ಅಕ್ಟೋಬರ್ 28ರಂದು ಹಲಸೂರಿನ ಎಂ.ವಿ. ಗಾರ್ಡನ್ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು. ಚಿತ್ರ: ಜಿಬಿಎ.
ಬೆಂಗಳೂರು: ಹಲಸೂರಿನ ಎಂ.ವಿ. ಗಾರ್ಡನ್ನಲ್ಲಿ ರಸ್ತೆ ಡಾಂಬರೀಕರಣ ಮಾಡುವಾಗ ಮಳೆನೀರು ರಸ್ತೆಯಲ್ಲಿ ನಿಲ್ಲದೆ ಚರಂಡಿಗೆ ಹರಿಯುವಂತೆ ಕಾಮಗಾರಿ ಕೈಗೊಳ್ಳಬೇಕು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ ಸೂಚಿಸಿದ್ದಾರೆ.
ಅಕ್ಟೋಬರ್ 28ರಂದು ಶಿವಾಜಿನಗರ ವಿಭಾಗದ ರಸ್ತೆ ಕಾಮಗಾರಿ ಪರಿಶೀಲಿಸಿದ ಅವರು, ಗುಣಮಟ್ಟ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದರು. ರಸ್ತೆ ಕಾಮಗಾರಿ ಸರಿಯಾಗಿ ನಡೆಸದ ಹಾಗೂ ಗುಂಡಿಗಳನ್ನು ಮುಚ್ಚದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
ನೀರು ಹರಿವು ಹಾಗೂ ನಿರ್ವಹಣೆಗೆ ಒತ್ತು
ಎಂ.ವಿ. ಗಾರ್ಡನ್ನಲ್ಲಿ ಪಾಲಿಕೆ ಜಾಗದಲ್ಲಿ ಹೊಸದಾಗಿ ನಿರ್ಮಿಸಿದ ಸಮುದಾಯ ಭವನವನ್ನೂ ಪರಿಶೀಲಿಸಿದರು. ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ಅನುಕೂಲವಾಗಿಸುವುದು, ಸಮರ್ಪಕ ನಿರ್ವಹಣೆ ಹಾಗೂ ಪಾಲಿಕೆಗೆ ಆದಾಯ ಬರುವ ರೀತಿಯಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಅದೇ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕ ಬಳಕೆಗೆ ನೀಡಲು ಮತ್ತು ಸರಿಯಾಗಿ ನಿರ್ವಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ ಆರ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಹಾಗೂ ಇತರ ಅಭಿಯಂತರರು ಹಾಜರಿದ್ದರು.
