ಬೆಂಗಳೂರಿನ ಲೋಕಭವನದಲ್ಲಿ ಡಾ. ಸುಧಾ ಯಾದವ್ ಅವರಿಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಬು ಭಖ್ರು ಪ್ರಮಾಣ ವಚನ ಬೋಧಿಸಿದರು.
ಬೆಂಗಳೂರು: ಡಾ. ಸುಧಾ ಯಾದವ್ ಅವರು ಅಕ್ಟೋಬರ್ 16ರಂದು ಕರ್ನಾಟಕದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿ.ಎಸ್. ರಮಾದೇವಿ ಅವರ ನಂತರ ರಾಜ್ಯದ ರಾಜ್ಯಪಾಲ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಬು ಭಖ್ರು ಪ್ರಮಾಣ ವಚನ ಬೋಧಿಸಿದರು.
ನಿರ್ಗಮಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಧಾ ಯಾದವ್ ಅವರನ್ನು ನೂತನ ರಾಜ್ಯಪಾಲರಾಗಿ ನೇಮಿಸಿದ್ದರು. 1999ರಲ್ಲಿ ಅಧಿಕಾರ ಸ್ವೀಕರಿಸಿದ್ದ ರಮಾದೇವಿ ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದರು.
ಮುಖ್ಯಮಂತ್ರಿ, ನಿರ್ಗಮಿತ ರಾಜ್ಯಪಾಲರು ಭಾಗಿ
ಗೆಹ್ಲೋಟ್ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಮಾರಂಭದಲ್ಲಿ ಪಾಲ್ಗೊಂಡರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾಧಿ ಟಿ. ನಾರಾಯಣಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಹಾಜರಿದ್ದರು.
ಸಂಬಂಧಿತ ಸುದ್ದಿ: ಸುಧಾ ಯಾದವ್ ಅವರ ರಾಜ್ಯಪಾಲರ ನೇಮಕ ಸ್ವಾಗತಿಸಿದ ಕುಮಾರಸ್ವಾಮಿ
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧನ ಪತ್ನಿ
ಸುಧಾ ಯಾದವ್ ಅವರ ಪತಿ ಸುಖಬೀರ್ ಸಿಂಗ್ ಯಾದವ್ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಉಪ ಕಮಾಂಡೆಂಟ್ ಆಗಿದ್ದರು. 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳ ಫಿರಂಗಿ ದಾಳಿಗೆ ಎದುರಾಗಿ ಹೋರಾಡಿ ಹುತಾತ್ಮರಾಗಿದ್ದರು. ಅವರಿಗೆ ಮರಣೋತ್ತರವಾಗಿ ಸೇನಾ ಪದಕ ನೀಡಿ ಗೌರವಿಸಲಾಗಿತ್ತು.
ಚಿನ್ನದ ಪದಕ ವಿಜೇತೆ, ಮಹೇಂದ್ರಗಢದ ಮಾಜಿ ಸಂಸದೆ
ಸುಧಾ ಯಾದವ್ ಅವರು ಐಐಟಿ ರೂರ್ಕಿಯಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪೂರ್ಣಗೊಳಿಸಿ ಚಿನ್ನದ ಪದಕ ಪಡೆದಿದ್ದಾರೆ. ಅವರು ಪಿಎಚ್ಡಿ ಪದವೀಧರೆಯೂ ಆಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ರಾಜಕೀಯ ಪ್ರವೇಶಿಸಿದ ಅವರು, 1999ರಿಂದ 2004ರವರೆಗೆ ಹರ್ಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಸೇವೆ ಸಲ್ಲಿಸಿದ್ದರು.
ಸುಷ್ಮಾ ಸ್ವರಾಜ್ ಅವರ ನಂತರ ಬಿಜೆಪಿ ಸಂಸದೀಯ ಮಂಡಳಿಗೆ ಆಯ್ಕೆಯಾದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
