ಬೆಂಗಳೂರು: ಯಲಹಂಕದ ಎಸ್ಎಫ್ಎಸ್ 208 ವಸತಿ ಬಡಾವಣೆಯಲ್ಲಿ ಅನಧಿಕೃತ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಅಕ್ಟೋಬರ್ 28ರಂದು ನಡೆದ ಕಾರ್ಯಾಚರಣೆಯಲ್ಲಿ ಎಂಟು ಸಂಸ್ಥೆಗಳನ್ನು ಮುಚ್ಚಲಾಗಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ತಿಳಿಸಿದೆ.
ಸಾರ್ವಜನಿಕರ ದೂರುಗಳು ಹಾಗೂ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ವಸತಿ ಪ್ರದೇಶಗಳ ವಾಣಿಜ್ಯ ಬಳಕೆಗೆ ಸಂಬಂಧಿಸಿದ ಅನ್ವಯಿಸುವ ನಿಯಮಗಳು ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳ ಪಾಲನೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಲಿಕೆ ಹೇಳಿದೆ.
ವಸತಿ ಬಡಾವಣೆಯ ವಾಣಿಜ್ಯ ಬಳಕೆ ಕುರಿತು ಕ್ರಮ
ಬಿಗ್ ಡ್ಯಾಡೀಸ್ ಬಿಬಿಕ್ಯೂ ಶವರ್ಮಾ, ಜೈನ್ ತಟ್ಟೆ ಇಡ್ಲಿ, ನಾಟಿ ಸ್ಟೈಲ್ ಬಿರಿಯಾನಿ ಮನೆ, ಆರ್ಎಸ್ ಮೋಟಾರ್ಸ್, ಡೆನ್ಸ್ ಸ್ಮೋಕ್, ಹೋಳಿಗೆ ಮನೆ, ಹೆಲ್ದಿ ಐಸ್ ಮತ್ತು ನಮ್ಮ ಬಿರಿಯಾನಿ ಸಂಸ್ಥೆಗಳನ್ನು ಮುಚ್ಚಿರುವುದಾಗಿ ಪ್ರಕಟಣೆ ತಿಳಿಸಿದೆ.
ನಿವಾಸಿಗಳಿಗೆ ಆಗುವ ತೊಂದರೆ ನಿವಾರಿಸುವುದು ಮತ್ತು ಸಂಬಂಧಿತ ಅನುಮತಿ ಇಲ್ಲದ ವಾಣಿಜ್ಯ ಬಳಕೆಯನ್ನು ನಿಯಂತ್ರಿಸುವುದು ಕಾರ್ಯಾಚರಣೆಯ ಉದ್ದೇಶ ಎಂದು ಪಾಲಿಕೆ ತಿಳಿಸಿದೆ. ಇಂತಹ ಉಲ್ಲಂಘನೆಗಳು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
