ಬೆಂಗಳೂರು:
ಸಚಿವ ಸಂಪುಟ ವಿಸ್ತರಣೆ ನಂತರ ಖಾತೆ ಹಂಚಿಕೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಹೆಣಗಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮತ್ತೆ ಖಾತೆಗಳಲ್ಲಿ ಬದಲಾವಣೆ ಮಾಡಿದ್ದಾರೆ.
ಖಾತೆ ಪುನರ್ ಹಂಚಿಕೆ ನಂತರ ವಲಸಿಗ ಸಚಿವರಿಂದ ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಮಣಿದ ಯಡಿಯೂರಪ್ಪಸಂಪುಟ ಸಹೋದ್ಯೋಗಿಗಳನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್ ಅವರಿಗೆ ಮೂಲ ಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ನೀಡಿ ತೃಪ್ತಿಪಡಿಸಿದ್ದಾರೆ.
ತಮ್ಮಿಂದ ವೈದ್ಯಕೀಯ ಖಾತೆ ಕಸಿದುಕೊಂಡ ಬೆಳವಣಿಗೆಯಿಂದ ತೀವ್ರ ಆಕ್ರೋಶಗೊಂಡಿದ್ದ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ವೈದ್ಯಕೀಯ ಇಲಾಖೆಯನ್ನು ನೀಡಿದ್ದಾರೆ.
ಸಣ್ಣ ನೀರಾವರಿ ಖಾತೆ ಕಸಿದುಕೊಂಡ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡು ಸಚಿವ ಸಂಪುಟ ಸಭೆಯಿಂದಲೇ ದೂರ ಉಳಿದಿದ್ದ ಜೆ.ಸಿ. ಮಾಧು ಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆಯನ್ನು ನೀಡಿದ್ದಾರೆ.
ಖಾತೆಗಳ ಮರು ಹಂಚಿಕೆ ಮಾಡಿರುವ ಶಿಫಾರಸ್ಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಅವರು ಅಸಮಾಧಾನವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.
ತಮ್ಮ ಖಾತೆ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.
ಡಾ.ಕೆ. ಸುಧಾಕರ್ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೆ.ಸಿ. ಮಾಧು ಸ್ವಾಮಿ ತಮ್ಮ ಬಳಿ ಇದ್ದ ಖಾತೆ ವಾಪಸ್ ಪಡೆದಿದ್ದಕ್ಕೆ ತಮಗೆ ಬೇಸರವಾಗಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. UNI