ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಂಗಳೂರು ನಮ್ಮ ಮೆಟ್ರೋ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಮೆಟ್ರೋ ಯೋಜನೆಯ ಮೊದಲ ಹಂತದ ಕಾಮಗಾರಿಗಳು 2011 ರಲ್ಲಿ ಪ್ರಾರಂಭವಾಗಿ 2017 ರಲ್ಲಿ ಪೂರ್ಣಗೊಂಡು ಪ್ರಸ್ತುತ 48.3 ಕಿ.ಮೀ ಉದ್ದದ ಮಾರ್ಗದಲ್ಲಿ ಸಾರ್ವಜನಿಕರಿಗೆ ಸೇವೆ ಲಭ್ಯವಿದೆ.
66.1 ಕಿಮೀ ಉದ್ದದ ಮೆಟ್ರೋ ರೈಲು ಮಾರ್ಗ ನಿರ್ಮಾಣದ ಹಂತದಲ್ಲಿದ್ದು, ಈವರೆಗೆ 33,070 ಕೋಟಿ ರೂ. ವೆಚ್ಚವಾಗಿದೆ. 48.3 ಕಿಮೀ ಮಾರ್ಗದಲ್ಲಿ ಸಂಚರಿಸುತ್ತಿರುವ ಮೆಟ್ರೋ ರೈಲುಗಳಿಂದಾಗಿ ವಾರ್ಷಿಕ 434 ಕೋಟಿ ರೂ.ಆದಾಯ ದೊರೆಯುತ್ತಿದ್ದು, ಈವರೆಗೆ 1659 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಮೆಟ್ರೋ ರೈಲುಗಳಲ್ಲಿ ದಿನವೊಂದರಲ್ಲಿ ಅತಿ ಹೆಚ್ಚು ಸಂಚರಿಸಿದ ಪ್ರಯಾಣಿಕರ ಸಂಖ್ಯೆ 6.1 ಲಕ್ಷ ವಿದ್ದು, 1.67 ಕೋಟಿ ರೂ. ಆದಾಯ ಸಂಗ್ರಹಣೆ ದಾಖಲೆಯಾಗಿದೆ. ತಿಂಗಳೊಂದಕ್ಕೆ ಸರಾಸರಿ 10.14 ಕೋಟಿ ರೂ. ಆದಾಯ ಸಂಗ್ರಹಣೆಯಾಗುತ್ತಿದೆ. 2021ರ ಏಪ್ರಿಲ್ 23 ರಿಂದ ಕೋವಿಡ್ ಸಾಂಕ್ರಾಮಿಕದ ಕಾರಣ ಮೆಟ್ರೋ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನಿರ್ಬಂಧಗಳ ಸಡಿಲಿಕೆ ನಂತರ ಮತ್ತೆ ಮೆಟ್ರೋ ಸಂಚಾರ ಪ್ರಾರಂಭಿಸಲು ಬಿಎಂಆರ್ ಸಿಎಲ್ ಸನ್ನದ್ಧವಾಗಿದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಗಳನ್ನು ನಗರದ ಎಲ್ಲಾ ಭಾಗಗಳಲ್ಲಿ ಅಳವಡಿಸಲು ಹಂತ 2, ಹಂತ 2 ಎ ಹಾಗೂ ಹಂತ 2 ಬಿ ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಹಂತ 2 ರ ಯಲಚೇನಹಳ್ಳಿ- ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ 6 ಕಿ.ಮೀ ಸಂಚಾರಕ್ಕೆ ಜನವರಿಯಲ್ಲಿ ಮುಕ್ತಗೊಳಿಸಿದ್ದು, ಮೈಸೂರು ರಸ್ತೆ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ ಜುಲೈ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.
ಪ್ರಯಾಣ ವೆಚ್ಚದ ಸಂಗ್ರಹದಿಂದ ಮಾತ್ರ ಮೆಟ್ರೋ ಲಾಭ ಗಳಿಸಲಾಗದು, ಮೆಟ್ರೋ ಮಾರ್ಗದ ವ್ಯಾಪ್ತಿಯಲ್ಲಿ ಲಭ್ಯವಿರುವ ವಾಣಿಜ್ಯ ಪ್ರದೇಶಗಳು ಹಾಗೂ ನಿಲ್ದಾಣಗಳಲ್ಲಿ ಆದಾಯಜನಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ನಮ್ಮ ಮೆಟ್ರೋ ಲಾಭದತ್ತ ಸಾಗಬೇಕೆಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಕೂಡ ಸಲಹೆ ಮಾಡಿದರು.
ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ನಗರಾಭಿವೃದ್ಧಿಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ BMRCL ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗರ್ಗ್ ಉಪಸ್ಥಿತರಿದ್ದರು. (2/2)
— CM of Karnataka (@CMofKarnataka) June 9, 2021
ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಕಾಲಬದ್ಧವಾಗಿ ಪರಿಶೀಲನಾ ಸಭೆಗಳನ್ನು ನಡೆಸಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಮೂಡಿಸಲು ಮಾನ್ಯ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಸಬ್ ಅರ್ಬನ್ ರೈಲು ಯೋಜನೆಗಳು
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿದ್ದಲ್ಲಿ ಸಂಚಾರದ ಮೇಲಿನ ಒತ್ತಡವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ.
ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ನಡುವಿನ 25.01 ಕಿಮೀ. ಉದ್ದದ ಮಾರ್ಗದ ಟೆಂಡರ್ ನ್ನು 2021ರ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸುವ ಉದ್ದೇಶವಿದ್ದು , ಈ ಗಡುವಿನೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.
ರೈಲ್ವೆ ಮಾರ್ಗ ದ್ವಿಪಥೀಕರಣ(ಡಬ್ಲಿಂಗ್) ಯೋಜನಯಡಿ ಬೈಯ್ಯಪ್ಪನಹಳ್ಳಿ-ಹೊಸೂರು (48 ಕಿ.ಮೀ), ಯಶವಂತಪುರ – ಚೆನ್ನಸಂದ್ರ (21.70 ಕಿ.ಮೀ) ಕಾಮಗಾರಿಗಳು ಅನುಷ್ಠಾನದಲ್ಲಿವೆ. 323 ಕೋಟಿ. ರೂ.ಗಳಿಗೆ ಟೆಂಡರ್ ನೀಡಲಾಗಿದೆ. ಈವರೆಗೆ 45 ಲಕ್ಷ ಘನ ಮೀ. ವ್ಯಾಪ್ತಿಯಲ್ಲಿ ಭೂಮಿಯ ಕೆಲಸಗಳು ನಡೆದಿವೆ. 12 ಸೇತುವೆಗಳ ನಿರ್ಮಾಣ ಪೂರ್ಣಗೊಂಡಿದೆ. 20 ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗಳ ಅನುಷ್ಠಾನ ಕಾಲಬದ್ಧವಾಗಿ ಆಗಬೇಕು. ಆ ಕಡೆ ತೀವ್ರ ಗಮನ ಹರಿಸಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.