Home ತಂತ್ರಜ್ಞಾನ ಟ್ರಾಯ್: 4ಜಿ ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋಗೆ ಮತ್ತೊಮ್ಮೆ ಮೊದಲ ಸ್ಥಾನ

ಟ್ರಾಯ್: 4ಜಿ ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋಗೆ ಮತ್ತೊಮ್ಮೆ ಮೊದಲ ಸ್ಥಾನ

72
0

ನವದೆಹಲಿ:

ಪ್ರತಿ ಸೆಕೆಂಡಿಗೆ ಸರಾಸರಿ 20.7 ಮೆಗಾಬೈಟ್ ಡೌನ್‌ಲೋಡ್ ವೇಗವನ್ನು ಹೊಂದಿರುವ ರಿಲಯನ್ಸ್ ಜಿಯೋ, 4ಜಿ ವಿಭಾಗದಲ್ಲಿ ತನ್ನ ಮುಂದಾಳತ್ವ ಕಾಯ್ದುಕೊಳ್ಳುವುದನ್ನು ಮುಂದುವರಿಸಿದೆ. ಮೇ ತಿಂಗಳಿನ ಪಟ್ಟಿಯಲ್ಲಿ ವೊಡಾಫೋನ್ ಐಡಿಯಾ 6.7 ಎಂಬಿಪಿಎಸ್ ಡೇಟಾ ವೇಗದೊಂದಿಗೆ ಅಪ್‌ಲೋಡ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ.

ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಅದು ತನ್ನ ಅತಿ ಸಮೀಪದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾಕ್ಕಿಂತಲೂ ಮೂರು ಪಟ್ಟು ಅಧಿಕವಾಗಿದೆ. ವೊಡಾಫೋನ್ ಐಡಿಯಾ 6.3 ಎಂಬಿಪಿಎಸ್ ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿದೆ.

2018ರ ಆಗಸ್ಟ್‌ನಲ್ಲಿ ವೊಡಾಫೋನ್ ಮತ್ತು ಐಡಿಯಾಗಳು ವಿಲೀನಗೊಂಡ ಬಳಿಕ ಇದೇ ಮೊದಲ ಬಾರಿಗೆ ಟ್ರಾಯ್ ಈ ಕಂಪೆನಿಗಳ ನೆಟ್‌ವರ್ಕ್ ವೇಗವನ್ನು ಜತೆಗೂಡಿಸಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜೂನ್ 8ರಂದು ಪ್ರಕಟಿಸಿರುವ ವರದಿ ಪ್ರಕಾರ, ಸರಾಸರಿ 4.7 ಎಂಬಿಪಿಎಸ್ ವೇಗದೊಂದಿಗೆ ಏರ್‌ಟೆಲ್ ಅತ್ಯಂತ ಕಡಿಮೆ ವೇಗದ ಸ್ಥಾನ ಪಡೆದುಕೊಂಡಿದೆ.

ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಅಥವಾ ವಿಡಿಯೋಗಳನ್ನು ರವಾನಿಸಲು ಸಹಾಯ ಮಾಡುತ್ತದೆ.

ಟ್ರಾಯ್ ವರದಿ ಪ್ರಕಾರ, ವೊಡಾಫೋನ್ ಐಡಿಯಾ ಮೇ ತಿಂಗಳಲ್ಲಿ ಸರಾಸರಿ 6.3 ಎಂಬಿಪಿಎಸ್ ಅಪ್‌ಲೋಡ್ ವೇಗ ಹೊಂದಿತ್ತು. ರಿಲಯನ್ಸ್ ಜಿಯೋ 4.2 ಎಂಬಿಪಿಎಸ್‌ನೊಂದಿಗೆ ಎರಡನೆಯ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್ 3.6 ಎಂಬಿಪಿಎಸ್ ಅಪ್‌ಲೋಡ್ ವೇಗ ಹೊಂದಿದೆ.

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ ಆಯ್ದ ಪ್ರದೇಶಗಳಲ್ಲಿ 4ಜಿ ಸೇವೆ ಆರಂಭಿಸಿದ್ದರೂ, ಅದರ ನೆಟ್‌ವರ್ಕ್‌ ವೇಗವನ್ನು ಟ್ರಾಯ್ ಪಟ್ಟಿಯಲ್ಲಿ ನಮೂದಿಸಿಲ್ಲ.

ತನ್ನ ಮೈ ಸ್ಪೀಡ್ ಆಪ್‌ನಲ್ಲಿನ ರಿಯಲ್ ಟೈಮ್ ಆಧಾರದಲ್ಲಿ ಭಾರತದಾದ್ಯಂತ ಸಂಗ್ರಹಿಸಿದ ದತ್ತಾಂಶಗಳ ಲೆಕ್ಕಾಚಾರದಲ್ಲಿ ಟ್ರಾಯ್, ಸರಾಸರಿ ವೇಗವನ್ನು ನಿರ್ಧರಿಸುತ್ತದೆ.

LEAVE A REPLY

Please enter your comment!
Please enter your name here