ತುಂಗಭದ್ರಾ ಅಣೆಕಟ್ಟಿನ ಹೊಸ ಕ್ರೆಸ್ಟ್ ಗೇಟ್ಗಳ ಉದ್ಘಾಟನೆ ಮೇ 15ಕ್ಕೆ: ಡಿಕೆ ಶಿವಕುಮಾರ್
ಹೊಸಪೇಟೆ, ಮೇ 3: ತುಂಗಭದ್ರಾ ಅಣೆಕಟ್ಟಿನಲ್ಲಿ ಅಳವಡಿಸಲಾದ 33 ಹೊಸ ಕ್ರೆಸ್ಟ್ ಗೇಟ್ಗಳ ಉದ್ಘಾಟನೆ ಮೇ 15ರಂದು ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗೇಟ್ಗಳ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಎಲ್ಲಾ 33 ಗೇಟ್ಗಳ ಅಳವಡಿಕೆ ಪೂರ್ಣಗೊಂಡಿದ್ದು, ಸಣ್ಣ ಮಟ್ಟದ ಕೆಲಸ ಮಾತ್ರ ಬಾಕಿಯಿದೆ. ಅದನ್ನು ಮೇ 7ರೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಯೋಜನೆಯಿಂದ ಸುಮಾರು 7.50 ಲಕ್ಷ ರೈತರ ಬದುಕು ಸುರಕ್ಷಿತವಾಗಿದ್ದು, ನಾಲ್ಕು ಜಿಲ್ಲೆಗಳ ರೈತರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ ಎಂದು ಹೇಳಿದರು. ಸದ್ಯ ಅಣೆಕಟ್ಟಿನಲ್ಲಿ 10.50 ಟಿಎಂಸಿ ನೀರು ಸಂಗ್ರಹವಿದ್ದು, ಮಳೆ ಬಂದರೆ ಎರಡು ತಿಂಗಳಲ್ಲಿ 44 ಟಿಎಂಸಿ ನೀರು ತುಂಬುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಈ ಯೋಜನೆಗೆ ಈಗಾಗಲೇ ₹54 ಕೋಟಿ ವೆಚ್ಚವಾಗಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು 64:34 ಅನುಪಾತದಲ್ಲಿ ವೆಚ್ಚ ಹಂಚಿಕೊಂಡಿವೆ ಎಂದು ಮಾಹಿತಿ ನೀಡಿದರು.
ಸುರಕ್ಷತೆ ಮತ್ತು ಆಧುನಿಕೀಕರಣಕ್ಕೆ ಒತ್ತು
ಅಣೆಕಟ್ಟಿನ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ₹300 ಕೋಟಿ ಅನುದಾನ ನೀಡಲಾಗಿದೆ. ಗೇಟ್ಗಳಿಗೆ ಸಂಬಂಧಿಸಿದ ಚೈನ್ಗಳು ಸರಿಯಾಗಿದ್ದರೂ ಸಹ ಅವುಗಳನ್ನು ಬದಲಾಯಿಸಲು ಸೂಚಿಸಲಾಗಿದೆ. ಈ ಕಾರ್ಯವನ್ನು ಚೆನ್ನೈ ಮೂಲದ ಸಂಸ್ಥೆಗೆ ವಹಿಸಲಾಗಿದೆ ಎಂದು ಹೇಳಿದರು.
ಈ ಹೊಸ ಗೇಟ್ಗಳು ಮುಂದಿನ 50 ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ ಎಂದು ಹೇಳಿದರು.
ವಿಮರ್ಶಕರಿಗೆ ತಕ್ಕ ಉತ್ತರ
ಈ ಯೋಜನೆಯ ಯಶಸ್ಸು ಕುರಿತು ಪ್ರತಿಕ್ರಿಯಿಸಿದ ಅವರು, “ರೈತರು ಒಂದು ಬೆಳೆ ತ್ಯಾಗ ಮಾಡಿ ಸಹಕರಿಸಿದ್ದಾರೆ. ಅವರ ಸಹಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಕೆಲಸದ ಮೂಲಕ ನಾವು ವಿಮರ್ಶಕರಿಗೆ ಉತ್ತರ ನೀಡಿದ್ದೇವೆ,” ಎಂದು ಹೇಳಿದರು.
ನವಲಿ ಯೋಜನೆ: ಆಂಧ್ರ ಸಿಎಂ ಭೇಟಿ ಸಿಗುತ್ತಿಲ್ಲ
ನವಲಿ ಸಮತೋಲನ ಜಲಾಶಯ ಯೋಜನೆ ಮತ್ತು ಸಿಲ್ಟ್ ತೆರವು ಕುರಿತು ಕೇಳಿದ ಪ್ರಶ್ನೆಗೆ, “ಈ ವಿಷಯದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಸಮಯ ನೀಡುತ್ತಿಲ್ಲ. ಈ ಬಗ್ಗೆ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು,” ಎಂದು ಹೇಳಿದರು.
ಸಿಲ್ಟ್ ತೆರವು ಬಗ್ಗೆ ಮಾತನಾಡಿ, “ಇದು ಸುಲಭ ಕೆಲಸವಲ್ಲ. ಖಾಸಗಿ ಸಂಸ್ಥೆಗಳ ಮೂಲಕ ಜಾಗತಿಕ ಟೆಂಡರ್ ಮೂಲಕವೇ ಈ ಕೆಲಸ ಮಾಡಬೇಕು,” ಎಂದು ವಿವರಿಸಿದರು.
ಅಣೆಕಟ್ಟು ಎತ್ತರ ಹೆಚ್ಚಿಸುವ ಪ್ರಸ್ತಾಪ ಇಲ್ಲ
ಅಣೆಕಟ್ಟಿನ ಎತ್ತರ ಹೆಚ್ಚಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಪ್ರಸ್ತುತ ವ್ಯವಸ್ಥೆಯಲ್ಲಿಯೇ ನೀರನ್ನು ಸಂರಕ್ಷಿಸುವತ್ತ ಗಮನ ಹರಿಸಿದ್ದೇವೆ,” ಎಂದರು.
ರಾಜ್ಯದಲ್ಲಿ ಬಾಕಿ ಇರುವ 86,000 ಫೈಲ್ಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸರ್ಕಾರ ಸೂಚನೆ ನೀಡಿದೆ ಎಂದು ಹೇಳಿದರು.
ಕೈಗಾರಿಕಾ ಮಾಲಿನ್ಯದಿಂದ ಅಣೆಕಟ್ಟು ನೀರು ಕಲುಷಿತವಾಗುತ್ತಿರುವ ಬಗ್ಗೆ ವರದಿ ಪಡೆಯಲಾಗುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
