ಬೆಂಗಳೂರು:
ರಾಜ್ಯ ಸಚಿವ ಸಂಪುಟಕ್ಕೆ ಇಂದು ನೂತನವಾಗಿ ಸಂಪುಟ ದರ್ಜೆಯ ಏಳು ಮಂತ್ರಿಗಳು ಸೇರ್ಪಡೆಗೊಂಡರು.
ರಾಜಭವನ ಗಾಜಿನ ಮನೆಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ಅವರು ನೂತನ ಸಚಿವರುಗಳಿಗೆ ಅಧಿಕಾರಪದ ಹಾಗೂ ಗೋಪ್ಯತೆ ಪ್ರಮಾಣವಚನ ಬೋಧಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಎಂ.ಟಿ.ಬಿ. ನಾಗರಾಜ್, ಸಿ. ಪಿ.ಯೋಗೇಶ್ವರ್ ಹಾಗೂ ಆರ್. ಶಂಕರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್. ಅಂಗಾರ ಅವರು ಮೊದಲ ಬಾರಿಗೆ ಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಬೆಂಗಳೂರಿನ ಮಹದೇವಪುರ ಕ್ಷೇತ್ರ ಶಾಸಕ ಅರವಿಂದ ಲಿಂಬಾವಳಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನ ಸಭಾಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಹಾಗೂ ಹುಕ್ಕೇರಿ ವಿಧಾನ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಅವರು ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಡಾ: ಅಶ್ವಥ್‍ನಾರಾಯಣ್ ಹಾಗೂ ಲಕ್ಷ್ಮಣ ಸಂಗಪ್ಪ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಅನೇಕ ಸಚಿವರುಗಳು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.