವು ನೀಡಲಿದೆ. ಮೂಲದಲ್ಲೇ ತ್ಯಾಜ್ಯ ವಿಂಗಡಣೆ, ಜವಾಬ್ದಾರಿಯುತ ವಿಲೇವಾರಿ ಮತ್ತು ಸಮುದಾಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳ ಜೊತೆಗೆ ಜಿಪಿಎಸ್ ಆಧಾರಿತ ವಾಹನ ಟ್ರ್ಯಾಕಿಂಗ್, ಡಿಜಿಟಲ್ ಮೇಲ್ವಿಚಾರಣೆ ಮತ್ತು ಗುತ್ತಿಗೆದಾರರ ಕಾರ್ಯಕ್ಷಮತೆ ಮೌಲ್ಯಮಾಪನ ಅಳವಡಿಸಲು ಯೋಜಿಸಲಾಗಿದೆ. ಸೇವಾ ವಿತರಣೆಯಲ್ಲಿ ಹೊಣೆಗಾರಿಕೆ ಹೆಚ್ಚಿಸಲು ಕಾರ್ಯಕ್ಷಮತೆ ಸೂಚಕಗಳು, ವರದಿ ಹಾಗೂ ಪರಿಶೀಲನಾ ಚೌಕಟ್ಟುಗಳನ್ನು ರೂಪಿಸಲಾಗುತ್ತದೆ.
ಇದು ಸಂಪೂರ್ಣವಾಗಿ ಹಣಕಾಸು ರಹಿತ ಪಾಲುದಾರಿಕೆಯಾಗಿದ್ದು, ಸಹಾಸ್ ಯಾವುದೇ ವೃತ್ತಿಪರ ಶುಲ್ಕ, ಸಲಹಾ ಶುಲ್ಕ ಅಥವಾ ಮರುಪಾವತಿ ನಿರೀಕ್ಷಿಸದೆ ಸ್ವಯಂಪ್ರೇರಿತವಾಗಿ ತಾಂತ್ರಿಕ ಸಲಹೆ ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸಹಾಸ್ ಅನ್ನು ವಿವರಿಸಿದ ಪ್ರಕಟಣೆ, 2001ರಲ್ಲಿ ಸ್ಥಾಪನೆಯಾದ ಈ ಲಾಭರಹಿತ ಸಂಸ್ಥೆ ದೇಶದ 11 ರಾಜ್ಯಗಳು, 12 ನಗರಗಳು ಮತ್ತು 528 ಗ್ರಾಮ ಪಂಚಾಯಿತಿಗಳಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆ ಮತ್ತು ವೃತ್ತೀಯ ಆರ್ಥಿಕತೆ ಪರಿಹಾರಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ. ಬೆಂಗಳೂರಿನ 21 ವಾರ್ಡ್‌ಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಸಂಸ್ಥೆ, ಕೋರಮಂಗಲದಲ್ಲಿ ‘ಕಸ ರಸ’ ತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪನೆಗೆ, ‘ಕಸ ಕಿಯೋಸ್ಕ್’ ಮಾದರಿ ಪರಿಚಯಿಸಲು, ಕೋರಮಂಗಲ ಜೈವಿಕ ಮೀಥೇನೀಕರಣ ಘಟಕದ ಸಾಮರ್ಥ್ಯವನ್ನು ದಿನಕ್ಕೆ 4 ಟನ್‌ನಿಂದ 8 ಟನ್‌ಗೆ ಹೆಚ್ಚಿಸಲು ಹಾಗೂ ಇ-ತ್ಯಾಜ್ಯ ಮತ್ತು ಬೃಹತ್ ತ್ಯಾಜ್ಯ ಸಂಗ್ರಹಣೆಗೆ ಕೊಡುಗೆ ನೀಡಿದೆ ಎಂದು ತಿಳಿಸಿದೆ.
