ಒಂದೇ ಬಾರಿಗೆ ಎಲ್ಲವನ್ನೂ ಅನ್ ಲಾಕ್ ಮಾಡಿದರೆ ಸೋಂಕಿತರ ಸಂಖ್ಯೆ ಹೆಚ್ಚಬಹುದು
ಬೆಂಗಳೂರು:
ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಅನ್ ಲಾಕ್ ಸ್ವರೂಪದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೆಲ ಚಟುವಟಿಕೆಗೆ ನಿರ್ಬಂಧ ಹೇರಿ, ಇನ್ನೂ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಅನ್ ಲಾಕ್ ಯಾವ ರೀತಿ ಇರಬೇಕೆಂದು ತೀರ್ಮಾನ ಮಾಡುತ್ತಾರೆ. ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ, 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಇದ್ದರೆ ಅನ್ ಲಾಕ್ ಮಾಡಬಹುದೆಂಬ ಅಭಿಪ್ರಾಯ ಇದೆ ಎಂದರು.
ಅನ್ ಲಾಕ್ ಬಗ್ಗೆ ಯಾವುದೇ ಗೊಂದಲ ಇಲ್ಲ. ಮಹಾರಾಷ್ಟ್ರದಲ್ಲಿ ಪ್ರಕರಣ ಇಳಿಕೆಯಾದ ಬಳಿಕ ಅನ್ ಲಾಕ್ ಕಡೆಗೆ ಹೋಗಿದ್ದಾರೆ. ಆ ರಾಜ್ಯಕ್ಕಿಂತ ಬಹಳ ಬೇಗ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಕೆಲ ದೇಶಗಳಲ್ಲಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿಲ್ಲ. ಅನೇಕ ಮಕ್ಕಳಿಗೆ ಮನೆ ಆರೈಕೆ ಮಾಡಲಾಗಿದೆ ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಆದರೂ ರಾಜ್ಯದಲ್ಲಿ ಮಕ್ಕಳ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 2,281 ಪ್ರಕರಣಗಳಿದ್ದು, 1,948 ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, 102 ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆಕ್ಸಿಜನ್ ಸಾಂದ್ರಕ ಕೊಡುಗೆ
ಹರ್ಬಲೈಫ್ ನ್ಯೂಟ್ರೀಶಿಯನ್ ಕಂಪನಿಯು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ 150 ಆಕ್ಸಿಜನ್ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದೆ. ಸಪ್ತ ಸಚಿವರ ನಿವಾಸದಲ್ಲಿ ಸಚಿವರನ್ನು ಭೇಟಿಯಾದ ಕಂಪನಿಯ ಪ್ರತಿನಿಧಿಗಳು ಕಾನ್ಸಂಟ್ರೇಟರ್ ಗಳನ್ನು ಹಸ್ತಾಂತರಿಸಿದರು.