ಬೆಂಗಳೂರಿನ ಶೇಷಾದ್ರಿಪುರಂನ ಮಾತೃಶ್ರೀ ಮನೋವಿಕಾಸ ಕೇಂದ್ರದಲ್ಲಿ ಮಕ್ಕಳೊಂದಿಗೆ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಸದಸ್ಯರು.
ಬೆಂಗಳೂರು: ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ (ಎಸ್‌ಡಬ್ಲ್ಯುಆರ್‌ಡಬ್ಲ್ಯುಡಬ್ಲ್ಯುಒ), ಬೆಂಗಳೂರು ವಿಭಾಗವು ಶನಿವಾರ ಶೇಷಾದ್ರಿಪುರಂನಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ವಿಶೇಷ ವಸತಿ ಶಾಲೆಯಾದ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿ ನೆರವು ನೀಡಿತು ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಸದಸ್ಯರು ಮಕ್ಕಳೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಸಮಯ ಕಳೆದು, ಸಂಸ್ಥೆಯ ಅಗತ್ಯಗಳನ್ನು ಪೂರೈಸಲು ನೆರವಾಗುವ ಉದ್ದೇಶದಿಂದ ದಿನಸಿ ಸಾಮಗ್ರಿ, ತೊಟ್ಟಿಲು, ಸಮವಸ್ತ್ರ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿದರು ಎಂದು ಪ್ರಕಟಣೆ ಹೇಳಿದೆ.
ಕಾರ್ಯಕ್ರಮದ ನೇತೃತ್ವವನ್ನು ಬೆಂಗಳೂರು ವಿಭಾಗದ ಎಸ್‌ಡಬ್ಲ್ಯುಆರ್‌ಡಬ್ಲ್ಯುಡಬ್ಲ್ಯುಒ ಅಧ್ಯಕ್ಷೆ ರೀನಾ ಸಿಂಗ್ ವಹಿಸಿದ್ದರು. ಉಪಾಧ್ಯಕ್ಷೆಯರಾದ ಅಮಿತಾ ಮೋಹನ್‌ಪುರಿಯಾ ಮತ್ತು ಜಯಶ್ರೀ, ಖಜಾಂಚಿ ಭಾಗ್ಯಶ್ರೀ, ಕಾರ್ಯದರ್ಶಿ ಸ್ವಾತಿ ಪ್ರಿಯಾ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿ ಶ್ವೇತಾ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಮಕ್ಕಳ ಆರೈಕೆ, ಯೋಗಕ್ಷೇಮ ಮತ್ತು ಒಟ್ಟಾರೆ ಅಭಿವೃದ್ಧಿಗೆ ಸಂಘಟನೆ ನೆರವು ಮುಂದುವರಿಸಲಿದೆ ಎಂದು ಪ್ರಕಟಣೆ ಹೇಳಿದೆ.
